ಹಮಾಲಿ ಕಾರ್ಮಿಕರಿಗೆ ಕೂಲಿ ಹೆಚ್ಚಳ, ಇಎಸ್‌ಐ, ಪಿಎಫ್ ಸೌಲಭ್ಯ ನೀಡಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Jul 11, 2025, 01:47 AM IST
10 | Kannada Prabha

ಸಾರಾಂಶ

ರಾಜ್ಯಾದ್ಯಂತ ಪಡಿತರ ಅನ್ನಭಾಗ್ಯ ಯೋಜನೆಯಡಿ ಆಹಾರ ನಿಗಮದ ಕೆಎಫ್‌ ಸಿಎಸಿ ಹಾಗೂ ಟಿಎಪಿಸಿಎಂಸ್ ಗೋದಾಮುಗಲ್ಲಿ ಆಹಾರ ಧಾನ್ಯಗಳ ಎತ್ತುವಳಿ ಲೋಡಿಂಗ್, ಅನ್ ಲೋಡಿಂಗ್ ಕೆಲಸ ಮಾಡುವ ಹಮಾಲಿ ಕಾರ್ಮಿಕರಿಗೆ ಸಮಗ್ರವಾಗಿ ಕಾರ್ಮಿಕ ಕಾನೂನುಗಳು ಇನ್ನೂ ಜಾರಿಯಾಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಅನ್ನಭಾಗ್ಯ ಯೋಜನೆ ಜಾರಿ ಮಾಡುವ ಹಮಾಲಿ ಕಾರ್ಮಿಕರಿಗೆ ಕೂಲಿ ಹೆಚ್ಚಳ ಮಾಡಿ, ಇಎಸ್‌ಐ, ಪಿಎಫ್ ಸೌಲಭ್ಯ ನೀಡಲು ಆಗ್ರಹಿಸಿ ಕರ್ನಾಟಕ ರಾಜ್ಯ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕ ಒಕ್ಕೂಟದವರು ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಪ್ರತಿಭಟಿಸಿದರು.

ಪಡಿತರ ಯೋಜನೆಗೆ ಅನ್ನಭಾಗ್ಯ ಎಂದು ಹೆಸರಿಟ್ಟು 12 ವರ್ಷ ಪೂರೈಸಿದೆ. ಆದರೆ, ಯೋಜನೆ ಜಾರಿ ಮಾಡುವ ಹಮಾಲಿ ಕಾರ್ಮಿಕರ ಬದುಕು ಇನ್ನೂ ಅತಂತ್ರವಾಗಿದೆ. ರಾಜ್ಯಾದ್ಯಂತ ಪಡಿತರ ಅನ್ನಭಾಗ್ಯ ಯೋಜನೆಯಡಿ ಆಹಾರ ನಿಗಮದ ಕೆಎಫ್‌ ಸಿಎಸಿ ಹಾಗೂ ಟಿಎಪಿಸಿಎಂಸ್ ಗೋದಾಮುಗಲ್ಲಿ ಆಹಾರ ಧಾನ್ಯಗಳ ಎತ್ತುವಳಿ ಲೋಡಿಂಗ್, ಅನ್ ಲೋಡಿಂಗ್ ಕೆಲಸ ಮಾಡುವ ಹಮಾಲಿ ಕಾರ್ಮಿಕರಿಗೆ ಸಮಗ್ರವಾಗಿ ಕಾರ್ಮಿಕ ಕಾನೂನುಗಳು ಇನ್ನೂ ಜಾರಿಯಾಗುತ್ತಿಲ್ಲ. ಸಾಗಾಣಿಕೆ ಗುತ್ತಿಗೆದಾರರಿಂದ ಕಿರುಕುಳ ಮಾತ್ರ ತಪ್ಪಿಲ್ಲಾ ಎಂದು ಅವರು ಆರೋಪಿಸಿದರು.

ಕನಿಷ್ಠ ವೇತನ ಕಾಯಿದೆ ಪ್ರಕಾರ ಪ್ರತಿವರ್ಷ ಬೆಲೆ ಏರಿಕೆ, ತುಟ್ಟಿಭತ್ಯೆಗೆ ಅನುಗುಣವಾಗಿ ಕನಿಷ್ಠವೇತನ ನಿಗಧಿ ಮಾಡಬೇಕು. ಆದರೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಯಾವುದೇ ಮಾನದಂಡವಿಲ್ಲದೇ ತನ್ನಿಚ್ಚೆ ಬಂದಾಗ ಕೂಲಿ ಹೆಚ್ಚಳ ಮಾಡುತ್ತಿದ್ದು, ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಎಂದು ಅವರು ದೂರಿದರು.

ಟೆಂಡರ್ ಆಗಿರುವ ತಾಲೂಕುಗಳಿಗೆ ಮಾತ್ರ ಕ್ವಿಂಟಾಲ್‌ ಗೆ 23.62 ರೂ ನಿಗದಿ ಮಾಡಿದ್ದು, 120 ಹೆಚ್ಚು ತಾಲೂಕುಗಳಲ್ಲಿ ತಾಂತ್ರಿಕ ಕಾರಣಗಳಿಂದ ಟೆಂಡರ್ ಆಗದೇ ಉಳಿದಿದೆ. ಅಲ್ಲಿ ಹಳೆಯ ದರವೇ ಇದ್ದು ಕಾರ್ಮಿಕರಿಗೆ ಪ್ರತಿ ತಿಂಗಳು ಲಕ್ಷಾಂತರ ರು. ನಷ್ಟವಾಗುತ್ತಿದೆ ಎಂದು ಅವರು ಆರೋಪಿಸಿದರು.

ಪಿರಿಯಾಪಟ್ಟಣ, ಕೆ.ಆರ್. ನಗರ ಕೆಎಫ್‌ ಸಿಎಸ್‌ಸಿ, ಸರಗೂರು, ಎಚ್.ಡಿ. ಕೋಟೆ, ಹುಣಸೂರು, ನಂಜನಗೂಡು ತಾಲೂಕುಗಳಿಗೆ ಟೆಂಡರ್ ಆಗದೇ ಉಳಿದಿದ್ದು, ಆ ತಾಲೂಕುಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಈ ಕೂಡಲೇ ಚಿಲ್ಲರೇ ಸಾಗಾಣಿಕೆ ಕ್ವಿಂಟಾಲ್‌ ಗೆ 23.62 ರೂ, ಸಗಟು ಸಾಗಾಣಿಕೆ ಟೆಂಡರ್ ಕ್ವಿಂಟಾಲ್‌ ಗೆ 10.92 ರೂ. ನಿಗದಿಗೊಳಿಸಿ ಆದೇಶ ಮಾಡಬೇಕು. ಜೊತೆಗೆ ಕೂಲಿ ಹೆಚ್ಚಳ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಆಹಾರ ನಿಗಮದ ಗೋದಾಮುಗಳಲ್ಲಿ ಆಹಾರ ಧಾನ್ಯಗಳ ಎತ್ತುವಳಿ ಕೆಲಸ ಮಾಡುವ ಹಮಾಲಿ ಕಾರ್ಮಿಕರಿಗೆ ಇಎಸ್‌ಐ, ಪಿಎಫ್ ಕಡ್ಡಾಯವಾಗಿದ್ದರೂ ಜಾರಿಯಾಗಿಲ್ಲ. ಫೆಬ್ರವರಿಯಿಂದಲೂ ಚಿಲ್ಲರೇ ಸಾಗಾಣಿಕೆ ಗುತ್ತಿಗೆದಾರರು ಕಾರ್ಮಿಕರಿಂದ ಇಎಸ್‌ಐ, ಪಿಎಫ್ ವಂತಿಗೆ ಕಡಿತ ಮಾಡಿದ್ದು, ಇಲ್ಲಿಯವರೆಗೂ ಪಾವತಿ ಮಾಡದೇ ಇರುವುದು ಕಾನೂನು ಬಾಹಿರ. ಕೂಡಲೇ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಸರಿಯಾಗಿ ಸಂಬಳ ಪಾವತಿಸಿ, ಆಯಾ ತಿಂಗಳು ಇಎಸ್‌ಐ, ಪಿಎಫ್ ವಂತಿಕೆ ಪಾವತಿಸಿ ರಸೀದಿ ನೀಡಲು ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದರು.

ಒಕ್ಕೂಟದ ರಾಜ್ಯಾಧ್ಯಕ್ಷ ವರದರಾಜೇಂದ್ರ, ಜಿಲ್ಲಾಧ್ಯಕ್ಷ ಕರಿನಾಯಕ, ಕಾರ್ಯದರ್ಶಿ ಜಿ. ಮಹದೇವ, ಉಪಾಧ್ಯಕ್ಷ ನರಸಿಂಹಮೂರ್ತಿ, ವಿಕ್ರಮ್ ನಾಯಕ, ಕುಮಾರ್, ಕೃಷ್ಣಪ್ಪ ಮೊದಲಾದವರು ಇದ್ದರು.

PREV