ವಕ್ಫ್‌ ತಿದ್ದುಪಡಿ ಮಸೂದೆ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : Apr 5, 2025 12:49 AM

ಸಾರಾಂಶ

ವಕ್ಫ್ ತಿದ್ದುಪಡಿ ಮಸೂದೆ ಹಿಂಪಡೆಯಲು ಒತ್ತಾಯಿಸಿ ಶುಕ್ರವಾರ ಪಟ್ಟಣದ ಅಂಜುಮನ್ ಇಸ್ಲಾಂ ಕಮಿಟಿ ನೇತೃತ್ವದಲ್ಲಿ ಸ್ಥಳೀಯ ಕಾಲಕಾಲೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನೆ ನಡೆಯಿತು.

ಗಜೇಂದ್ರಗಡ: ವಕ್ಫ್ ತಿದ್ದುಪಡಿ ಮಸೂದೆ ಹಿಂಪಡೆಯಲು ಒತ್ತಾಯಿಸಿ ಶುಕ್ರವಾರ ಪಟ್ಟಣದ ಅಂಜುಮನ್ ಇಸ್ಲಾಂ ಕಮಿಟಿ ನೇತೃತ್ವದಲ್ಲಿ ಸ್ಥಳೀಯ ಕಾಲಕಾಲೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದ ಅಂಜುಮನ್ ಇಸ್ಲಾಂ ಕಮಿಟಿ ಮಾಜಿ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ, ವಕ್ಫ್‌ ತಿದ್ದುಪಡಿ ಮಸೂದೆ ಜಾರಿಯಿಂದ ಮುಸ್ಲಿಂ ಸಮುದಾಯಕ್ಕೆ ಮಾರಕವಾಗಲಿದೆ ಎಂದರು.

ದೇಶದ ಸಂವಿಧಾನವು ಎಲ್ಲ ಸಮುದಾಯದವರಿಗೂ ಅವರದ್ದೇ ಆದ ಹಬ್ಬ ಆಚರಣೆ, ಪೂಜೆ, ನಮಾಜ್ ಮಾಡುವ ಧಾರ್ಮಿಕ ಹಕ್ಕನ್ನು ನೀಡಿದೆ. ಆದರೆ ಕೇಂದ್ರ ಸರ್ಕಾರ ಸಮಾಜದಲ್ಲಿ ಶಾಂತಿ ಭಂಗ ಮಾಡುವಂತಹ, ಜನ ವಿರೋಧಿ ಕಾನೂನುಗಳನ್ನು ರೂಪಿಸಲು ಮುಂದಾಗಿರುವುದು ಖಂಡನೀಯ. ಪ್ರಧಾನಮಂತ್ರಿ ದೇಶದ ಸಂಪತ್ತನ್ನು ಒಂದೊಂದಾಗಿ ಮಾರುತ್ತಿದ್ದಾರೆ. ಈಗ ಮುಸಲ್ಮಾನರ ಸಂಪತ್ತಿನ ಮೇಲೆ ಕಣ್ಣು ಹಾಕಿದ್ದಾರೆ. ವಕ್ಫ್ ತಿದ್ದುಪಡಿ ಮಸೂದೆಯಲ್ಲಿ ವಕ್ಫ್ ಆಸ್ತಿ ಮತ್ತು ದೇಶದ ಭವಿಷ್ಯಕ್ಕೆ ಅಪಾಯವನ್ನುಂಟು ಮಾಡುವ ತಿದ್ದುಪಡಿಗಳಿದ್ದು, ಕೂಡಲೇ ಮಸೂದೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಅಂಜುಮನ್ ಇಸ್ಲಾಂ ಕಮಿಟಿ ಮಾಜಿ ಚೇರಮನ್ ಎ.ಡಿ. ಕೋಲಕಾರ ಮಾತನಾಡಿ, ಧಾರ್ಮಿಕ ಸ್ವಾತಂತ್ರ‍್ಯ ಹಾಗೂ ಒಕ್ಕೂಟ ವ್ಯವಸ್ಥೆ ಮೇಲಿನ ದಾಳಿಯಾಗಿದೆ. ವಕ್ಫ್ ಮಸೂದೆ ಮುಸ್ಲಿಂ ಸಮುದಾಯದ ಹಿತಾಸಕ್ತಿಗೆ ಹಾನಿ ಮಾಡುತ್ತದೆ. ಮಸೂದೆಯನ್ನು ಹಿಂಪಡೆಯಲು ರಾಷ್ಟ್ರಪತಿ ಮಧ್ಯಸ್ಥಿಕೆ ವಹಿಸಿ ಕೋಟ್ಯಂತರ ಅಲ್ಪಸಂಖ್ಯಾತರ ರಕ್ಷಣೆಗೆ ಮುಂದಾಬೇಕು ಎಂದು ಒತ್ತಾಯಿಸಿದರು.ಪುರಸಭೆ ಸದಸ್ಯ ರಾಜು ಸಾಂಗ್ಲೀಕರ ಮಾತನಾಡಿ, ವಕ್ಫ್ ತಿದ್ದುಪಡಿ ಮಸೂದೆ ದ್ವೇಷಪೂರಿತ. ಅಲ್ಪಸಂಖ್ಯಾತರ ಹಕ್ಕುಗಳನ್ನು ಹತ್ತಿಕ್ಕುವ ಎಲ್ಲ ಪ್ರಯತ್ನಗಳನ್ನು ಪ್ರಧಾನಿ ಮೋದಿ ಅವರು ಹಂತ ಹಂತವಾಗಿ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ದೂರಿದರು.ಇದಕ್ಕೂ ಮುನ್ನ ಇಲ್ಲಿನ ಇಲ್ಲಿನ ಜಾಮೀಯಾ ಮಸೀದಿಯಿಂದ ಕಪ್ಪು ಪಟ್ಟಿ ಧರಿಸಿ ದುರ್ಗಾ ವೃತ್ತ, ಜೋಡು ರಸ್ತೆ ಮಾರ್ಗವಾಗಿ ಕಾಲಕಾಲೇಶ್ವರ ವೃತ್ತದವರೆಗೆ ಸಾಗಿದ ಮೆರವಣಿಗೆ ಬಳಿಕ ಪ್ರತಿಭಟನಾ ಸಭೆಯಾಗಿ ಮಾರ್ಪಟ್ಟಿತು. ವಕ್ಫ್‌ ತಿದ್ದುಪಡಿ ಮಸೂದೆ ಹಿಂಪಡೆಯಲು ಒತ್ತಾಯಿಸಿ ಪ್ರತಿಭಟನಾಕಾರರು ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.ಈ ವೇಳೆ ಅಂಜುಮನ್ ಇಸ್ಲಾಂ ಕಮಿಟಿ ಚೇರಮನ್ ಹಸನಸಾಬ ತಟಗಾರ, ಸುಭಾನಸಾಬ ಆರಗಿದ್ದಿ, ನಾಸೀರ್ ಸುರಪುರ, ಮಾಸುಮಲಿ ಮದಗಾರ, ದಾದು ಹಣಗಿ, ಹಾಸೀಂ ಹಿರೇಹಾಳ, ಆರೀಫ್ ಮನಿಯಾರ, ಇಮ್ರಾನ್ ಅತ್ತಾರ, ಭಾಷಾ ಮುದಗಲ್ಲ, ಖಾಸಿಂಸಾಬ ಮುಚ್ಚಾಲಿ, ಮೆಹಬೂಬ್ ಮುದಗಲ್ಲ, ಭಾಷೇಸಾಬ ಕರ್ನಾಚಿ, ಮುರ್ತುಜಾ ಒಂಟಿ ಸೇರಿ ಇತರರು ಇದ್ದರು.

Share this article