ಬಳ್ಳಾರಿ: ನಮ್ಮೂರ ಸರ್ಕಾರಿ ಶಾಲೆಯನ್ನು ಮುಚ್ಚಬಾರದು ಎಂದು ಒತ್ತಾಯಿಸಿ ತಾಲೂಕಿನ ಅಸುಂಡಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟ (ಎಐಡಿಎಸ್‌ಓ) ಸಂಘಟನೆಯ ನೇತೃತ್ವದಲ್ಲಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ರಾಜ್ಯ ಸರ್ಕಾರ ರಾಜ್ಯದ ಸಾವಿರಾರು ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಈ ಯೋಜನೆ ಭಾಗವಾಗಿ ಬಳ್ಳಾರಿ ತಾಲೂಕಿನ ಕಕ್ಕಬೇವಿನಹಳ್ಳಿಯ ಪ್ರೌಢಶಾಲೆಯನ್ನು ಕೆಪಿಎಸ್-ಮ್ಯಾಗ್ನೆಟ್ ಶಾಲೆಯನ್ನಾಗಿಸಿ ಅಸುಂಡಿ ಗ್ರಾಮದ ಶಾಲೆಯನ್ನು ಅಲ್ಲಿಗೆ ಸೇರಿಸಲಾಗುತ್ತಿದೆ. 300ಕ್ಕೂ ಹೆಚ್ಚು ದಾಖಲಾತಿ ಹೊಂದಿರುವ ಈ ಶಾಲೆಯನ್ನು ಮುಚ್ಚುತ್ತಿರುವುದು ಸರ್ಕಾರವು ಬಡವರ ಮಕ್ಕಳಿಗೆ ಮಾಡುವ ದ್ರೂಹವಾಗಿದ್ದು, ಅಸುಂಡಿ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚದೆ, ಶಾಲೆಗೆ ಬೇಕಾದ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಕೆ. ಈರಣ್ಣ, ಸರ್ಕಾರಿ ಶಾಲೆ ಉಳಿಸಿ ಸಮಿತಿಯ ಸದಸ್ಯರಾದ ಬಸವರಾಜ್, ಹೊನ್ನೂರ್ ಸ್ವಾಮಿ, ಮೋಹನ್, ಬಸವರಾಜ ಸ್ವಾಮಿ, ಭಾಷಾ ಸೇರಿದಂತೆ ಗ್ರಾಮದ ನೂರಾರು ಜನರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿ, ಸರ್ಕಾರ ಶಾಲೆ ಉಳಿವಿಗೆ ಆಗ್ರಹಿಸಿದರು.