ಕನ್ನಡಪ್ರಭ ವಾರ್ತೆ ರಾಯಚೂರು
ಮುಷ್ಕರ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲೆ ವಿವಿಧ ತಾಲೂಕುಗಳಲ್ಲಿ ಲಾರಿಗಳ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಇದರಿಂದಾಗಿ ಕಾಯಿಪಲ್ಲೆ, ನಿತ್ಯದ ಸಾಮಗ್ರಿಗಳು, ಕೃಷಿ ಬೆಳೆಗಳು ಸೇರಿದಂತೆ ಲಾರಿ ವಾಹನಗಳ ಮೇಲೆ ಅವಲಂಭಿತಗೊಂಡ ವ್ಯಾಪಾರ-ವಹಿವಾಟಿಗೆ ಸಮಸ್ಯೆ ಉಂಟಾಗಿತ್ತು.
ರಾಯಚೂರು ನಗರದ ಕರ್ನಾಟಕ ಸಂಘದ ಮುಂಭಾಗದಲ್ಲಿ ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪ್ರಮುಖ ರಸ್ತೆ, ವೃತ್ತ ಹಾಗೂ ಬೀದಿಗಳ ಮೂಲಕ ಜಿಲ್ಲಾಧಿಕಾರಿ ಕಚೇರಿ ಸಮೀಪದ ಟಿಪ್ಪು ಸುಲ್ತಾನ ಉದ್ಯಾನವನಕ್ಕೆ ಬಂದು ತಲುಪಿತು. ನಂತರ ಸಂಘದ ಪದಾಧಿಕಾರಿಗಳು, ಸದಸ್ಯರು ಧರಣಿ ನಡೆಸಿ ಜಿಲ್ಲಾಡಳಿತ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.ನೂತನ ಕಾಯ್ದೆಯಡಿ ಚಾಲಕರು ಅಪಘಾತ ಮಾಡಿ ಪರಾರಿಯಾದರೆ 7 ಲಕ್ಷ ದಂಡ ಹಾಗೂ 10 ವರ್ಷ ಜೈಲು ಶಿಕ್ಷೆ ವಿಧಿಸಿರುವುದು ಖಂಡನೀಯ. ಭಾರತೀಯ ನ್ಯಾಯ ಸಂಹಿತೆ ಎರಡನೇ 2023ರ ಅಡಿಯಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣಗಳ ಪ್ರಸ್ತಾಪಿತ ಕಾನೂನಿನಲ್ಲಿರುವ ನೂನ್ಯತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಮರುಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.
ಲಾರಿ ಮಾಲೀಕರ ಅನಿರ್ದಿಷ್ಟ ಮುಷ್ಕರಕ್ಕೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು. ಖಾಸಗಿ ಮತ್ತು ಟ್ಯಾಕ್ಸಿ ವಾಹನ ಚಾಲಕರ ಸಂಘ, ಆಜಾದ್ ಆಟೋ ಚಾಲಕರ ಸಂಘ, ಚಾಲಕರ ಒಕ್ಕೂಟ, ಶಂಕರನಾಗ ಸಾರಥಿ ಆಟೋ ಸಂಘ, ಶಕ್ತಿನಗರ ಟಿಪ್ಪರ್ ಮಾಲೀಕರ ಸಂಘ ಸೇರಿದಂತೆ ಅನೇಕರ ಸಂಘಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿ ಮುಷ್ಕರಕ್ಕೆ ಬೆಂಬಲಿಸಿದರು.ವಾಹನಗಳ ತಡೆ
ಮುಂಜಾಗ್ರತಾ ಕ್ರಮವಾಗಿ ಬೇರೆ ಊರುಗಳಿಂದ ಬರುವ ಲಾರಿ, ಟ್ಯಾಂಕರ್‌ಗಲನ್ನು ಸಂಚಾರಿ ಪೊಲೀಸರು ಜಿಲ್ಲಾಧಿಕಾರಿ ನಿವಾಸದ ಸಮೀಪ ತಡೆದು ನಿಲ್ಲಿಸಿ ಬಳಿಕ ಬಿಟ್ಟುಕೊಟ್ಟರು.
ಲಾರಿ ಮಾಲೀಕರ ಮುಷ್ಕರದ ಹಿನ್ನೆಲೆಯಲ್ಲಿ ನಗರದ ಎಪಿಎಂಸಿ ಮಾರುಕಟ್ಟೆಗೆ ರೈತರು ಬೆಳೆದ ಬೆಳೆಗಳನ್ನು ತರಲು ಸಮಸ್ಯೆ ಎದುರಿಸುವಂತಾಗಿತು. ತೊಗರಿ ಮಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಕೂಡಲೇ ಸರ್ಕಾರ ಮಧ್ಯೆ ಪ್ರವೇಶಿಸಿ ಲಾರಿ ಮಾಲೀಕರ ಸಮಸ್ಯೆ ಪರಿಹರಿಸಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಎನ್.ಲಕ್ಷ್ಮಣಗೌಡ ಕಡಕಂದೊಡ್ಡಿ ಆಗ್ರಹಿಸಿದ್ದಾರೆ.