ಹಾನಗಲ್ಲ: ಕಳೆದ ವರ್ಷದ ಬೆಳೆವಿಮೆ ಇನ್ನೂ ಬಂದಿಲ್ಲ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರೈತರ ಸಮಸ್ಯೆಗಳ ಪರಿಹಾರಕ್ಕೆ ಯಾವ ಗ್ಯಾರಂಟಿಯೂ ಇಲ್ಲದಾಗಿದೆ. ಜು. 9ರಿಂದ ಅನಿರ್ದಿಷ್ಟ ಅವಧಿಯ ಧರಣಿ ಅನಿವಾರ್ಯ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ ರೈತರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಾಗಿದೆ. ಇಲ್ಲಿನ ರೈತರಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ. ಮುಂಗಾರು ಮಳೆ ಆವಾಂತರದಿಂದಾಗಿ ಬಿತ್ತಿದ ಬೀಜ ಹುಟ್ಟಲಿಲ್ಲ. ಹುಟ್ಟಿದ್ದೂ ಸತ್ತು ಹೋಗಿದೆ. ಕೆಲವೆಡೆ ಇನ್ನೂ ಬಿತ್ತನೆಯೇ ಆಗಿಲ್ಲ. ಇದರ ನಡುವೆ ಈಗ ಮತ್ತೆ ಬೆಳೆ ವಿಮೆ ತುಂಬಲು ಸರ್ಕಾರ ಆದೇಶ ಹೊರಡಿಸಿದೆ. ರೈತರ ಕೈಯಲ್ಲಿ ಹಣವಿಲ್ಲ. ಕೇವಲ ಭೂಮಿಯಲ್ಲಿ ದುಡಿಯುವುದೇ ರೈತರ ಕಾಯಕವಾದರೂ ಫಲ ಮಾತ್ರ ಸಿಗುತ್ತಿಲ್ಲ ಎಂದರು.
ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಹಿಂದಿನ ವರ್ಷದ ಬೆಳೆವಿಮೆಯೇ ಇನ್ನೂ ಸಂದಾಯವಾಗಿಲ್ಲ. ವಿಮಾ ಕಂಪನಿಗಳು ರೈತರನ್ನು ದಾರಿ ತಪ್ಪಿಸುತ್ತಿವೆ. ಬೆಳೆವಿಮೆ ತುಂಬಿದ ರೈತರಿಗೆ ಸಕಾಲಿಕವಾಗಿ ವಿಮಾ ಪರಿಹಾರ ಕೊಡಿಸಲಾಗದ ಸರ್ಕಾರಗಳಿಗೆ ರೈತರ ಕಾಳಜಿ ಇಲ್ಲ. ವಿಮೆ ಕಂತು ತುಂಬಲು ಸಮಯ ನಿಗದಿ ಮಾಡುವ ಸರ್ಕಾರ ಹಾಗೂ ವಿಮಾ ಕಂಪನಿಗಳು ಸಮಯ ನಿಗದಿ ಮಾಡಿ ರೈತರಿಗೆ ವಿಮಾ ಪರಿಹಾರ ನೀಡದಿರುವುದು ರೈತರ ಶೋಷಣೆಯಾಗಿದೆ ಎಂದರು.ಜು. 8ರ ಒಳಗಾಗಿ ತಾಲೂಕಿನ ಎಲ್ಲ ರೈತರಿಗೆ ಕಳೆದ ವರ್ಷದ ಬೆಳೆವಿಮಾ ಪರಹಾರ ಜಮಾ ಆಗದಿದ್ದರೆ ಜು. 9ರಿಂದಲೇ ತಹಸೀಲ್ದಾರ್ ಕಚೇರಿ ಎದುರು ಜೆಡಿಎಸ್ ನೇತೃತ್ವದಲ್ಲಿ ಪಕ್ಷಾತೀತವಾಗಿ ಅನಿರ್ದಿಷ್ಟ ಕಾಲದ ಧರಣಿ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ಎಸ್.ಎಸ್. ಹಿರೇಮಠ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಚಿಗಳ್ಳಿ, ಮೂಕಪ್ಪ ಪಡೆಪ್ಪನವರ, ನಾಗಪ್ಪ ಹಳೆಮನಿ, ರುದ್ರಪ್ಪ ಸಂಕಣ್ಣನವರ, ಮಹಾಂತೇಶ, ಸಾವಿತ್ರಾ, ಚನ್ನವೀರಪ್ಪ ಹೊಸಕೊಪ್ಪ, ಫಕ್ಕೀರಪ್ಪ ಬ್ಯಾಗವಾದಿ, ಬಸವರಾಜ ಕೋಳೂರ, ಶಂಕ್ರಪ್ಪ ಕೆರಿಮತ್ತಿಹಳ್ಳಿ, ಸಿದ್ದಪ್ಪ ಮಾಯಕ್ಕನವರ, ಯಲ್ಲಪ್ಪ ಕೋಟಿ, ಗುತ್ತೆಪ್ಪ ದೊಡ್ಡಮನಿ, ರಾಮಪ್ಪ, ಸಲಿಂ ಸಮನಳ್ಳಿ, ಬಸನಗೌಡ ಪಾಟೀಲ, ಯಲ್ಲಪ್ಪ ಸವಣೂರ, ಬಸವರಾಜ ಶಿವಣ್ಣನವರ ಮೊದಲಾದವರಿದ್ದರು.