ವಿಮಾ ಪರಿಹಾರ ನೀಡದಿದ್ದಲ್ಲಿ ಪ್ರತಿಭಟನೆ: ಸದಾನಂದ ಭಟ್ಟ

KannadaprabhaNewsNetwork | Published : Apr 28, 2025 11:48 PM

ಸಾರಾಂಶ

ವಿಮಾ ಕಂಪೆನಿ ತಕ್ಷಣ ನೀಡದಿದ್ದಲ್ಲಿ ರೈತರ ಪರವಾಗಿ ಬೃಹತ್ ಹೋರಾಟಕ್ಕೆ ಬಿಜೆಪಿ ಸಿದ್ಧವಾಗಿದೆ

ಶಿರಸಿ: ಜಿಲ್ಲೆಯ ರೈತರಿಗೆ ನೀಡಬೇಕಾದ ೨೦೨೩ನೇ ವರ್ಷದ ಹವಾಮಾನ ಆಧಾರಿತ ವಿಮಾ ಪರಿಹಾರವನ್ನು ಕೇಂದ್ರದ ಆದೇಶದಂತೆ ವಿಮಾ ಕಂಪೆನಿ ತಕ್ಷಣ ನೀಡದಿದ್ದಲ್ಲಿ ರೈತರ ಪರವಾಗಿ ಬೃಹತ್ ಹೋರಾಟಕ್ಕೆ ಬಿಜೆಪಿ ಸಿದ್ಧವಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ಟ ನಿಡಗೋಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ ೧೨೭ ಗ್ರಾಪಂ ವ್ಯಾಪ್ತಿಯ ರೈತರಿಗೆ ೨೦೨೩ ಸಾಲಿನ ಹವಾಮಾನ ಆಧಾರಿತ ವಿಮಾ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡುವಂತೆ ಕ್ಷೇಮ ಜನರಲ್ ಇನ್ಸುರೆನ್ಸ್ ಕಂಪೆನಿಗೆ ಕೇಂದ್ರ ಸರ್ಕಾರ ಮಾರ್ಚ್ ೬ ಮತ್ತು ೧೭ರಂದು ಆದೇಶ ಮಾಡಿತ್ತು. ಸಂಸದ ವಿಶ್ವೇಶ್ವರ ಹೆಗಡೆ ಅವರ ನಿರಂತರ ಪ್ರಯತ್ನದ ಫಲವಾಗಿ ಇನ್ಸೂರೆನ್ಸ್ ಕಂಪೆನಿ ರೈತರಿಗೆ ನೀಡಬೇಕಾದ ವಿಮಾ ಪರಿಹಾರವನ್ನು ನಿಗದಿತ ಸಮಯದಲ್ಲಿ ನೀಡದಿದ್ದನ್ನು ಗಮನಿಸಿ ಕೇಂದ್ರ ಸರ್ಕಾರ ತಾಂತ್ರಿಕ ಸಮಿತಿಯ ಮುಂದೆ ಚರ್ಚಿಸಿ ಏ.೭ರಂದು ಪುನಃ ಇನ್ಸೂರೆನ್ಸ್ ಕಂಪನಿಗೆ ೭ ದಿನದ ಒಳಗಡೆಯಲ್ಲಿ ರೈತರಿಗೆ ನೀಡಬೇಕಾದ ವಿಮಾ ಪರಿಹಾರವನ್ನು ಬಿಡುಗಡೆ ಮಾಡಲು ವಿವರವಾದ ಆದೇಶವನ್ನು ಮಾಡಿತ್ತು. ಇದಕ್ಕೆ ಕ್ಷೇಮ ಇನ್ಸೂರೆನ್ಸ್ ಕಂಪೆನಿಯವರು ಏ.೧೪ರಂದು ಸಮಿತಿಗೆ ಪತ್ರವನ್ನು ಬರೆದು ತಮಗೆ ಹಣವನ್ನು ನೀಡಲು ಮೂರು ವಾರಗಳ ಅವಧಿಯನ್ನು ನೀಡುವಂತೆ ಕೋರಿಕೊಂಡಿದ್ದು, ಈ ಅವಧಿಯು ಮೇ ೫ನೇ ತಾರೀಖಿನವರೆಗೆ ಇದ್ದು ಅಷ್ಟರಲ್ಲಿ ಇನ್ಸೂರೆನ್ಸ್ ಕಂಪೆನಿಯು ತಾನು ನೀಡಬೇಕಾದ ವಿಮಾ ಪರಿಹಾರವನ್ನು ರೈತರಿಗೆ ಕೇಂದ್ರ ಸರ್ಕಾರದ ಆದೇಶದಂತೆ ಜಮಾ ಮಾಡುತ್ತದೆ ಮತ್ತು ಕೇಂದ್ರ ಸರ್ಕಾರದ ಸೂಚನೆಯನ್ನು ಪಾಲಿಸಿ ಆಡಳಿತಾತ್ಮಕ ಮತ್ತು ದಂಡದಿಂದ ಮುಕ್ತವಾಗುತ್ತದೆ ಎಂಬ ವಿಶ್ವಾಸದಲ್ಲಿದ್ದೇವೆ. ಇನ್ಸೂರೆನ್ಸ್ ಕಂಪನಿ ತನ್ನ ಪತ್ರದಲ್ಲಿ ಹೇಳಿದಂತೆ ಈ ವರ್ಷ ರೈತರಿಗೆ ಪರಿಹಾರ ನೀಡುತ್ತೇವೆ, ಆದರೆ ಮುಂದಿನ ದಿನದಲ್ಲಿ ರಾಜ್ಯ ಸರ್ಕಾರ ನೀಡಬೇಕಾದ ದಾಖಲೆಗಳನ್ನು ನಿಗದಿತ ಸಮಯದಲ್ಲಿ ನೀಡದಿದ್ದಲ್ಲಿ ಪರಿಹಾರ ನೀಡುವುದು ಕಷ್ಟ ಎಂದು ಉಲ್ಲೇಖಿಸಿರುವುದನ್ನು ರಾಜ್ಯ ಸರ್ಕಾರ ಮತ್ತು ಕೆಎಸ್‌ಎಂಡಿಸಿ ಗಂಭೀರವಾಗಿ ಪರಿಗಣಿಸಬೇಕಾಗಿದೆ. ರೈತರಿಗೆ ದೊರಕಬೇಕಾದ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಮತ್ತು ಸಂಸದ ಕಾಗೇರಿ ಅವರ ಪ್ರಯತ್ನಕ್ಕೆ ಸ್ಪಂದಿಸಿ ಇನ್ಸೂರೆನ್ಸ್ ಕಂಪೆನಿ ಇನ್ನು ಒಂದು ವಾರದಲ್ಲಿ ನೀಡಬೇಕಾದ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡಲಿ ಎಂದು ಎಚ್ಚರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

Share this article