ಸಿದ್ದಾಪುರ: ಪಟ್ಟಣದ ರಾಜ್ಯ ಹೆದ್ದಾರಿಯಲ್ಲಿ ನಡೆದ ರಸ್ತೆ ಅಗಲೀಕರಣದಲ್ಲಿ ಜಮೀನು ಕಳೆದುಕೊಂಡವರಿಗೆ ಕಾಮಗಾರಿ ನಡೆದು ವರ್ಷಗಳೇ ಕಳೆದರೂ ಇನ್ನೂ ಪರಿಹಾರ ದೊರೆತಿಲ್ಲ. ಕೂಡಲೇ ಸರ್ಕಾರ ಪರಿಹಾರ ನೀಡಬೇಕು. ಒಂದು ತಿಂಗಳಲ್ಲಿ ಪರಿಹಾರ ನೀಡದಿದ್ದರೆ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಆಸ್ತಿ ಕಳೆದುಕೊಂಡ ಸಂತ್ರಸ್ತರು ಎಚ್ಚರಿಸಿದ್ದಾರೆ.ಪಟ್ಟಣದಲ್ಲಿ ಭಾನಾವಾರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಪಂ ಸದಸ್ಯ, ಸಂತ್ರಸ್ತ ಮಾರುತಿ ಟಿ. ನಾಯ್ಕ ಹೊಸೂರು ಹಾಗೂ ಇತರರು ಸಿದ್ದಾಪುರ ಪಪಂ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿಯನ್ನು ಚತುಷ್ಪಥವನ್ನಾಗಿ ಮಾಡಲು ಸಾಕಷ್ಟು ಜನ ಮನೆ, ಅಂಗಡಿ, ಕಾಂಪೌಂಡ್, ಬಾವಿ, ಶೌಚಾಲಯ, ತೆಂಗಿನ ಮರಗಳು ಹಾಗೂ ಇತರೆ ಬೆಲೆಬಾಳುವ ಮರಗಳನ್ನು ಕಳೆದುಕೊಂಡಿದ್ದೇವೆ. ಆಸ್ತಿಯ ದಾಖಲೆ ಹೊಂದಿರುವ ೬೨ ಕುಟುಂಬಗಳು ಜಮೀನುಗಳನ್ನು ಕಳೆದುಕೊಂಡಿದ್ದು, ಅದರ ಬಾಬ್ತು ೨ಕೋಟಿ ೭೫ ಲಕ್ಷ ರು ಪರಿಹಾರ ಬರಬೇಕಿದೆ. ಸರ್ಕಾರದ ಮಟ್ಟದಲ್ಲಿ ನಿಯಮಾವಳಿಯಂತೆ ಲೊಕೋಪಯೋಗಿ, ಎಸಿ, ಡಿಸಿ ಅವರು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಟ್ಟಿದ್ದಾರೆ. ಈಗ ನಾವು ಜಾಗ ಬಿಟ್ಟುಕೊಟ್ಟು ಮೂರು ವರ್ಷ ಆಗಿದೆ. ಡಿಸಿ ಅವರು ನಮ್ಮ ಜಾಗದ ಹಣ ಎಷ್ಟು ಎಂಬುದರ ಬಗ್ಗೆ ಅಪ್ರುವಲ್ ಕೂಡ ಮಾಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಅಣ್ಣಪ್ಪ ನಾಯ್ಕ ಮಾತನಾಡಿ ರಸ್ತೆ ಅಗಲೀಕರಣಕ್ಕಾಗಿ ಸರ್ಕಾರದಿಂದ ನೋಟಿಸ್ ಬಂದ ತಕ್ಷಣ ಅದಕ್ಕೆ ಸ್ಪಂದಿಸಿ ಇಲ್ಲಿಯ ಜನತೆ ತಮ್ಮ ಜಮೀನನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ, ಸರ್ಕಾರ ಪರಿಹಾರ ನೀಡದೇ ಇರುವುದು ಮಾತ್ರ ಶೋಚನೀಯವಾಗಿದೆ. ಕೂಡಲೇ ಜಮೀನು ಬಿಟ್ಟುಕೊಟ್ಟವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಮೈಕೋ ರೋಡ್ರಿಗೀಸ್, ರಿಜ್ವಾನ್ ಶೇಖ್, ವಿನಾಯಕ ತಿಮ್ಮಪ್ಪ ಬಿ, ಚಂದ್ರಕಾಂತ ಪೈ, ರಾಮು ಪೈ, ನೇತ್ರಾವತಿ ಬಾಂದಿ, ಲಲಿತಾ ಅಂಬಿಗ, ದಿವ್ಯ ರೋಡ್ರಿಗೀಸ್, ಜ್ಯೂಲಿ, ಶಿವಕುಮಾರ ಪುಟ್ಟಯ್ಯ ಪೂಜಾರಿ, ಮನೋಹರ, ಜೈರಾಮ ಈರಾ ನಾಯ್ಕ, ಸಂತೋಷ ಪೈ, ಮಂಜುನಾಥ ಆರ್.ಭಟ್ಟ ಇತರರಿದ್ದರು.