ಮೊಬೈಲ್ ನೆಟ್ ವರ್ಕ್ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : Apr 28, 2025 12:47 AM

ಸಾರಾಂಶ

ಶೃಂಗೇರಿ , ತಾಲೂಕಿನ ನೆಮ್ಮಾರು ಪಂಚಾಯಿತಿ ಬುಕುಡಿಬೈಲು ಗ್ರಾಮಸ್ಥರು ಬಿಎಸ್ಎನ್ಎಲ್ ನೆಟ್ ವರ್ಕ್ ಸರಿಪಡಿಸುವಂತೆ ಆಗ್ರಹಿಸಿ ಟವರ್ ಎದುರು ಪ್ರತಿಭಟನೆ ನಡೆಸಿದರು.

ಬುಕುಡಿಬೇಲು ಗ್ರಾಮದಲ್ಲಿ ಬಿಎಸ್ಎನ್ಎಲ್ ವಿರುದ್ಧ ಹೋರಾಟ

ಕನ್ನಡಪ್ರಭ ವಾರ್ತೆ ಶೃಂಗೇರಿ

ತಾಲೂಕಿನ ನೆಮ್ಮಾರು ಪಂಚಾಯಿತಿ ಬುಕುಡಿಬೈಲು ಗ್ರಾಮಸ್ಥರು ಬಿಎಸ್ಎನ್ಎಲ್ ನೆಟ್ ವರ್ಕ್ ಸರಿಪಡಿಸುವಂತೆ ಆಗ್ರಹಿಸಿ ಟವರ್ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ದಿವೀರ್ ಮಲ್ನಾಡ್ ಈ ಸಮಸ್ಯೆ ಇಂದು ನಿನ್ನೆಯ ಸಮಸ್ಯೆಯಲ್ಲ. ಕಳೆದ ಏಳೆಂಟು ವರ್ಷಗಳಿಂದ ಈ ಸಮಸ್ಯೆ ಇದೆ. ಆದರೂ ಅಧಿಕಾರಿಗಳು ಸರಿಯಾಗಿ ಸಮಸ್ಯೆಗೆ ಸ್ಪಂದಿಸದೇ ,ಇಂದಿಗೂ ಸಮಸ್ಯೆ ಮುಂದುವರಿದುಕೊಂಡು ಬಂದಿದೆ. ತುರ್ತು ಸಂದರ್ಭದಲ್ಲಿ ಅನಾರೋಗ್ಯ ಸಮಸ್ಯೆ ಸೇರಿದಂತೆ ಅಗತ್ಯ ಕೆಲಸಗಳಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.

ಕೆರೆಕಟ್ಟೆಯಲ್ಲಿ ನೆಟ್ ವರ್ಕ್ ಸಮಸ್ಯೆಯಿಂದ ಅನಾರೋಗ್ಯಕ್ಕೀಡಾದ ವ್ಯಕ್ತಿಗೆ ತುರ್ತು ಚಿಕಿತ್ಸೆಗೆ ಕರೆದುಕೊಂಡು ಹೋಗಲು ಕರೆ ಮಾಡಲು ನೆಟ್ ವರ್ಕ್ ಇಲ್ಲದೆ ಆ ವ್ಯಕ್ತಿ ಸಾವಿಗೀಡಾದ ಧಾರುಣ ಘಟನೆ ಇತ್ತೀಚೆಗೆ ನಡೆದಿತ್ತು. ಇದು ಯಾವುದೇ ರಾಜಕೀಯ ಪಕ್ಷದ ಹೋರಾಟವಲ್ಲ. ಪಕ್ಷಾತೀತ ಹೋರಾಟ. ಜನರ ಸಮಸ್ಯೆಇಲ್ಲಿ ಯಾವುದೇ ಪಕ್ಷ,ರಾಜಕಾರಣ ಇಲ್ಲ ಎಂದರು.

ಪರೀಕ್ಷೆ ಸಮಯವಾದ್ದರಿಂದ ಮಕ್ಕಳಿಗೆ ಓದಲು ಮಾಹಿತಿ ಪಡೆಯಲು ನೆಟ್ ವರ್ಕ್ ಇಲ್ಲದ ಕಾರಣ ತೊಂದರೆ ಯಾಗುತ್ತಿದೆ. ಆಟೋ,ವಾಹನ ಚಾಲಕರು ಹಾಗೂ ಪಡಿತರ ಪಡೆಯಲು ನೆಟ್ ವರ್ಕ್ ಇಲ್ಲದ ಕಾರಣ ತೊಂದರೆಯಾಗುತ್ತಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಬರಬೇಕಿತ್ತು. ಆದರೆ ತಾಲೂಕು ಮಟ್ಟದ ಅಧಿಕಾರಿಗಳು ಬಂದಿದ್ದಾರೆ. ಒಂದು ವಾರದೊಳಗೆ ಸರಿಪಡಿಸುವ ಭರವಸೆ ನೀಡಿದ್ದಾರೆ. ಏಳೆಂಟು ವರ್ಷಗಳಿಂದ ಪರಿಹರಿಸಲು ಆಗದ ಸಮಸ್ಯೆ ಒಂದು ವಾರದೊಳಗೆ ಪರಿಹರಿಸುವುದಾದರೂ ಹೇಗೆ ಎಂಬ ಅನುಮಾನ ವಾಗುತ್ತಿದೆ. ಈ ಭಾಗದ ಜನರ ಸಮಸ್ಯೆ ಅರ್ಥಮಾಡಿಕೊಂಡು ಕೂಡಲೇ ಸರಿಪಡಿಸಬೇಕು. ಇಲ್ಲದಿದ್ದರೆ ಸಂಸದರ ಮನೆ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದರು. ತಾಲೂಕು ಬಿಎಸ್ಎನ್ಎಲ್ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.ಉಮೇಶ್ ನಾಯ್ಕ್ ಸೇರಿದಂತೆ ಗ್ರಾಮಸ್ಥರು ಇದ್ದರು.

27 ಶ್ರೀ ಚಿತ್ರ 1-

ಶೃಂಗೇರಿ ನೆಮ್ಮಾರು ಪಂಚಾಯಿತಿ ಬುಕುಡಿಬೈಲು ಗ್ರಾಮಸ್ಥರು ನೆಟ್ ಸಮಸ್ಯೆ ಸರಿಪಡಿಸಲು ಟವರ್ ಎದುರು ಪ್ರತಿಭಟನೆ ನಡೆಸಿದರು.

Share this article