ಶಿರಹಟ್ಟಿಯಲ್ಲಿ ಕರವೇ ಪ್ರತಿಭಟನೆ, ತಹಸೀಲ್ದಾರ್‌ಗೆ ಮನವಿಶಿರಹಟ್ಟಿ: ಕರವೇ ರಾಜ್ಯ ಅಧ್ಯಕ್ಷರು ಸೇರಿದಂತೆ ಕರವೇ ಕಾರ್ಯಕರ್ತರು ಮುಖಂಡರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ವಡವಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ವಡವಿ ಮಾತನಾಡಿ, ರಾಜ್ಯದಲ್ಲಿ ಅನ್ಯ ಭಾಷೆಯ ನಾಮಫಲಕ ಹಾಕಿದ್ದನ್ನು ತೆಗೆದು ಕನ್ನಡ ನಾಮ ಫಲಕ ಹಾಕುವಂತೆ ಒತ್ತಾಯ ಮಾಡಿ ಹೋರಾಟ ಮಾಡಿದ ಕರವೇ ರಾಜ್ಯ ಅಧ್ಯಕ್ಷರಾದ ಟಿ.ಎ. ನಾರಾಯಣಗೌಡ ಸೇರಿದಂತೆ ಇತರ ಮುಖಂಡರನ್ನು ಬಂಧಿಸಿದ್ದು ಸರ್ಕಾರ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಆರೋಪಿಸಿದರು.ಬೆಂಗಳೂರ ನಗರ ವ್ಯಾಪ್ತಿಯಲ್ಲಿರುವ ವಾಣಿಜ್ಯ ಮಳಿಗೆಗಳು, ಕಟ್ಟಡಗಳು ಹಾಗೂ ಇನ್ನಿತರ ವ್ಯಾಪಾರ ಸ್ಥಳಗಳಲ್ಲಿ ಶೇ. ೬೦ ಕನ್ನಡ ನಾಮ ಫಲಕಗಳು ಕಡ್ಡಾಯವಾಗಿ ಬಳಸುವಂತೆ ಒತ್ತಾಯಿಸಿ ಸ್ಥಳೀಯ ಪ್ರಾಧಿಕಾರ ಹಾಗೂ ಬಿಬಿಎಂಪಿ ಮತ್ತು ಸರ್ಕಾರದ ಆದೇಶಗಳಿದ್ದರೂ ಸಹ ಸದರಿ ಆದೇಶಗಳನ್ನು ಉಲ್ಲಂಘನೆ ಮಾಡಿ ಆಂಗ್ಲ ಭಾಷೆಗಳಲ್ಲಿ ನಾಮ ಫಲಕಗಳನ್ನು ಹಾಕಿದ್ದು, ಆಂಗ್ಲ ಭಾಷೆಯಲ್ಲಿರುವ ನಾಮ ಫಲಕ ತೆರವುಗೊಳಿಸಬೇಕೆಂದು ಕಳೆದ ೪೫ ದಿನಗಳಿಂದ ಸಂಘಟನೆ ಕಾರ್ಯಕರ್ತರು ಕರಪತ್ರ ಹಂಚಿ ಗಡವು ನೀಡಿದ್ದು, ಇದಕ್ಕೆ ಕನ್ನಡ ವಿರೋಧಿಗಳು ಸ್ಪಂದಿಸಿಲ್ಲ ಎಂದು ದೂರಿದರು.
ನಾಮ ಫಲಕ ಬದಲಾವಣೆ ಮಾಡದ ಕಾರಣ ಡಿ.೨೭ರಂದು ಬೃಹತ್ ಪ್ರತಿಭಟನೆ ನಡೆಸಿದಾಗ ರಾಜ್ಯಾಧ್ಯಕ್ಷರು, ಕರವೇ ಪ್ರಮುಖರ ಜತೆಗೆ ಸುಮಾರು ೩ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿ ಯಲಹಂಕ ಪೊಲೀಸ್ ಡ್ರೈವಿಂಗ್ ತರಬೇತಿ ಕೇಂದ್ರದಲ್ಲಿ ಕೂಡಿ ಹಾಕಿದ್ದಾರೆ. ಇದಲ್ಲದೇ ಬೆಂಗಳೂರ ನಗರದ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆಗೊಳಿಸಿದ್ದಾರೆ. ಕನ್ನಡ ಹೋರಾಟಗಾರರನ್ನು ಬಟ್ಟೆ ಬಿಚ್ಚಿ ಹೊಡೆದು ಅಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.ರಾಜ್ಯ ಸರ್ಕಾರ ಮಾಡಬೇಕಾದ ಕೆಲಸವನ್ನು ಸಂಘಟನೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ನೇತೃತ್ವದಲ್ಲಿ ಸಂಘಟನೆಯವರು ಮಾಡಿದ್ದಾರೆ. ನಮ್ಮ ಹೋರಾಟವನ್ನು ಪೊಲೀಸರ ಮೂಲಕ ಹತ್ತಿಕ್ಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದ್ದು ಇದನ್ನು ಕೈಬಿಡಬೇಕು. ಹೋರಾಟದಲ್ಲಿ ಬಂಧಿಸಲ್ಪಟ್ಟ ಎಲ್ಲ ಕಾರ್ಯಕರ್ತರನ್ನು ಬೇಷರತ್ ಜಾಮೀನಿನ ಮೇಲೆ ಬಿಡುಗಡೆಗೊಳಿಸಬೇಕು. ಎಲ್ಲ ಮೊಕದ್ದಮೆಗಳನ್ನು ವಜಾಗೊಳಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.
ತಹಸೀಲ್ದಾರ್ ಅನುಪಸ್ಥಿತಿಯಲ್ಲಿ ಶಿರಸ್ತೇದಾರ ಮೂಲಕ ಮನವಿ ಸಲ್ಲಿಸಲಾಯಿತು. ದೇವೇಂದ್ರ ಶಿಂಧೆ, ಉಸಾಮ ಮಾಗಡಿ, ನೂರುಲ್ಲಾಶಾ ಮಕಾನದಾರ, ಇಂತಿಯಾಜ ಪಟ್ವೆಗಾರ, ಅಮಿನಸಾಬ ಇಟಗಿ, ಮೌಲಾಲಿ ಮಂಡಳ, ಮಹ್ಮದಲಿ ಲಂಗೋಟಿ, ಲಕ್ಷ್ಮಣ ದಳವಿ, ಕೃಷ್ಣಾ ಕಲಬುರ್ಗಿ, ಇಂತಿಯಾಜ ಡಾಲಾಯತ ಸೇರಿ ಅನೇಕರಿ ಇದ್ದರು.