ಹಾನಗಲ್ಲ: ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಇಲ್ಲದ ಅವಧಿಯಲ್ಲಿ ಮಾರನಬೀಡ ಗ್ರಾಮ ಪಂಚಾಯಿತಿಯಲ್ಲಿ ₹೧೫ ಲಕ್ಷ ಅವ್ಯವಹಾರ ಆಗಿದೆ ಎಂದು ಆಪಾದಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಎರಡು ದಿನಗಳಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸೋನುಬಾಯಿ ಮರಾಠೆ ಅವರ ಮೇಲೆ ಕ್ರಮ ಜರುಗಿಸುವ ಭರವಸೆಯನ್ನು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಕಟಿಸಿದರು.
ಕೂಡಲೇ ಗ್ರಾಪಂ ಅಭಿವೃದ್ಧಿ ಅಧಿಕಾರಿಯನ್ನು ಅಮಾನತುಗೊಳಿಸಬೇಕು. ಸುಳ್ಳು ಲೆಕ್ಕ ತೋರಿಸಿ ಖರ್ಚು ಹಾಕಿದ ಹಣ ಪಂಚಾಯಿತಿಗೆ ಪರತ್ ಭರಣಾ ಮಾಡಬೇಕು. ಈ ಅವ್ಯವಹಾರದಲ್ಲಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸದ ಆಡಳಿತಾಧಿಕಾರಿಯನ್ನೂ ಅಮಾನತು ಮಾಡಬೇಕು. ಪಿಡಿಓ ಹಾಗೂ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಹಾಗೂ ಈ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಸಿ.ಟಿ. ಸುರೇಶ ಅವರು ಯಾವುದೇ ಬಿಲ್‌ಗಳಿಗೆ ಸಹಿ ಹಾಕುವಾಗ ಕಾಮಗಾರಿ ಪರಿಶೀಲಿಸದೆ ಚೆಕ್‌ಗಳಿಗೆ ಸಹಿ ಹಾಕಿರುವುದು ಕೂಡ ಇಂಥ ಅಪರಾಧಕ್ಕೆ ಕಾರಣವಾಗಿದೆ. ಪಿಡಿಓ ಹಾಗೂ ಆಡಳಿತಾಧಿಕಾರಿಗಳನ್ನು ಅಮಾನತುಗೊಳಿಸಬೇಕು. ಅಲ್ಲದೆ ಈಗ ತನಿಖೆ ಕೈಗೊಂಡಿರುವ ತನಿಖಾ ತಂಡದ ಮೇಲೆ ನಮಗೆ ವಿಶ್ವಾಸವಿಲ್ಲ. ಮತ್ತೊಮ್ಮೆ ಸರಿಯಾದ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಗ್ರಾಮದ ಬಸವಣ್ಣೆಪ್ಪ ಸಂಸಿ, ಪ್ರಕಾಶ ಕೋಳೂರ, ಹನುಮಂತಪ್ಪ ಡುಮ್ಮಣ್ಣನವರ, ಅಶೋಕ ಸಂಸಿ, ಪುಟ್ಟಪ್ಪ ನರೇಗಲ್ಲ, ಮಹಾಂತೇಶ ನಿಸೀಮಣ್ಣನವರ, ಬಸವಂತಪ್ಪ ಕಾಶಂಬಿ, ಮಹಾಂತೇಶ ಪೂಜಾರ ಸೇರಿದಂತೆ ೫ ಗ್ರಾಮಗಳ ಗ್ರಾಮಸ್ಥರು ಪ್ರತಿಭಟನೆಯಲ್ಲಿದ್ದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯತ್ ಇಓ ಜಗದೀಶ ಕಮ್ಮಾರ, ಈಗಾಗಲೇ ವಿವಿಧ ಅಧಿಕಾರಿಗಳಾದ ಪರಶುರಾಮ ಪೂಜಾರ, ಚನ್ನವೀರಪ್ಪ ರೂಢಗಿ, ಚಂದ್ರಶೇಖರ ಸೂಡಂಬಿ ಅವರಿಂದ ತನಿಖೆ ನಡೆಸಿ ವರದಿ ಪಡೆಯಲಾಗಿದೆ. ಒಂದೆರಡು ದಿನಗಳಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ವರದಿ ಸಲ್ಲಿಸಿದ ನಂತರ ಈ ಬಗ್ಗೆ ಕ್ರಮವನ್ನು ಪ್ರಕಟಿಸಲಿದ್ದಾರೆ. ಗ್ರಾಪಂನಲ್ಲಿ ಅವ್ಯವಹಾರ, ಕಾನೂನು ಬಾಹಿರ ಖರ್ಚು ಹಾಕಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಉಳಿದ ಕ್ರಮವನ್ನು ಹಿರಿಯ ಅಧಿಕಾರಿಗಳು ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.