ಗಾಣಗಾಪೂರದವರೆಗೆ ನೀರು ಹರಿಸಲು ಒತ್ತಾಯಿಸಿ ಪ್ರತಿಭಟನೆ

KannadaprabhaNewsNetwork | Published : Apr 6, 2024 12:47 AM

ಸಾರಾಂಶ

ಅಫಜಲ್ಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಸ್ತೆ, ತಡೆ, ಖಾಲಿ ಕೊಡ ಪ್ರದರ್ಶಿಸಿ ಹೋರಾಟ. ಭೀಮಾ ನದಿ ಪಾತ್ರದ ಗ್ರಾಮಗಳಲ್ಲಿ ನೀರಿಲ್ಲದೆ ಜನ ಜಾನುವಾರುಗಳು ಪರದಾಡುವಂತಾಗಿದೆ. ಮೊನ್ನೆ ನೀರಿನ ಕೊರತೆಯಿಂದಾಗಿ ಆಕಳು ಸಾವನ್ನಪ್ಪಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಜನಸಾಮಾನ್ಯರು ಕೂಡ ಸಾಯಬೇಕಾಗುತ್ತದೆ ಎಂದು ಆಕ್ರೋಶ.

ಕನ್ನಡಪ್ರಭ ವಾರ್ತೆ ಚವಡಾಪುರ

ನಾರಾಯಣಪೂರ ಜಲಾಶಯದಿಂದ ಅಫಜಲ್ಪುರ ತಾಲೂಕಿನ ಸೊನ್ನ ಗ್ರಾಮದ ಭೀಮಾ ಬ್ಯಾರೇಜ್‌ಗೆ 1 ಟಿಎಂಸಿ ನೀರು ಹರಿಸಲಾಗಿದೆ. ಆ ನೀರನ್ನು ಸುಕ್ಷೇತ್ರ ದೇವಲ ಗಾಣಗಾಪೂರದವರೆಗೆ ಹರಿಸಬೇಕೆಂದು ಆಗ್ರಹಿಸಿ ಅಫಜಲ್ಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಾಜ್ಯ, ರಾಷ್ಟ್ರೀಯ ಹೆದ್ದಾರಿ ತಡೆದು, ಖಾಲಿ ಕೊಡಗಳ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಯಿತು.

ಹೋರಾಟಗಾರ ಸಿದ್ದರಾಮ ದಣ್ಣೂರ ಮಾತನಾಡಿ, ಭೀಮಾ ನದಿಗೆ ನೀರು ಹರಿಸುವಂತೆ ಕಳೆದ 19 ದಿನಗಳಿಂದ ನಾವು ಗುಡ್ಡೆವಾಡಿ ಗ್ರಾಮದ ಭೀಮಾ ನದಿಯಲ್ಲಿ ಕುಳಿತು ಧರಣಿ ಸತ್ಯಾಗ್ರಹ ಮಾಡುತ್ತಿದ್ದೇವೆ. ಆದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ನಮ್ಮ ಸಮಸ್ಯೆ ಆಲಿಸುವ ಗೋಜಿಗೆ ಹೋಗಿಲ್ಲ. ಶಾಸಕ ಎಂ.ವೈ ಪಾಟೀಲ್ ಧರಣಿ ಕುಳಿತವರ ದೂರವಾಣಿ ಕರೆ ಕೂಡ ಸ್ವೀಕರಿಸುವ ಸೌಜನ್ಯತೆ ತೋರುತ್ತಿಲ್ಲ ಎಂದು ಹೇಳಿದರು.

ಭೀಮಾ ನದಿ ಪಾತ್ರದ ಗ್ರಾಮಗಳಲ್ಲಿ ನೀರಿಲ್ಲದೆ ಜನ ಜಾನುವಾರುಗಳು ಪರದಾಡುವಂತಾಗಿದೆ. ಮೊನ್ನೆ ನೀರಿನ ಕೊರೆಯಿಂದಾಗಿ ಆಕಳು ಸಾವನ್ನಪ್ಪಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಜನಸಾಮಾನ್ಯರು ಕೂಡ ಸಾಯಬೇಕಾಗುತ್ತದೆ. ನಮ್ಮ ಸಮಸ್ಯೆ ಕೇಳಲು ಅಧಿಕಾರದಲ್ಲಿದ್ದವರಿಗೆ ಆಗುವುದಿಲ್ಲವೆಂದರೆ ನಾವು ಯಾರಿಗೆ ಸಮಸ್ಯೆ ಹೇಳಬೇಕೆಂದು ಅಳಲು ತೋಡಿಕೊಂಡರು.

ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಮೇಶ ಹೂಗಾರ, ಬಿಜೆಪಿ ರಾಜ್ಯ ಮುಖಂಡ ಅವ್ವಣ್ಣ ಮ್ಯಾಕೇರಿ ಮಾತನಾಡಿ ಇಂತ ಆಧುನಿಕ ಯುಗದಲ್ಲೂ ಜನಸಾಮಾನ್ಯರು, ರೈತರು ಕುಡಿಯುವ ನೀರಿನ ಸೌಲಭ್ಯ ಪಡೆದುಕೊಳ್ಳಲು ಧರಣಿ ಕುಳಿತುಕೊಳ್ಳಬೇಕಾ? ಬೀದಿಗೀಳಿದು ಹೋರಾಟ ಮಾಡಬೇಕಾ? ಶಾಸಕರು, ಜಿಲ್ಲಾಧಿಕಾರಿಗಳು ಬರಿದಾಗಿರುವ ಭೀಮಾ ನದಿಗೆ ನೀರು ಹರಿಸಿ ಜನ ಜಾನುವಾರುಗಳ ಜೀವ ಉಳಿಸುವ ಕೆಲಸ ಮಾಡಲಿ ಎಂದು ಒತ್ತಾಯಿಸಿದರು.

ಬಸವರಾಜ ಚಾಂದಕವಟೆ, ಅಶೋಕ ಹೂಗಾರ,ಶರಣಬಸಪ್ಪ ಮಮಶೆಟ್ಟಿ ಮಾತನಾಡಿದರು. ಪ್ರತಿಭಟನೆಯಲ್ಲಿ ಭೋಜಪ್ಪ ಕೊಳ್ಳೂರ, ಲಕ್ಷ್ಮೀಕಾಂತ ಕುಮಸಗಿ, ಸಿದ್ದಣ್ಣ ಚಿಕ್ಕವಲಗಿ, ರಾಜು ಬಡದಾಳ, ಶರಣಪ್ಪ ಮ್ಯಾಕೇರಿ, ಯಲ್ಲಾಲಿಂಗ ನೆಲೋಗಿ, ರುಕ್ಮೂದ್ದೀನ, ಲಕ್ಷ್ಮಣಗೌಡ ಮೋನಟಗಿ, ಶಿವಕಾಂತ ಸಿಂಗೆ ಸೇರಿದಂತೆ ಘತ್ತರಗಾ, ದೇಸಾಯಿ ಕಲ್ಲೂರ, ಗುಡ್ಡೆವಾಡಿ ಸೇರಿದಂತೆ ಅಫಜಲ್ಪುರ, ಜೇವರ್ಗಿ ತಾಲೂಕಿನ ಗ್ರಾಮಗಳ ರೈತರು, ಮಹಿಳೆಯರು ಭಾಗಿಯಾಗಿದ್ದರು.

ರಾಜ್ಯ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ್ದರಿಂದ ಸುಡು ಬಿಸಿಲಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಉಂಟಾಯಿತು. ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಬಸ್ಸಿಗಾಗಿ ಪರದಾಡುವಂತಾಯಿತು. ಮರಳು ಕಳ್ಳರಿಂದ ಭೀಮಾ ನದಿ ಹಾಳು

ಹೋರಾಟಗಾರರು ತಹಸೀಲ್ದಾರ್‌ ಸಂಜೀವಕುಮಾರ ದಾಸರ್ ಸ್ಥಳಕ್ಕೆ ಬರುತ್ತಿದ್ದಂತೆ ಮರಳು ಕಳ್ಳರಿಂದ ಭೀಮಾ ನದಿ ಹಾಳಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಮರಳು ಕಳ್ಳರಿಗೆ ಸಾಥ್ ನೀಡುತ್ತಿದ್ದಾರೆ. ಅಧಿಕಾರಿಗಳಿಗೂ ಹಫ್ತಾ ಹೋಗುತ್ತಿದೆ. ಹೀಗಾಗಿ ಭೀಮಾ ನದಿ ಬರಿದಾಗಿದೆ ಎಂದು ಘೋಷಣೆ ಕೂಗಿದರು. ಇದರಿಂದ ಮುಜುಗರಕ್ಕೀಡಾದ ತಹಸೀಲ್ದಾರ್‌ ಸಂಜೀವಕುಮಾರ ದಾಸರ್ ಮರಳು ಮಾಫಿಯಾದವರಿಂದ ಅಧಿಕಾರಿಗಳು ಹಫ್ತಾ ಪಡೆದಿರುವ ದಾಖಲೆ ಇದ್ದರೆ ನೀಡಿ. ಸುಮ್ಮನೆ ಆರೋಪ ಮಾಡಬೇಡಿ. ನಾವು ಮರಳು ಮಾಫಿಯಾದ ಮೇಲೆ ಹದ್ದಿನ ಕಣ್ಣಿಟ್ಟಿದ್ದೇವೆ ಎಂದು ಸಮಜಾಯಿಷಿ ನೀಡಿದ ಘಟನೆ ನಡೆಯಿತು.

Share this article