ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆಯಿಂದ ಇಡೀ ದೇಶವೇ ತಲೆತೆಗ್ಗಿಸುವಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹಮಂತ್ರಿ ಪರಮೇಶ್ವರ್ ಪ್ರಕರಣ ಬಗ್ಗೆ ಇದು ಸಾಮಾನ್ಯ ಎಂದು ಹೇಳಿಕೆ ನೀಡಿದ್ದು ಖಂಡನೀಯ ಎಂದು ಬಿಜೆಪಿ ಹಿರಿಯ ಮುಖಂಡ ಶಾಂತರಾಜ್ ಪಾಟೀಲ್ ಹೇಳಿದರು.ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಘಟಕ, ಹಿಂದೂ ರಾಜಾಗರಣ ವೇದಿಕೆ, ತಾಲೂಕು ಬಿಜೆಪಿ ಮುಖಂಡರ ನೇತೃತ್ವದಲ್ಲಿ ನಡೆದ ನೇಹಾ ಹಿರೇಮಠ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಹಿಂದೂ ರಾಷ್ಟ್ರದ ಯುವತಿಯರ ಮೇಲೆ ನಿರಂತರ ದೌರ್ಜನ್ಯ, ಅತ್ಯಾಚಾರ, ಕೊಲೆ ಪ್ರಕರಣಗಳು ನಡೆಯುತ್ತಿದೆ. ರಾಜ್ಯ ಸರ್ಕಾರ ಓಟ್ ಬ್ಯಾಂಕ್‌ಗೋಸ್ಕರ ಕೊಲೆ ಆರೋಪಿ ಫಯಾಜ್ ವಿರುದ್ಧ ಕ್ರಮ ಕೈಕೊಳ್ಳದಿರುವುದು ಸರಿಯಲ್ಲ. ಕೊಲೆ ಆರೋಪಿಗೆ ಗಲ್ಲುಶಿಕ್ಷೆ ವಿಧಿಸುವ ಬಗ್ಗೆ ರಾಷ್ಟ್ರಪತಿ ಅವರಿಗೆ ವರದಿಯನ್ನು ಶಿಫಾರಸು ಮಾಡಬೇಕು ಎಂದರು.ಟ್ರಸ್ಟ್ ಅಧ್ಯಕ್ಷ ಎಂ.ಆರ್.ಮಹೇಶ್ ಮಾತನಾಡಿ, ನೇಹಾ ಹತ್ಯೆ ಹಿಂದೂ ರಾಷ್ಟ್ರಕ್ಕೆ ಅವಮಾನವಾಗಿದೆ. ಕಾಂಗ್ರೆಸ್ ಎನ್‍ಎಸ್‍ಯುಐ ಘಟಕ ಹತ್ಯೆ ಪ್ರಕರಣಗಳು ನಡೆದರೆ ಪ್ರತಿಭಟಿಸಬೇಕಿತ್ತು. ಆದರೆ, ಪ್ರತಿಭಟನೆ ಮಾಡಲಿಲ್ಲ, ಎಲ್ಲಿ ಹೋಗಿದೆ ಎನ್‍ಎಸ್‍ಯುಐ ಘಟಕ ಎಂದರು.
ಹಿಂದೂ ಜಾಗರಣ ಪ್ರಾಂತ್ಯ ಸಂಚಾಲಕ ಸತೀಶ್ ಪೂಜಾರಿ ಮಾತನಾಡಿ, ಕೊಲೆ ಪ್ರಕರಣಗಳ ಆರೋಪಿಗಳ ಬಗ್ಗೆ ಮೃದುಧೋರಣೆ ತೋರದೇ ಅಂತವರಿಗೆ ಕಠಿಣ ಶಿಕ್ಷೆ ಕೊಡಿಸಿಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸರ್ಕಾರಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ, ಕೊಲೆ ಪ್ರಕರಣ, ಹಂತಕನ ವಿರುದ್ದ ಘೋಷಣೆಗಳನ್ನು ಕೂಗಿದರು. ಕಾಲೇಜಿನ ವಿದ್ಯಾರ್ಥಿನಿಯರು ಮಾತನಾಡಿದರು.
ಭಾರತೀಯ ಕೀಸಾನ ಸಂಘದ ಪ್ರಾಂತ್ಯ ಸಂಚಾಲಕ ಪ್ರವೀಣ್ ರಾಂಪುರ, ಅರಕೆರೆ ಹನುಮಂತಪ್ಪ, ಕೆ.ವಿ. ಚನ್ನಪ್ಪ, ನ್ಯಾಮತಿ ಸಿ.ಕೆ.ರವಿ, ನೆಲಹೊನ್ನೆ ದೇವರಾಜ್ ಇತರರು ಪಾಲ್ಗೊಂಡಿದ್ದರು.ನೇಹಾ ಹಿರೇಮಠ ಅವರ ನಿಧನಕ್ಕೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಒಂದು ನಿಮಿಷ ಮೌನಾಚಾರಣೆ ನಡೆಸಿ, ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿಸಲಾಯಿತು.
- - - -22ಎಚ್.ಎಲ್.ಐ1:ಹುಬ್ಬಳ್ಳಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಹೊನ್ನಾಳಿ ಪಟ್ಟಣದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಮೆರವಣೆಗೆ ನಡೆಸಿ, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನೇಹಾ ಸಾವಿಗೆ ಮೌನಚಾರಣೆ ನಡೆಸಲಾಯಿತು.