ಕೃಷಿ ಭೂಮಿ ಸ್ವಾಧೀನ ನಿಲ್ಲಿಸುವಂತೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : May 29, 2024 12:52 AM

ಸಾರಾಂಶ

ಅಲ್ಪಸ್ವಲ್ಪ ಇರುವ ಆಸ್ತಿಯನ್ನು ಏಕಸ್ (ಗೊಂಬೆ) ಕಂಪನಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದು, ಭೂಮಿ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ತಾಲೂಕಿನ ಭಾನಾಪುರ ಗ್ರಾಮದ ರೈತರು ಪ್ರತಿಭಟನೆ ನಡೆಸಿದರು.

ಏಕಸ್ ಕಂಪನಿಗೆ ಭೂಮಿ ನೀಡಲ್ಲ ಎಂದು ರೈತರ ಆಕ್ರೋಶ

ಕನ್ನಡಪ್ರಭ ವಾರ್ತೆ ಕುಕನೂರು

ಅಲ್ಪಸ್ವಲ್ಪ ಇರುವ ಪಿತ್ರಾರ್ಜಿತ ಆಸ್ತಿಯನ್ನು ಏಕಸ್ (ಗೊಂಬೆ) ಕಂಪನಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದು, ಭೂಮಿ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ತಾಲೂಕಿನ ಭಾನಾಪುರ ಗ್ರಾಮದ ರೈತರು ತಮ್ಮ ಜಮೀನಿನಲ್ಲಿ ಪ್ರತಿಭಟನೆ ನಡೆಸಿದರು.

ತಾಲೂಕಿನ ಭಾನಾಪುರ ಹಾಗೂ ತಳಬಾಳ ಸೀಮಾದ ಕೃಷಿ ಭೂಮಿಯನ್ನು ಏಕಸ್ ಎಸ್‌ಇಜೆಡ್ ಕಂಪನಿಯವರು ಭೂ ಸ್ವಾಧೀನಕ್ಕೆ ಒಳಪಡಿಸಿಕೊಳ್ಳುತ್ತಿರುವುದನ್ನು ನಿಲ್ಲಿಸಬೇಕು. ಈಗಾಗಲೇ ಸುಮಾರು ೪00 ಎಕರೆ ಭೂಮಿ ಖರೀದಿಸಿ ಕಂಪನಿ ಪ್ರಾರಂಭಿಸಿದ್ದು, ತಮ್ಮ ಕಾರ್ಯನಿರ್ವಹಣೆಗೆ ಬೇಕಾದಂತಹ ಅವಶ್ಯಕತೆಗಿಂತ ಹೆಚ್ಚು ಭೂಮಿ ಹೊಂದಿದ್ದಾರೆ. ಮಾರುಕಟ್ಟೆ ದರದಲ್ಲಿ ಎಕರೆಗೆ ಸದ್ಯ ಕೋಟ್ಯಾಂತರ ರೂ. ಬೆಲೆ ಬಂದಿದೆ. ಇದರಿಂದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮೂಲಕ ಖರೀದಿಸಿದರೇ ತಮಗೆ ಕಡಿಮೆ ಬೆಲೆಗೆ ಸಿಗಬಹುದು ಎಂಬ ದುರಾಸೆಯಿಂದ ಹೊಂಚು ಹಾಕಿ ನಮ್ಮ ಭೂಮಿಯನ್ನು ಹಗಲು ದರೋಡೆ ಮೂಲಕ ಖರೀದಿಸಲು ಹೊರಟಿದ್ದಾರೆ. ಕಂಪನಿ ಸ್ಥಾಪಿಸುವ ಮೊದಲು ಮುಗ್ದ ರೈತರಲ್ಲಿ ಸೋಲಾರ ವಿದ್ಯುತ್ ಘಟಕ ಸ್ಥಾಪಿಸುತ್ತೇವೆ ಎಂದು ಭೂಮಿ ಖರೀದಿ ಮಾಡಿದ್ದಾರೆ. ಇಲ್ಲಿ ಏಜಂಟರುಗಳನ್ನು ನೇಮಿಸಿ, ಸುಳ್ಳು ಹೇಳಿ ಅತಿ ಕಡಿಮೆ ದರಕ್ಕೆ ಖರೀದಿಸಿ ರೈತರಿಗೆ ಮೋಸ ಮಾಡಿದ್ದಾರೆ. ಅಲ್ಲದೇ ಕೆಲವು ರೈತರಿಗೆ ಕಂಪನಿಯಲ್ಲಿ ಕೆಲಸ ನೀಡುತ್ತೇವೆ ಎಂದು ಭರವಸೆ ನೀಡಿ, ಭೂಮಿ ಖರೀದಿ ಮಾಡಿದ್ದು, ಕಂಪನಿಯಲ್ಲಿ ಕಸ ತೆಗೆಯಲು, ಉದ್ಯಾನವನ ನಿರ್ವಹಣೆ ಕೆಳಮಟ್ಟದ ಕೆಲಸ ನೀಡಿದ್ದಾರೆ. ಅಲ್ಲದೇ ಕಂಪನಿ ಸುತ್ತ ಇರುವ ಗ್ರಾಮಗಳ ಯುವಕರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದ ಕಂಪನಿ ಸದ್ಯ ಒಬ್ಬರಿಗೂ ಉದ್ಯೋಗ ನೀಡುತ್ತಿಲ್ಲ. ಸದ್ಯ ೫೭ ಎಕರೆ ಭೂಮಿಯನ್ನು ಕೆಐಡಿಬಿಯಿಂದ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಅಲ್ಪಸ್ವಲ್ಪ ಇರುವ ಭೂಮಿ ಬಿಟ್ಟು ಬೇರೆ ಭೂಮಿ ಇರುವುದಿಲ್ಲ. ಈ ಭೂಮಿಯಿಂದ ಜೀವನ ನಿರ್ವಹಣೆ ಮಾಡುತ್ತಿದ್ದು, ಭೂಮಿ ಕೊಟ್ಟರೇ ಬೀದಿಗೆ ಬರಬೇಕಾಗುತ್ತದೆ. ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ಭೂಮಿ ಸ್ವಾಧೀನ ಪಡಿಸಿಕೊಳ್ಳುವುದನ್ನು ಕೈ ಬಿಡಬೇಕು. ಇಲ್ಲವಾದರೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಒತ್ತಾಯಿಸಿದರು.

ರೈತರಾದ ಮಲ್ಲಿಕಾರ್ಜುನ ನಂದವಾಡಗಿ, ಸುರೇಶ ಸೊಂಪುರ, ವೆಂಕಟೇಶ ಗಮನಿ, ಭೀಮಪ್ಪ ಮಡಿವಾಳರ, ಮಹಾದೇವಪ್ಪ ಉಪ್ಪಾರ, ಬುಡ್ಡನಗೌಡ ಪೊಲೀಸ್ ಪಾಟೀಲ್, ಬಾಬಣ್ಣ ಭೀಮರಡ್ಡಿ ಇತರರಿದ್ದರು.

Share this article