ಡಿಸಿ ಸತ್ಯಭಾಮಗೆ ಮನವಿ । ನೆರೆಯ ರಾಜ್ಯಗಳಲ್ಲಿ ವರದಿ ಮಾದರಿಯ ಕಾನೂನು
ಕರ್ನಾಟಕದ ನೆಲದ ಮಕ್ಕಳ ಬದುಕು ಹಸನು ಮಾಡುವ ನಿಟ್ಟಿನಲ್ಲಿ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಶೀಘ್ರ ಜಾರಿಗೆ ಆಗ್ರಹಿಸಿ ‘ನಮ್ಮ ಕರ್ನಾಟಕ ಸೇನೆ’ ಸಂಘಟನೆಯಿಂದ ಜಿಲ್ಲಾಡಳಿತದ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಲಾಯಿತು.
‘ನಮ್ಮ ಕರ್ನಾಟಕ ಸೇನೆ’ ಜಿಲ್ಲಾಧ್ಯಕ್ಷ ವೈ.ಡಿ.ಭಾನುಪ್ರಕಾಶ್ ಮಾತನಾಡಿ, ‘ಕರ್ನಾಟಕದ ನೆಲದ ಮಕ್ಕಳ ಬದುಕು ಹಸನು ಮಾಡಲು ೧೯೮೪ ಜನವರಿ ೨೫ ರಂದು ಡಾ.ಸರೋಜಿನಿ ಮಹಿಷಿ ನೇತೃತ್ವದಲ್ಲಿ ಸಮಿತಿ ರಚನೆಯಾಗಿ ೧೯೮೬ರಲ್ಲಿ ಈ ಸಮಿತಿಯು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿರುತ್ತಾರೆ. ಈ ವರದಿಯು ರಾಜ್ಯದಲ್ಲಿ ಕನ್ನಡಿಗರ ಉದ್ಯೋಗ ಸಮಸ್ಯೆಯ ಸ್ವರೂಪದ ಅಧ್ಯಯನ ಕಾರ್ಯದ ಸಾದುವಾದ ಪರಿಹಾರ ಮಾರ್ಗಗಳನ್ನು ಹೊಂದಿತ್ತು. ವರದಿಯನ್ನು ಗಮನಿಸಿ, ಇದೇ ಮಾದರಿಯಲ್ಲಿ ಕೆಲವು ರಾಜ್ಯಗಳು ಕಾನೂನು ರಚಿಸಿವೆ ಎಂದರೆ ಡಾ.ಸರೋಜಿನಿ ಮಹಿಷಿ ವರದಿಯ ಮಹತ್ವ ಎಂತಹದ್ದು ತಿಳಿದುಕೊಳ್ಳಬೇಕು. ನಮ್ಮ ಪಕ್ಕದ ರಾಜ್ಯಗಳಾದ ತಮಿಳುನಾಡಿನಲ್ಲಿ ಸ್ಥಳೀಯ ಭಾಷಿಕರಿಗೆ ಶೇಕಡ ೯೦, ಆಂದ್ರದಲ್ಲಿ ಶೇ ೮೦ ರಷ್ಟು ಮೀಸಲಾತಿ ನೀಡಿ ಸರ್ಕಾರಗಳು ಆದೇಶ ಹೊರಡಿಸಿರುವುದು ಗಮನಾರ್ಹ ವಿಷಯವಾಗಿದೆ’ ಎಂದು ಹೇಳಿದರು.‘೨೦೧೬ ರಲ್ಲಿ ಪ್ರೊ.ಎಸ್.ಟಿ.ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಡಾ.ಸರೋಜಿನಿ ಮಹಿಷಿ ವರದಿಯ ಪುನರ್ ಪರಿಶೀಲನಾ ಸಮಿತಿ ರಚಿಸಲಾಯಿತು. ಆಗ ಸಮಿತಿಯು ವರದಿ ನೀಡಿದಾಗ ಸರ್ಕಾರಿ ವಲಯದಲ್ಲಿಯೇ ಹೆಚ್ಚು ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುತ್ತಿದ್ದವು. ಆದರೆ, ಈಗ ಜಾಗತೀಕರಣದ ಪರಿಣಾಮವಾಗಿ ಸರ್ಕಾರಿ ವಲಯದ ಉದ್ಯಮಗಳು ಹಿನ್ನೆಲೆಗೆ ಸರಿಯುತ್ತಿವೆ’ ಎಂದು ತಿಳಿಸಿದರು.
‘ಎಲ್ಲಾ ಅಂಶಗಳನ್ನು ಪರಿಶೀಲಿಸಿದ ನಂತರ, ಪರಿಷ್ಕರಿಸಿದ ವರದಿಯಲ್ಲಿ ಕಾಯ್ದೆ ಮಾಡಲು ಅಗತ್ಯವಿರುವ ೧೪ ಅಂಶಗಳನ್ನು ಪಟ್ಟಿ ಮಾಡಿ, ಸರ್ಕಾರದ ಅವಗಾಹನೆಗೆ ಸಲ್ಲಿಸಿ ಅನುಷ್ಠಾನಕ್ಕೆ ಮನವಿ ಮಾಡಿದ್ದಾರೆ. ಕನ್ನಡಿಗರ ಮೇಲೆ ಅಪಾರ ಗೌರವ ಮತ್ತು ಕಾಳಜಿ ಇರುವ ತಾವು ಅತಿ ಶೀಘ್ರದಲ್ಲಿ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಅನುಷ್ಠಾನಕ್ಕೆ ತರಬೇಕೆಂದು ಈ ಮೂಲಕ ತಮ್ಮಲ್ಲಿ ಮನವಿ ಮಾಡುತ್ತೇವೆ’ ಎಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳುಹಿಸಲು ಮನವಿ ಪತ್ರ ನೀಡಿದರು.
‘ನಮ್ಮ ಕರ್ನಾಟಕ ಸೇನೆ’ಯ ಮಹಿಳಾ ಜಿಲ್ಲಾಧ್ಯಕ್ಷೆ ತನುಪ್ರಿಯಾ ಆಚಾರ್, ಉಪಾಧ್ಯಕ್ಷ ರವೀಂದ್ರ ಕುಮಾರ್, ಎಚ್.ಎನ್.ಬಸವರಾಜ್, ಎಚ್.ಆರ್.ರೂಪ, ಎಂ.ಜಿ.ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್, ಆಲೂರು ತಾಲೂಕು ಅಧ್ಯಕ್ಷ ಆರಿಫ್ ಹಾಗೂ ಯುವ ಘಟಕ ಅಧ್ಯಕ್ಷ ಆಸೀಫ್, ಅರಸೀಕೆರೆ ಮಹಿಳಾ ತಾಲೂಕು ಅಧ್ಯಕ್ಷ ಚೇತನ್, ಅರುಣಕುಮಾರ್, ಇತರರು ಇದ್ದರು.