ಕನ್ನಡಪ್ರಭ ವಾರ್ತೆ, ತುಮಕೂರುಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ವತಿಯಿಂದ ತುಮಕೂರು ಜಿಲ್ಲೆಯ ಸ್ಲಂ ನಿವಾಸಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಜಿಲ್ಲೆಯಲ್ಲಿ ಸ್ಲಂ ನಿವಾಸಿಗಳ ಸಮಸ್ಯೆಗಳನ್ನು ಕಾಲಕಾಲಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಇದಕ್ಕೆ ಸ್ಪಂದಿಸಿರುವ ಜಿಲ್ಲಾಳಿತದ ಕೆಲವೊಂದು ಹಕ್ಕೊತ್ತಾಯಗಳನ್ನು ಈಡೇರಿಸಲು ಮುಂದಾಗಿದೆ. ಆದರೆ ಕಳೆದ 6 ತಿಂಗಳಿನಿಂದ ಜಾತಿ ಜನಗಣತಿ ಮತ್ತು ಎಸ್‌ಐಆರ್ ಮತಪರಿಷ್ಕರಣೆ ಕೆಲಸಗಳಿಂದ ಅರ್ಧಕ್ಕೆ ನಿಲ್ಲಿಸಲಾಗಿದೆ ಎಂದರು.ತುಮಕೂರು ನಗರದಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ 1450 ಮನೆಗಳ ಪೈಕಿ 630 ಮನೆಗಳ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ 3 ವರ್ಷಗಳಾಗಿದೆ. ಕಳೆದ ಡಿಸೆಂಬರ್‌ನಲ್ಲಿ ನಗರದಲ್ಲಿ ಎರಡು ಸ್ಲಂಗಳಿಗೆ 110 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದ್ದು ಬಾಕಿ ಉಳಿದಿರುವ 1250 ಕುಟುಂಬಗಳ ಹಕ್ಕುಪತ್ರಗಳನ್ನು ಹಂಚಿಕೆ ಮಾಡಿಲ್ಲ ಎಂದರು. ಇದಕ್ಕೆ ತಾಂತ್ರಿಕವಾಗಿ ಭೂಮಿಯನ್ನು ಕಂದಾಯ ಇಲಾಖೆಯಿಂದ ಕೊಳಗೇರಿ ಅಭಿವೃದ್ಧಿ ಮಂಡಳಿ ಹೆಸರಿಗೆ ಮಾಡಿರುವುದಿಲ್ಲ. ಇತ್ತೀಚೆಗೆ ಅಲೆಮಾರಿ ಹಂದಿಜೋಗಿ 60 ಕುಟುಂಬಗಳ ಪೈಕಿ ಕೇವಲ 14 ಕುಟುಂಬಗಳಿಗೆ ಮಾತ್ರ ಹಕ್ಕುಪತ್ರ ನೀಡಿರುತ್ತಾರೆ. ಬಾಕಿ ಉಳಿದರ ಕುಟುಂಬಗಳಿಗೆ ಜಾತಿ ಆದಾಯ ಪ್ರಮಾಣ ಪತ್ರ ನೀಡುವಲ್ಲಿ ಜಿಲ್ಲಾಡಳಿತ ಬದ್ಧತೆ ತೋರುತ್ತಿಲ್ಲ ಎಂದಿದ್ದಾರೆ. ಈ ಎಲ್ಲಾ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸುತ್ತಿದ್ದೇವೆ. ಮನವಿ ತುರ್ತು ಸ್ಪಂದನೆ ದೊರೆಯದೆ ವಿಳಂಬವಾದರೆ ಸ್ವಾತಂತ್ರ್ಯ ದಿನಾಚರಣೆಯೆಂದು ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರರವರಿಗೆ ಜಿಲ್ಲೆಯ ಸ್ಲಂ ನಿವಾಸಿಗಳ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮನವಿ ಸಲ್ಲಿಸಲಾಗುವುದು ಎಂದರು. ಪ್ರತಿಭಟನಾ ಸ್ಥಳಕ್ಕೆ ಧಾವಿಸಿ ಮನವಿ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ.ಎನ್ ತಿಪ್ಪೇಸ್ವಾಮಿ ರವರು ಸ್ಲಂ ನಿವಾಸಿಗಳ ವಿವಿಧ ಸಮಸ್ಯೆಗಳ ಕುಂದು ಕೊರತೆ ಸಭೆಯನ್ನು ಆಗಸ್ಟ್ ೧೯ ರಂದು ಜಿಲ್ಲಾ ಮಟ್ಟದಲ್ಲಿ ಕರೆದು ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಲಾಗುವುದು ಎಂದರು ಪ್ರತಿಭಟನೆಯಲ್ಲಿ ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘದ ಜಿಲ್ಲಾ ಸಂಚಾಲಕರಾದ ಅನುಪಮಾ, ಸ್ಲಂ ಸಮಿತಿಯ ಪದಾಧಿಕಾರಿಗಳಾದ ಅರುಣ್, ಶಂಕ್ರಯ್ಯ, ಶಾರದಮ್ಮ, ಧನಂಜಯ್ಯ,, ಮಂಜುನಾಥ್, ಅಶ್ವತ್, ನಿವೇಶನ ಹೋರಾಟ ಸಮಿತಿಯ ಮಂಗಳಮ್ಮ, ಹನುಮಕ್ಕ, ಪೂರ್ಣಿಮಾ, ವಸಂತಮ್ಮ, ಸಂದ್ಯಾ, ಶಾಂತಕುಮಾರ್, ಇಸ್ಮಾಯಿಲ್ ನಗರದ ಚಿಕ್ಕಗಂಗಮ್ಮ, ಗೋವಿಂದ, ಎಸ್.ಎನ್ ಪಾಳ್ಯದ ಗುಲ್ನಾಜ್,ಸಲ್ಮಾ, ಫೀರ್‌ಸಾಬ್, ದಿಬ್ಬೂರಿನ ಇಮ್ತಿಯಾಜ್ ಖಾನ್, ಸಂಪಾಧನೆ ಮಠದ ಗೌರಮ್ಮ, ಗಂಗಮ್ಮ,ಮರಳೂರು ದಿಣ್ಣೆ ಶಾಖೆಯ ಅಬೀಬುನ್ನಿಸಾ, ಪರ್ಜಾನ, ಮುಬಾರಕ್, ಕೋದಿಹಳ್ಳ ಸ್ಲಂ ಶಾಖೆಯ ಮಂಜುನಾಥ್, ವೆಂಕಟೇಶ್, ಅಶ್ವಥ್ ಮುಂತಾದವರು ಪಾಲ್ಗೊಂಡಿದ್ದರು.