ಶಾಸಕ ವೇದವ್ಯಾಸ್‌ ಕಾಮತ್‌ ವಿರುದ್ಧ ಕೇಸು ವಾಪಸಾತಿ, ಹಲ್ಲೆಕೋರರ ಬಂಧನ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : Mar 5, 2025 12:34 AM

ಸಾರಾಂಶ

ಶಾಸಕ ವೇದವ್ಯಾಸ ಕಾಮತ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಹಾಗೂ ಪರಿಶಿಷ್ಟ ಸಮುದಾಯದ ಯುವಕನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿ ದೌರ್ಜನ್ಯ ನಡೆಸಿರುವುದನ್ನು ವಿರೋಧಿಸಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಮಂಗಳವಾರ ಹಂಪನಕಟ್ಟೆಯ ಮಿನಿ ವಿಧಾನಸೌಧದ ಬಳಿ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಹಾಗೂ ಪರಿಶಿಷ್ಟ ಸಮುದಾಯದ ಯುವಕನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿ ದೌರ್ಜನ್ಯ ನಡೆಸಿರುವುದನ್ನು ವಿರೋಧಿಸಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಮಂಗಳವಾರ ಹಂಪನಕಟ್ಟೆಯ ಮಿನಿ ವಿಧಾನಸೌಧದ ಬಳಿ ಪ್ರತಿಭಟನೆ ನಡೆಯಿತು.ಪ್ರತಿಭಟನೆಯಲ್ಲಿ ಮಾತನಾಡಿದ ದ.ಕ. ಸಂಸದ ಬ್ರಿಜೇಶ್ ಚೌಟ, ಕಾಂಗ್ರೆಸ್ ಆಡಳಿತದಲ್ಲಿ, ಜನಪ್ರತಿನಿಧಿಗಳನ್ನೂ ಗುರಿಯಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಾಂಗ್ಲಾ ಮಾದರಿಯಲ್ಲಿ ರಾಜ್ಯಪಾಲರನ್ನು ಓಡಿಸುತ್ತೇವೆ ಎಂದು ಹೇಳಿಕೆ ನೀಡಿದ್ದ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಮೇಲೆ ಕೇಸು ದಾಖಲಿಸಲು ಪೊಲೀಸರಿಗೆ ಕಾನೂನು ಸಲಹೆ ಬೇಕಿತ್ತು. ಆದರೆ ಪುಂಡ ಪೋಕರಿಗಳು ದೂರು ನೀಡಿದಾಗ ಏನೂ ವಿಚಾರಿಸದೆ ಶಾಸಕರ ವಿರುದ್ಧ ಕೇಸು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಇದು ಪ್ರಥಮ ಪ್ರಕರಣ ಅಲ್ಲ, ಈಗಾಗಲೇ ಶಾಸಕರಾದ ಹರೀಶ್ ಪೂಂಜಾ, ಡಾ. ಭರತ್ ಶೆಟ್ಟಿ, ಈಗ ವೇದವ್ಯಾಸ್‌ ಕಾಮತ್ ಮೇಲೆ ಮತ್ತೊಮ್ಮೆ ಕೇಸು ದಾಖಲಿಸಲಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಬಿಜೆಪಿ ಸರ್ಕಾರ ಇದ್ದಾಗ ಪೊಲೀಸ್ ಇಲಾಖೆಗೆ ಯಾವ ರೀತಿ ಸಹಕಾರ ನೀಡಿದೆ ಎಂದು ಪೊಲೀಸರು ತಿಳಿಯಬೇಕು. ಶಾಸಕರ ಮೇಲೆ ಹಾಕಿರುವ ಕೇಸು ವಾಪಸ್‌ ಪಡೆಯದಿದ್ದರೆ ಇಡೀ ಜಿಲ್ಲೆಯ ಕಾರ್ಯಕರ್ತರನ್ನು ಸೇರಿಸಿ ಹೋರಾಟ ನಡೆಸಲಾಗುವುದು. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದವರನ್ನು ತತ್‌ಕ್ಷಣ ಬಂಧಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಮಾತನಾಡಿ, ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಪೊಲೀಸರು ಸ್ಥಳ ಮಹಜರಿಗೆ ಅಲ್ಲಿಯೇ ಇದ್ದ ದಲಿತ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಯಾಕೆ ಬಂಧಿಸಿಲ್ಲ. ನ್ಯಾಯ ಎಲ್ಲರಿಗೂ ಒಂದೇ ರೀತಿ ಇರಬೇಕು ಎಂದರು.ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಮುಖಂಡರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ರಾಜಗೋಪಾಲ ರೈ, ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ಮನೋಜ್ ಕುಮಾರ್, ದಿವಾಕರ್ ಪಾಂಡೇಶ್ವರ, ಭಾನುಮತಿ, ವಿಜಯ ಕುಮಾರ್ ಶೆಟ್ಟಿ, ನಂದನ್ ಮಲ್ಯ, ನಿತಿನ್ ಕುಮಾರ್, ಪೂರ್ಣಿಮಾ, ವಸಂತ ಪೂಜಾರಿ ಮತ್ತಿತರರಿದ್ದರು.

Share this article