ಬಳ್ಳಾರಿ: ಕೈಗಾರಿಕೆ ಸ್ಥಾಪನೆಗೆಂದು ಬಳ್ಳಾರಿ ಸ್ಟೀಲ್ಸ್ ಅಂಡ್ ಅಲಾಯ್ಸ್ ಕಂಪನಿಗೆ (ಬಿಎಸ್‌ಎಎಲ್)
ಕೆಐಎಡಿಬಿಯಿಂದ ವಶಪಡಿಸಿಕೊಂಡಿರುವ ರೈತರ ಜಮೀನು ವಾಪಾಸ್ ನೀಡಬೇಕು ಎಂದು ಆಗ್ರಹಿಸಿ ಭೂ ಸಂತ್ರಸ್ತರ ಹೋರಾಟ ಸಮಿತಿಯಿಂದ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಜರುಗಿತು.ಬಳ್ಳಾರಿ ಹೊರ ವಲಯದಲ್ಲಿ ಕೈಗಾರಿಕೆ ಸ್ಥಾಪಿಸುವ ಸಂಬಂಧ ಕೆಐಎಡಿಬಿಯಿಂದ
ಬಳ್ಳಾರಿ ಸ್ಟೀಲ್ಸ್ ಆ್ಯಂಡ್ ಅಲಾಯ್ಸ್ ಕಂಪನಿಗೆ 1995ರಲ್ಲಿ 760 ಎಕರೆ ಜಮೀನು ಹಾಗೂ 1997/98ರಲ್ಲಿ 423 ಎಕರೆ ವಶಪಡಿಸಿಕೊಳ್ಳಲಾಯಿತು. ಒಣ ಬೇಸಾಯದ ಜಮೀನುಗಳಿಗೆ ಎಕರೆಗೆ ₹43 ಸಾವಿರ ಹಾಗೂ ನೀರಾವರಿ ಜಮೀನಿಗೆ ₹72 ಸಾವಿರದಂತೆ ನೀಡಲಾಗಿದೆ. ಕೈಗಾರಿಕೆ ಸ್ಥಾಪನೆಯಿಂದ ಜಮೀನು ನೀಡಿದ ರೈತರ ಕುಟುಂಬಗಳಿಗೆ ಉದ್ಯೋಗ ಸಿಗುತ್ತದೆ ಎಂಬ ಆಸೆಯಿಂದ ರೈತರು ಕಡಿಮೆ ದರಕ್ಕೆ ಜಮೀನುಗಳನ್ನು ಮಾರಾಟ ಮಾಡಿಕೊಂಡಿದ್ದಾರೆ. ಬಿಎಸ್‌ಎಎಲ್ ಕಂಪನಿಯು ಕೈಗಾರಿಕೆ ಸ್ಥಾಪನೆ ಹೆಸರಿನಲ್ಲಿ ಜಮೀನುಗಳನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ನೂರಾರು ಕೋಟಿ ಸಾಲ ಪಡೆದುಕೊಂಡಿದ್ದಾರೆ. ಆದರೆ, ಈ ವರೆಗೆ ಕೈಗಾರಿಕೆ ಸ್ಥಾಪನೆ ಮಾಡಲಾಗಿಲ್ಲ. ಬಳಿಕ ರೈತರ ಗಮನಕ್ಕೂ ತರದೆ ಕೈಗಾರಿಕೆಗೆಂದು ನೀಡಿದ ಜಮೀನಿನ ಪೈಕಿ 700 ಎಕರೆ ಪ್ರದೇಶವನ್ನು ಸೆಸಾ ಗೋವಾ ಕಂಪನಿಗೆ ಮಾರಾಟ ಮಾಡಿದ್ದಾರೆ. ಈ ಎಲ್ಲದಕ್ಕೂ ಕೆಐಎಡಿಬಿಯೇ ಮುಖ್ಯ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಆದರೆ, ಕೈಗಾರಿಕೆ ನಿಯಮದಂತೆ ಹತ್ತು ವರ್ಷದೊಳಗೆ ಕೈಗಾರಿಕೆ ಸ್ಥಾಪಿಸಬೇಕು. ಭೂಸ್ವಾಧೀನ ನಿಯಮದಂತೆ ನಿಗದಿತ ಜಾಗದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಿಲ್ಲ. ಆದ್ದರಿಂದ ರೈತರಿಗಾದ ನಷ್ಟವನ್ನು ಭರಿಸಿಕೊಡಬೇಕು. ಇಲ್ಲವೇ ರೈತರ ಜಮೀನುಗಳನ್ನು ವಾಪಾಸ್ ಕೊಡಬೇಕು ಎಂದು ಒತ್ತಾಯಿಸಿದರು.ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯು. ಬಸವರಾಜ್, ಜಿಲ್ಲಾಧ್ಯಕ್ಷ ವಿ.ಎಸ್. ಶಿವಶಂಕರ್, ಬಿ.ಎಂ. ಬಸವರಾಜ್, ಜಿ. ದೇವೇಂದ್ರಪ್ಪ, ರಾಮುಡು, ಕೆ. ಸುರೇಶ್, ಪಾಪಣ್ಣ, ವೈ. ಈರಣ್ಣ, ಅಯ್ಯನಗೌಡ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.