ರಟ್ಟೀಹಳ್ಳಿ: ಪಟ್ಟಣದ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟು ಗುಂಡಿಗಳ ಸಾಮ್ರಾಜ್ಯವಾಗಿದೆ. ಇದರಿಂದ ಬಸ್‌ಗಳ ಸಂಚಾರ ಹಾಗೂ ಪ್ರಯಾಣಿಕರು ಓಡಾಡುವುದೇ ದುಸ್ತರವಾಗಿದೆ ಎಂದು ಅಲ್ಲಿನ ನಿವಾಸಿಗಳು ದಿಢೀರ್ ಪ್ರತಿಭಟನೆ ನಡೆಸಿದರು.ಈ ವೇಳೆ ನಾಗರಾಜ ದ್ಯಾವಕ್ಕಳವರ ಮಾತನಾಡಿ, ಪಟ್ಟಣದ ಬಸ್ ನಿಲ್ದಾಣದ ರಸ್ತೆ ಮಾರ್ಗ ಸಂಪೂರ್ಣ ಗುಂಡಿಗಳಿಂದ ಕೂಡಿದ್ದು, ಪ್ರತಿನಿತ್ಯ ನೂರಾರು ಬಸ್‌ಗಳು ಹಾಗೂ ಸಾರ್ವಜನಿಕರು ಓಡಾಡುವ ಪ್ರಮುಖ ರಸ್ತೆಯಾಗಿದೆ. ಈ ಮಾರ್ಗದಲ್ಲಿ ಪೊಲೀಸ್ ಠಾಣೆ, ಫೈರ್ ಸ್ಟೇಷನ್, ದನದ ದವಾಖಾನೆ, ಚಿಕ್ಕಯಡಚಿ, ಹುಲ್ಲತ್ತಿ ಕೋಡ ಹೀಗೆ ಅನೇಕ ಗ್ರಾಮಗಳಿಗೆ ಸಂಪರ್ಕ ರಸ್ತೆಯಾಗಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಕಂಡು ಕಾಣದಂತೆ ಓಡಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆರೋಪಿಸಿದರು.ಪಟ್ಟಣದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ವಿವಿಧ ಬಡಾವಣೆಗಳ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ನಗರದ ಕೆಲ ಪ್ರಮುಖ ರಸ್ತೆಗಳು ಹಾಳಾಗಿ ವರ್ಷಗಳೇ ಕಳೆದರೂ ದುರಸ್ತಿಗೆ ಅಧಿಕಾರಿಗಳು ಇನ್ನೂ ಮನಸ್ಸು ಮಾಡಿಲ್ಲ. ಹೀಗಾಗಿ ರಸ್ತೆ ಮಧ್ಯ ಡೊಡ್ಡ ಗುಂಡಿಗಳು ಬಿದ್ದು ಸಂಚಾರಕ್ಕೆ ಅಡ್ಡಿಯಾಗಿವೆ. ಮಳೆಯ ನೀರು ಹರಿದು ಹೋಗದ ಕಾರಣ ತಗ್ಗುಗಳಲ್ಲೆ ನಿಲ್ಲುವುದರಿಂದ ರಸ್ತೆ ಯಾವುದು? ಗುಂಡಿ ಯಾವುದು ತಿಳಿಯದೇ ತೊಂದರೆ ಅನುಭವಿಸುವಂತಾಗಿದೆ. ಕೆಸರಿನ ಮಜ್ಜನ ಮಾಡಿಕೊಂಡೇ ಸಂಚರಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು. ಕಳೆದ ವರ್ಷ ಸಾರ್ವಜನಿಕರಿಂದ ತೀವ್ರ ಆಕ್ಷೇಪ ಉಂಟಾದ್ದರಿಂದ ಶಾಸಕರ ಆದೇಶದ ಮೇರೆಗೆ ಅಧಿಕಾರಿಗಳು ತಾತ್ಕಾಲಿಕವಾಗಿ ಬಸ್ ನಿಲ್ದಾಣದ ರಸ್ತೆ ಮಾರ್ಗದ ಗುಂಡಿಗಳಿಗೆ ಮಣ್ಣು ಹಾಕಿಸಿ ಗುಂಡಿ ಮುಚ್ಚಲಾಗಿತ್ತು. ಆದರೆ ಅದೇ ಗುಂಡಿಗಳು ಮತ್ತೆ ಗೋಚರಿಸುತ್ತಿವೆ ಎಂದರು.ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಹದಗೆಟ್ಟ ರಸ್ತೆ ಸರಿಪಡಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಇಲ್ಲಿನ ಎಲ್ಲ ವ್ಯಾಪಾರಸ್ಥರು ಹಾಗೂ ನಿವಾಸಿಗಳು ರಸ್ತೆ ತಡೆ ನಡೆಸಲಾಗುವುದು ಎಂದು ನಾಗರಾಜ ಬಣಕಾರ, ಹರೀಶ ಅಡ್ಮನಿ, ಗುರುರಾಜ ದ್ಯಾವಕ್ಕಳವರ ಹಾಗೂ ಸ್ಥಳೀಯ ಆಟೋ ಚಾಲಕರು ಎಚ್ಚರಿಸಿದರು.
ಹೋರಿ ಕರು ಮೇಲೆ ಬೀದಿನಾಯಿಗಳ ದಾಳಿಬ್ಯಾಡಗಿ: ಪಟ್ಟಣದ ಚಾವಡಿ ಓಣಿಯಲ್ಲಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಭಕ್ತಿಯಿಂದ ಕೊಡಲಾಗಿದ್ದ ಹೋರಿ ಕರುವೊಂದನ್ನು ಮೇಲೆ ಬೀದಿನಾಯಿಗಳು ಮಾರಣಾಂತಿಕ ದಾಳಿ ನಡೆಸಿದ್ದು, ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ.
ಪಟ್ಟಣದ ಜನತೆಗೆ ಕಳೆದ ಹಲವು ದಿನಗಳಿಂದ ಬೀದಿನಾಯಿಗಳ ಭಯ ಜೋರಾಗಿದ್ದು, ಇದಕ್ಕೆ ಮತ್ತಷ್ಟು ಭಯ ಸೇರಿಸುವಂತೆ ಘಟನೆ ನಡೆದಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕರುವಿನ ಮೇಲೆ ಬೀದಿನಾಯಿಗಳು ಏಕಾಏಕಿ ದಾಳಿ ನಡೆಸಿವೆ. ಇದರಿಂದ ಕರುವಿನ ಮೈಮೇಲೆ ಸಾಕಷ್ಟು ಗಾಯಗಳಾಗಿ ಕರು ನಿತ್ರಾಣಗೊಂಡಿದೆ. ಕರುವಿನ ಮೇಲೆ ನಡೆದ ದಾಳಿಯನ್ನು ನೋಡಿದ ಅಲ್ಲಿನ ನಿವಾಸಿ ಈಶಪ್ಪ ಮಠದ ತುರ್ತಾಗಿ ಕರುವನ್ನು ಜಾನುವಾರುಗಳ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.