ಕನ್ನಡಪ್ರಭ ವಾರ್ತೆ ಬೇಲೂರುಅಸಮರ್ಪಕ ಎಸ್ಐಆರ್ ಪ್ರಕ್ರಿಯೆಯನ್ನು ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಎಸ್ ಡಿ ಪಿ ಐ ನಿಂದ ಅರೇಹಳ್ಳಿಯಲ್ಲಿ ಪ್ರತಿಭಟನೆ ನಡೆಯಿತು. ಜಮಾಅತೆ ಇಸ್ಲಾಮಿ ಹಿಂದ್ನ ಮುಖಂಡ ಮುಜೀಬುರ್ ರೆಹಮಾನ್ ಮಾತನಾಡಿ, ಎಸ್ಐಆರ್ ಪ್ರಕ್ರಿಯೆಯು ಮತದಾರರ ಹಕ್ಕುಗಳ ಕುರಿತು ಆತಂಕವನ್ನು ಉಂಟುಮಾಡಿದ್ದು, ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕನ್ನು ರಕ್ಷಿಸುವುದು ಅತ್ಯಗತ್ಯವಾಗಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು. ಆದ್ದರಿಂದ ಮತದಾನದ ಹಕ್ಕನ್ನು ಉಳಿಸಲು ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಹೇಳಿದರು. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಅಣ್ಣಪ್ಪ ಮಾತನಾಡಿ, ಎಲ್ಲ ಸಮುದಾಯಗಳ ಜನರು ಒಗ್ಗೂಡಿ ಜನವಿರೋಧಿ ನೀತಿಗಳು ಹಾಗೂ ಕರಾಳ ಕಾನೂನುಗಳ ವಿರುದ್ಧ ಸಂವಿಧಾನಾತ್ಮಕವಾಗಿ ಹೋರಾಟ ನಡೆಸಿದಾಗ ದೇಶದಲ್ಲಿ ಜನಸಾಮಾನ್ಯರಿಗೆ ನ್ಯಾಯ ಸಿಗುತ್ತದೆ ಎಂದರು.ಎಸ್ಡಿಪಿಐನ ಜಿಲ್ಲಾಧ್ಯಕ್ಷ ಇಮ್ರಾನ್ ಅರೇಹಳ್ಳಿ ಮಾತನಾಡಿ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಸಂವಿಧಾನದ ಆಶಯಗಳನ್ನು ರಕ್ಷಿಸಲು ಪ್ರತಿಯೊಬ್ಬರೂ ಪಣತೊಡಬೇಕು. ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಪೊಲೀಸ್ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವುದರ ಜೊತೆಗೆ, ಹೋರಾಟ ನಿರತ ವಿದ್ಯಾರ್ಥಿಗಳಿಗೆ ಬೆನ್ನೆಲುಬಾಗಿ ನಿಲ್ಲುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಈ ಪ್ರತಿಭಟನೆಯಲ್ಲಿ ಅರೇಹಳ್ಳಿಯ ನೂರುಲ್ ಇಸ್ಲಾಂ ಮಸೀದಿಯ ಉಸ್ತಾದ್ ಶರೀಫ್ ಮಿಸ್ಬಾಹಿ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ನಿಂಗರಾಜು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.