ಕನ್ನಡಪ್ರಭ ವಾರ್ತೆ ಬೀಳಗಿಪಟ್ಟಣದ ನೇಕಾರ ಕಾಲೋನಿಗೆ ಸಿ.ಸಿ. ರಸ್ತೆ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ, ಚರಂಡಿ ದುರಸ್ತಿ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ಜಿಲ್ಲಾ ಹಾಗೂ ತಾಲೂಕು ಘಟಕ, ನೇಕಾರರು ಮತ್ತು ರೈತ ಸಂಘಟನೆಗಳು ತಹಸೀಲ್ದಾರ್ ಕಾರ್ಯಾಲಯದ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬೀಳಗಿ
ಪಟ್ಟಣದ ನೇಕಾರ ಕಾಲೋನಿಗೆ ಸಿ.ಸಿ. ರಸ್ತೆ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ, ಚರಂಡಿ ದುರಸ್ತಿ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ಜಿಲ್ಲಾ ಹಾಗೂ ತಾಲೂಕು ಘಟಕ, ನೇಕಾರರು ಮತ್ತು ರೈತ ಸಂಘಟನೆಗಳು ತಹಸೀಲ್ದಾರ್ ಕಾರ್ಯಾಲಯದ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ನೀಲಕಂಠೇಶ್ವರ ದೇವಸ್ಥಾನದಿಂದ ಪ್ರತಿಭಟನೆ ಪಾದಯಾತ್ರೆ ಆರಂಭಿಸಿದ ನೂರಾರು ಮಹಿಳೆಯರು, ಮಕ್ಕಳೊಂದಿಗೆ ತಮ್ಮ ತಲೆಯ ಮೇಲೆ ಸಿಮೆಂಟ್, ಮರಳು, ಜಲ್ಲಿ, ಖಾಲಿ ಕೊಡ ಹೊತ್ತುಕೊಂಡರೆ, ಪುರುಷರು ಸಲಿಕೆ, ಪಿಕಾಸಿ, ಬುಟ್ಟಿಯೊಂದಿಗೆ ಪಪಂ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬಸವೇಶ್ವರ ವೃತ್ತದ ಮುಖಾಂತರ ಪಪಂಗೆ ಆಗಮಿಸಿ ಪ್ರತಿಭಟನೆ ನಡೆಸಿದರು. ನಂತರ ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿ ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿತು.
ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಶುದ್ಧ ಕುಡಿಯುವ ನೀರು ಪೂರೈಸಬೇಕು. ಕಾಂಕ್ರೀಟ್ ರಸ್ತೆ ನಿರ್ಮಾಣ, ಪ್ರತಿ ಮನೆಗೆ ಬಳಕೆಗಾಗಿ ಸಮರ್ಪಕ ನೀರು ಸರಬರಾಜು, ಶೌಚಾಲಯ ನಿರ್ಮಿಸಬೇಕು. ಮುಚ್ಚಿಹೋಗಿರುವ ಚರಂಡಿ ಸ್ವಚ್ಛಗೊಳಿಸಿ ಚಾವಣಿ ಹಾಕಿಕೊಡಬೇಕೆಂದು ಆಗ್ರಹಿಸಿ, ಜಿಲ್ಲಾಧಿಕಾರಿಗಳು ಬರುವವರೆಗೆ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.
ನೇಕಾರರು ಮತ್ತು ರೈತ ಮುಖಂಡರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರೆ, ಇನ್ನು ಕೆಲವರು ಹಾಡು ಹಾಡುತ್ತ ಪ್ರತಿಭಟನೆ ಮುಂದುವರೆಸಿದರು. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್, ಪಪಂ ಆಡಳಿತಾಧಿಕಾರಿ ವಿನೋದ ಹತ್ತಳ್ಳಿ, ಪಪಂ ಮುಖ್ಯಾಧಿಕಾರಿ ದೇವಿಂದ್ರ ಧನಪಾಲ ಅವರೊಂದಿಗೆ ಚರ್ಚಿಸಿ ಕೊನೆಗೆ ಒಪ್ಪಂದಕ್ಕೆ ಬರಲಾಯಿತು.
ತಹಸೀಲ್ದಾರ್ ವಿನೋದ ಹತ್ತಳ್ಳಿ ಮನವಿ ಸ್ವೀಕರಿಸಿ ಮಾತನಾಡಿ, ಶೀಘ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಕಾಂಕ್ರೀಟ್ ರಸ್ತೆ ನಿರ್ಮಾಣ, ಪ್ರತಿ ಮನೆಗೆ ಬಳಕೆಗಾಗಿ ಸಮರ್ಪಕ ನೀರು ಸರಬರಾಜು, ಶೌಚಾಲಯ ನಿರ್ಮಾಣ ಹಾಗೂ ಮುಚ್ಚಿಹೋಗಿರುವ ಚರಂಡಿಯನ್ನು ಸ್ವಚ್ಛಗೊಳಿಸಿ ಚಾವಣಿ ಹಾಕಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಪಪಂ ಮುಖ್ಯಾಧಿಕಾರಿ ದೇವಿಂದ್ರ ಧನಪಾಲ ಮಾತನಾಡಿ, ತಾವು ಈ ಹಿಂದೆ ಮನವಿ ಕೊಟ್ಟ ಬಳಿಕ ಈಗಾಗಲೇ ರಸ್ತೆ ನಿರ್ಮಾಣ ಆರಂಭಿಸಿದ್ದು, ಚರಂಡಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು. ಸ್ಥಳ ಒದಗಿಸಿಕೊಟ್ಟರೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ನೀರು ಒದಗಿಸಿಕೊಡುತ್ತೇವೆ ಎಂದರು.
ಪ್ರತಿಭಟನೆಯ ನೇತೃತ್ವವನ್ನು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ವಹಿಸಿದ್ದರು. ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುಬ್ಬರಾಯಗೌಡ ಪಾಟೀಲ, ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಜಿ.ರೇವಡಿಗಾರ, ತಾಲೂಕಾಧ್ಯಕ್ಷ ಮಲ್ಲಪ್ಪ ಗಾಣಿಗೇರ, ಪ್ರಧಾನ ಕಾರ್ಯದರ್ಶಿ ಗುರು ಅನಗವಾಡಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ ಮಂತ್ರಿ, ಮಂಜುನಾಥ ಭಾವಿ, ಲಕ್ಷ್ಮಣ್ಣ ಸವನಾಳ, ಗಿರಿಮಲ್ಲಪ್ಪ ಮಂಟೂರ, ನೇಕಾರ ಸಮಾಜದ ಮುಖಂಡರಾದ ಬಸವಂತಪ್ಪ ಸಂಕಾನಟ್ಟಿ, ಪ್ರಭಾವತಿ ಸೊನ್ನದ, ಸಾವಿತ್ರಿ ಕೋಟಿ, ರಾಜೇಶ್ವರಿ ಮರೆಣ್ಣಿ, ಬಸವರಾಜ ರೂಗಿ, ಗೋವಿಂದಪ್ಪ ಹಳ್ಳೂರ, ಶಿವಲಿಂಗಪ್ಪ ಬಾದರದಿನ್ನಿ, ರೈತ ಸಂಘದ ಮುಖಂಡರಾದ ಶಿವನಗೌಡ ಪಾಟೀಲ, ಬಿ.ಎಸ್.ಗೋನಾಳ, ಶ್ರೀಶೈಲ ಮೇಟಿ, ಸದಾಶಿವ ಆಗೋಜಿ, ಎಸ್.ಎಚ್.ನದಾಫ್, ಸಿದ್ದು ದುಲಾರಿ, ಮಾರುತಿ ಕಂಬಳಿ, ಮಲ್ಲಪ್ಪ ಹಣಮರ, ಬಸು ಹಲಕಿ, ವಿಠ್ಠಲ ಕರಡಿಗುಡ್ಡ, ಕರವೇ ಪ್ರಧಾನ ಕಾರ್ಯದರ್ಶಿ ತೌಷಿಪ್ಪ್ ಕಲಾದಗಿ ಸೇರಿದಂತೆ ಇತರರು ಇದ್ದರು.
ರೈತರು ಅನ್ನ ಉತ್ಪಾದಿಸಿದರೆ, ಬಟ್ಟೆ ತಯಾರಿಸಿ ಮಾನ ಮುಚ್ಚುವವರು ನೇಕಾರರು. ಆದ್ದರಿಂದ ಬೀಳಗಿ ಪಪಂ ಅಧಿಕಾರಿಗಳಿಗೆ ಕಳೆದ 15 ವರ್ಷಗಳಿಂದ ಮೂಲಭೂತ ಸೌಲಭ್ಯಕ್ಕಾಗಿ ಮನವಿ ಮಾಡಿಕೊಂಡರೂ ಸ್ಪಂದಿಸಿಲ್ಲ. ಕೂಡಲೇ ನೇಕಾರ ಕಾಲೋನಿಯ ವಿವಿಧ ಮೂಲಭೂತ ಸೌಲಭ್ಯಗಳನ್ನು 3 ತಿಂಗಳೊಳಗಾಗಿ ಈಡೇರಿಸದಿದ್ದಲ್ಲಿ ಈ ಮೇಲಿನ ಎಲ್ಲ ಸಂಘಟನೆಗಳು ನೇಕಾರರ ಸಮಾಜದವರ ಜತೆಗೆ ನಿಂತು ಉಗ್ರ ಹೋರಾಟ ನಡೆಸುತ್ತೇವೆ.
-ವಿರುಪಾಕ್ಷಯ್ಯ ಹಿರೇಮಠ, ಜಿಲ್ಲಾಧ್ಯಕ್ಷ, ಭಾರತೀಯ ಕಿಸಾನ್ ಸಂಘ, ಬಾಗಲಕೋಟೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.