ಬಿಸಿಯೂಟ ತಯಾರಿಕರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಪ್ರತಿಭಟನೆ

KannadaprabhaNewsNetwork |  
Published : Jul 01, 2024, 01:48 AM IST
ಹೂವಿನಹಡಗಲಿಯಲ್ಲಿ ಬಿಸಿಯೂಟ ತಯಾರಿಕರ ಫೆಡರೇಷನ್‌ ವತಿಯಿಂದ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ತಹಸೀಲ್ದಾರ್‌ ಮೂಲಕ ಶಾಸಕ ಕೃಷ್ಣನಾಯ್ಕಗೆ ಮನವಿ ಪತ್ರ ಸಲ್ಲಿಸಿದರು.  | Kannada Prabha

ಸಾರಾಂಶ

ಬಿಸಿಯೂಟ ತಯಾರಕರಿಗೆ ಈಡುಗಂಟು ಜಾರಿಗೊಳಿಸುವುದು ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ಹೂವಿನಹಡಗಲಿ: ಬಿಸಿಯೂಟ ತಯಾರಕರಿಗೆ ಈಡುಗಂಟು ಜಾರಿಗೊಳಿಸುವುದು ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ವಿಧಾನಸಭೆಯಲ್ಲಿ ಶಾಸಕ ಕೃಷ್ಣನಾಯ್ಕ ಗಮನ ಸೆಳೆಯಬೇಕೆಂದು ಒತ್ತಾಯಿಸಿ ಬಿಸಿಯೂಟ ತಯಾರಿಕರ ಫೆಡರೇಷನ್‌ ತಹಸೀಲ್ದಾರಗೆ ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸಮಿತಿ ಸದಸ್ಯ ಸುರೇಶ ಹಲಗಿ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯಡಿ ಅಡುಗೆಯವರಾಗಿ ಕೆಲಸ ಮಾಡುತ್ತಿರುವ 1,20,000 ಬಿಸಿಯೂಟ ತಯಾರಕ ಮಹಿಳೆಯರು ಕಳೆದ 22 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

ಶಾಲೆಗಳಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕರಿಗೆ ತಿಂಗಳಿಗೆ ₹3,600 ಮಾತ್ರ ವೇತನ ದೊರೆಯುತ್ತಿದ್ದು, ಇದರಿಂದ ಅವರು ಜೀವನ ನಡೆಸುವುದು ತುಂಬ ಕಷ್ಟಕರವಾಗಿದೆ. ಬಿಸಿಯೂಟ ತಯಾರಕರು ವಯೋ ನಿವೃತ್ತಿಯಾದಾಗ, ಅವರಿಗೆ ₹2 ಲಕ್ಷ ಈಡುಗಂಟು ಜಾರಿಗೊಳಿಸಬೇಕೆಂದು, ಹಲವು ಬಾರಿ ಸರ್ಕಾರಕ್ಕೆ ಮುಷ್ಕರ ಧರಣಿ ಹೋರಾಟಗಳ ಮೂಲಕ ಸರ್ಕಾರದ ಗಮನ ಸೆಳೆದರೂ ಇದುವರೆಗೂ ಈಡುಗಂಟು ಜಾರಿಯಾಗಿಲ್ಲ. ತಾವು ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಬೇಕೆಂದು ಮನವಿ ಮಾಡಿದರು.

ಬಿಸಿಯೂಟ ತಯಾರಿಕರ ಫೆಡರೇಷನ್‌ ಜಿಲ್ಲಾಧ್ಯಕ್ಷೆ ಎಚ್‌.ಅನುಸೂಯಾ ಮಾತನಾಡಿ, ಬಿಸಿಯೂಟ ಯೋಜನೆ ಆರಂಭದಿಂದಲ್ಲೂ ಇದುವರೆಗೆ ಶಾಲೆಗಳಲ್ಲಿ ಅನಾಹುತಕ್ಕೆ ಈಡಾಗಿ 12ಕ್ಕೂ ಹೆಚ್ಚು ಮಹಿಳೆಯರು ಸಾವಿಗೀಡಾಗಿದ್ದಾರೆ. ಆದರೆ ಅವರಿಗೆ ಯಾವುದೇ ರೀತಿಯ ಮರಣ ಪರಿಹಾರ ಜಾರಿ ಮಾಡಿಲ್ಲ. ಶಾಲೆಗಳಲ್ಲಿ ಅನಾಹುತಕ್ಕೀಡಾಗಿ ಮರಣ ಹೊಂದಿದ ಬಿಸಿಯೂಟ ತಯಾರಕರ ಅವಲಂಬಿತ, ಪೋಷಕರಿಗೆ ₹10 ಲಕ್ಷ ಪರಿಹಾರ ಧನವನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಬಜೆಟ್ ನಲ್ಲಿ ಘೋಷಿಸಿದ 1 ಸಾವಿರ ಹೆಚ್ಚುವರಿ ವೇತನವನ್ನು ಬಿಡುಗಡೆಗೊಳಿಸುವಂತೆ, ಶಾಸಕರು ಸರ್ಕಾರಕ್ಕೆ ಒತ್ತಾಯಿಸಿ, ಬಿಸಿಯೂಟ ತಯಾರಕ ಮಹಿಳೆಯರಿಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದ್ದಾರೆ.

ತಾಲೂಕು ಅಧ್ಯಕ್ಷೆ ಪಿ.ಕವಿತಾ, ಸುನೀತಾ, ರೋಹಿಣಿ, ಭಾಗ್ಯಮ್ಮ, ರತ್ನಮ್ಮ, ಕಿಸಾನ್‌ ಸಭಾ ಅಧ್ಯಕ್ಷ ಮುಕುಂದಗೌಡ ಸೇರಿದಂತೆ ಇತರರು ಉಪ ತಹಸೀಲ್ದಾರ್‌ ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಿದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ