ರೈತರ ಜಮೀನು ಸರ್ವೇ ವಿಳಂಬ ಖಂಡಿಸಿ ಹೂವಿನಹಡಗಲಿಯಲ್ಲಿ ಪ್ರತಿಭಟನೆ

KannadaprabhaNewsNetwork |  
Published : Apr 11, 2026, 02:30 AM IST
ಪಾರ್ಟಿ | Kannada Prabha

ಸಾರಾಂಶ

ಭೂಮಾಪನ ಇಲಾಖೆಯಲ್ಲಿ ಸರ್ವೇಯರ್‌ ಕೊರತೆಯಿಂದ ರಾಜ್ಯಾದ್ಯಂತ ರೈತರ 5.82 ಲಕ್ಷ ಅರ್ಜಿಗಳು ಬಾಕಿ ಇವೆ. ಇದಕ್ಕೆ ಸರ್ಕಾರದ ನಿರ್ಲಕ್ಷ್ಯ ಧೋರಣೆಯೇ ಕಾರಣ ಎಂದು ಆಮ್‌ ಆದ್ಮಿ ಪಾರ್ಟಿ ತಾಲೂಕು ಅಧ್ಯಕ್ಷ ಶ್ರೀಧರ ನಾಯ್ಕ ಆರೋಪಿಸಿದ್ದಾರೆ.

ಹೂವಿನಹಡಗಲಿ: ಭೂಮಾಪನ ಇಲಾಖೆಯಲ್ಲಿ ಸರ್ವೇಯರ್‌ ಕೊರತೆಯಿಂದ ರಾಜ್ಯಾದ್ಯಂತ ರೈತರ 5.82 ಲಕ್ಷ ಅರ್ಜಿಗಳು ಬಾಕಿ ಇವೆ. ಇದಕ್ಕೆ ಸರ್ಕಾರದ ನಿರ್ಲಕ್ಷ್ಯ ಧೋರಣೆಯೇ ಕಾರಣ ಎಂದು ಆಮ್‌ ಆದ್ಮಿ ಪಾರ್ಟಿ ತಾಲೂಕು ಅಧ್ಯಕ್ಷ ಶ್ರೀಧರ ನಾಯ್ಕ ಆರೋಪಿಸಿದ್ದಾರೆ.

ಇಲ್ಲಿನ ಆಮ್‌ ಆದ್ಮಿ ಪಾರ್ಟಿ, ಕೆಆರ್‌ಎಸ್‌ ಪಕ್ಷ, ಈರುಳ್ಳಿ ಬೆಳೆಗಾರರ ಸಂಘ, ವಿವಿಧ ರೈತ ಪರ ಸಂಘಟನೆಗಳ ಸಹಯೋಗದಲ್ಲಿ, ಸರ್ವೇ ಇಲಾಖೆಯಲ್ಲಿ ರೈತರ ಜಮೀನುಗಳನ್ನು ಅಳತೆ ವಿಳಂಬ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಭೂಮಾಪನ ಇಲಾಖೆಯಲ್ಲಿ ಸರ್ಕಾರಿ ಸರ್ವೇಯರ್‌ ಇಲ್ಲ, ಅತ್ತ ಪರವಾನಗಿ ಸರ್ವೇಯರೂ ಇಲ್ಲ. ಇದರಿಂದ ರಾಜ್ಯದಲ್ಲಿ ಜಮೀನು ಅಳತೆಗಾಗಿ ಸಲ್ಲಿಸಿದ್ದ ರೈತರ 5.82 ಲಕ್ಷ ಅರ್ಜಿಗಳು ಕೊಳೆಯುತ್ತಿವೆ ಎಂದು ಹೇಳಿದರು.

ತಾಲೂಕಿನ ಭೂಮಾಪನ ಇಲಾಖೆ 2 ಸಾವಿರ ಅರ್ಜಿ, ವಿಜಯನಗರ ಜಿಲ್ಲೆಯಲ್ಲಿ 28 ಸಾವಿರ ಅರ್ಜಿ ಸೇರಿದಂತೆ ರಾಜ್ಯದಲ್ಲಿ ಒಟ್ಟು 5.82 ಲಕ್ಷ ರೈತರ ಜಮೀನುಗಳ ಅಳಕೆಗಾಗಿ, ಸರ್ಕಾರಕ್ಕೆ ಹಣ ಪಾವತಿ ಮಾಡಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ತಮ್ಮ ಜಮೀನುಗಳನ್ನು ಅಳತೆ ಮಾಡಲು ಸರ್ಕಾರಕ್ಕೆ ಪಾವತಿ ಮಾಡಿದ ಹಣವೂ ವಾಪಸ್‌ ಮಾಡುತ್ತಿಲ್ಲ, ರೈತರು ಪದೇ ಪದೇ ಹಣ ಪಾವತಿ ಮಾಡಿ ಅರ್ಜಿ ಸಲ್ಲಿಸಿ ರೋಸಿ ಹೋಗಿದ್ದಾರೆ. ಕಚೇರಿಗೆ ಅಲೆದು ಸುಸ್ತಾಗಿದ್ದಾರೆ. ಈ ಪ್ರಕರಣ ಬಹಳಷ್ಟು ಗಂಭೀರವಿದ್ದರೂ ಸರ್ಕಾರ ಚಕಾರ ಎತ್ತದಿರುವುದು ತೀರಾ ದುರಂತದ ಸಂಗತಿ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕ ಅಧ್ಯಕ್ಷ ಎಚ್‌. ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಶಿವರಾಜ ಹೊಳಗುಂದಿ ಮಾತನಾಡಿ, ಕಳೆದೆರಡು ತಿಂಗಳಿನಿಂದ ರೈತರ ಜಮೀನುಗಳ ಅಳತೆ ಕೆಲಸ, ಹದ್ದುಬಸ್ತು, 11ಇ ಅರ್ಜಿಗಳು, ಪೋಡಿ ಅರ್ಜಿಗಳು, ದಾರಿ ಅರ್ಜಿಗಳು ಹೀಗೆ ಹಲವಾರು ಸರ್ವೇ ಇಲಾಖೆಯ ಅರ್ಜಿ ವಿಲೇವಾರಿಯಾಗುತ್ತಿಲ್ಲ. ಭೂಮಾಪನ ಇಲಾಖೆ ರೈತರ ಪಾಲಿಗೆ ಸತ್ತು ಹೋಗಿದೆ. ರೈತರ ಸಮಸ್ಯೆ ಕೇಳುವವರಿಲ್ಲದಂತಾಗಿದೆ. ಇದರಿಂದ ರೈತರ ಮಕ್ಕಳ ವಿದ್ಯಾಭ್ಯಾಸ, ಆಸ್ಪತ್ರೆ ವೆಚ್ಚ, ಮದುವೆ-ಸಮಾರಂಭಗಳಿಗೆ ಹಣ ಹೊಂದಿರುವುದು ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೈತರು ಈ ದೇಶದ ಬೆನ್ನೆಲುಬು ಎಂದು ಸರ್ಕಾರ ಹೇಳುತ್ತದೆ. ಆದರೆ ಅವರ ನೋವು ಆಲಿಸುವವರೇ ಇಲ್ಲವಾಗಿದ್ದಾರೆ ಎಂದು ಹೇಳಿದರು.

ಈ ಕೂಡಲೇ ಸರ್ಕಾರ ರೈತರ ಜಮೀನು ಅಳತೆ ಮಾಡಲು ಸರ್ವೇಯರ್‌ಗಳನ್ನು ನಿಯೋಜನೆ ಮಾಡಬೇಕು. ವಿಳಂಬ ಧೋರಣೆ ತಾಳಿದರೆ ಮುಂದಿನ ದಿನಗಳಲ್ಲಿ ಕಚೇರಿಗೆ ಬೀಗ ಜಡಿದು ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಂಘಟನೆಯ ಗನಿಸಾಬ್‌, ಕೆಆರ್‌ಎಸ್‌ ಪಾರ್ಟಿ ಜಿಲ್ಲಾಧ್ಯಕ್ಷ ಸುಭಾನ್‌ ಹುಗಲೂರು, ಚಂದ್ರಶೇಖರ ದೊಡ್ಮನಿ, ಕೆ. ಲಲಿತಮ್ಮ, ಕೆ. ಮಂಜುನಾಥ, ಕಾಗನೂರು ಮಂಜುನಾಥ, ಫಕ್ಕೀರಪ್ಪ, ಬಸವರಾಜ, ಅಖಂಡ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ಎಚ್‌. ಶಂಭುನಾಥ, ದುರುಗಪ್ಪ, ಮಂಜುನಾಯ್ಕ, ವಿಠಲನಾಯ್ಕ, ಗಿರಿನಾಯ್ಕ, ಶಿವಾನಂದಪ್ಪ, ಶಂಭುನಾಥ, ನಾಗಪ್ಪ ಇದ್ದರು. ತಹಸೀಲ್ದಾರ್‌ ಕೆ.ಎಂ. ಗುರುಬಸವರಾಜ ಅವರಿಗೆ ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೂಲಿಕಾರರ ಮಗಳು ಪಿಯುಸಿಯಲ್ಲಿ ಜಿಲ್ಲೆಗೆ ಮೂರನೇ ಟಾಪರ್
ಕದ್ರಿ ಕಂಬಳ ಜಂಕ್ಷನ್‌ ರಸ್ತೆ 1 ಕೋಟಿ ರು.ಗಳಲ್ಲಿ ಕಾಂಕ್ರಿಟ್‌ಗೆ ಶಿಲಾನ್ಯಾಸ