ಕುಮಟಾ: ತಾಲೂಕಿನ ಮೂರೂರು, ಕಲ್ಲಬ್ಬೆ, ಬೊಗ್ರಿಬೈಲ್, ಕಂದವಳ್ಳಿ ಮುಂತಾದ ಭಾಗಗಳಿಗೆ ದೂರದ ಬಡಾಳದ ಮೂಲಕ ಸುತ್ತುಬಳಸಿ ಮಾರ್ಗದಲ್ಲಿ ನೀಡಿದ ಹಳೆಯ ವಿದ್ಯುತ್ ಸಂಪರ್ಕವನ್ನು ಬದಲಿಸಿ, ನೇರವಾಗಿ ಕುಮಟಾದಿಂದ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಹೆಸ್ಕಾಂ ಕಚೇರಿ ಎದುರು ಜಮಾಯಿಸಿ ಪ್ರತಿಭಟನೆ ಮೂಲಕ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಮೂರೂರು ಹಾಗೂ ಕಲ್ಲಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರವಾಗಿ ವಿದ್ಯುತ್ ವ್ಯತ್ಯಯವಾಗುತ್ತಿರುವುದು ಹಲವು ವರ್ಷಗಳಿಂದ ನಡೆದುಬಂದಿದೆ. ವಿದ್ಯುತ್ ವ್ಯತ್ಯಯ ಹಾಗೂ ವೋಲ್ಟೇಜ್ ಏರಿಳಿತ ಪ್ರತಿನಿತ್ಯದ ಸಮಸ್ಯೆಯಾಗಿದೆ. ಕಾರಣ ಈ ಭಾಗಕ್ಕೆ ವಿದ್ಯುತ್ ಸಂಪರ್ಕ ಮಾರ್ಗವನ್ನು ಬಹಳ ಕಾಲದ ಹಿಂದೆಯೇ ದೂರದ ಬಡಾಳದ ಮೂಲಕ ನೀಡಿರುವುದಾಗಿದೆ. ಅರಣ್ಯ ಪ್ರದೇಶ ಹಾಗೂ ತೀರಾ ದೂರದ ಸುತ್ತುಬಳಸಿ ಮಾರ್ಗದಲ್ಲಿ ವಿದ್ಯುತ್ ಸಂಪರ್ಕ ನಮ್ಮ ಭಾಗಕ್ಕೆ ಬಂದಿರುವುದರಿಂದ ಮಳೆಗಾಲದ ದಿನಗಳಲ್ಲಂತೂ ವಿಪರೀತ ವಿದ್ಯುತ್ ಸಮಸ್ಯೆ ಕಾಡುತ್ತದೆ. ಉಳಿದ ದಿನಗಳಲ್ಲೂ ವಿದ್ಯುತ್ ಸಮಸ್ಯೆಯಿಂದ ರೈತರು ತೀರಾ ಹೈರಾಣಾಗುತ್ತಿದ್ದಾರೆ. ಆದ್ದರಿಂದ ನಮ್ಮ ಭಾಗಕ್ಕೆ ನೇರವಾಗಿ ಕುಮಟಾದಿಂದ ವಿದ್ಯುತ್ ಮುಖ್ಯ ಸಂಪರ್ಕ ಜೋಡಿಸಿದರೆ ಕೆಲವೇ ಕಿಮೀ ದೂರದಿಂದ ಎಲ್ಲೆಡೆ ಉತ್ತಮ ವಿದ್ಯುತ್ ಸಂಪರ್ಕವನ್ನು ನೀಡಬಹುದಾಗಿದೆ. ಇದಕ್ಕಾಗಿ ಎರಡು ವರ್ಷಗಳಿಂದ ಹೋರಾಟ ನಡೆಸಿದ್ದು, ಹೆಸ್ಕಾಂಗೆ ಹಲವು ಬಾರಿ ಮನವಿ ಮಾಡಲಾಗಿದೆ.
ಈಗಾಗಲೇ ಮೂರೂರು ೧೧ ಕೆವಿ ವಿದ್ಯುತ್ ಮಾರ್ಗಕ್ಕೆ ಸಂಬಂಧಿಸಿ ೨೦೨೪ರ ಫೆಬ್ರವರಿಯಲ್ಲಿ ₹೪೩.೫ ಲಕ್ಷ ಅಂದಾಜು ವೆಚ್ಚಕ್ಕೆ ಅನುಮೋದನೆಗೊಂಡು ಕಾರ್ಯಾದೇಶವಾಗಿದ್ದರೂ ಟೆಂಡರ್ ಕರೆದಿಲ್ಲ. ಇದಕ್ಕೆ ಕಾರಣ ತಿಳಿಯುತ್ತಿಲ್ಲ. ಕೂಡಲೇ ಸಂಬಂಧಪಟ್ಟ ಕಾಮಗಾರಿಯನ್ನು ನಡೆಸಿ ಮೂರೂರು ಹಾಗೂ ಕಲ್ಲಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತಾಗಬೇಕು ಎಂದು ಗ್ರಾಮಸ್ಥರು ಮನವಿ ಮೂಲಕ ಆಗ್ರಹಿಸಿದರು. ಬೇಡಿಕೆ ಈಡೇರದಿದ್ದಲ್ಲಿ ತೀವ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಹೆಸ್ಕಾಂ ಸೆಕ್ಷನ್ ಅಧಿಕಾರಿ ವಿಜಯಕುಮಾರ ತೊಡೂರ ಮನವಿ ಸ್ವೀಕರಿಸಿದರು. ಎಂ.ಎಸ್. ಹೆಗಡೆ, ಸುಬ್ರಹ್ಮಣ್ಯ ಭಾಗ್ವತ, ಕೃಷ್ಣ ಹೆಗಡೆ, ನಾಗೇಶ ಕೊಡಿಯಾ, ಕೃಷ್ಣ ಗೌಡ, ಸುಬ್ರಾಯ ಹೆಗಡೆ, ಪಂಚಾಯಿತಿ ಅಧ್ಯಕ್ಷೆ ಭಾರತಿ ನಾಯ್ಕ, ಗಣೇಶ ಭಟ್, ಸರ್ವೇಶ್ವರ ಕೋಣಾರೆ, ವೆಂಕಟ್ರಮಣ ಶಾಸ್ತ್ರಿ ಇತರರು ಇದ್ದರು.