ರೈತ ಸಂಘದಿಂದ ಸುಳ್ಳೇರಿ ಪಾಳ್ಯದಲ್ಲಿ ಪ್ರತಿಭಟನೆ

KannadaprabhaNewsNetwork | Published : Jul 12, 2024 1:41 AM

ಸಾರಾಂಶ

ಹನೂರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಸೂಳೇರೀಪಾಳ್ಯ ಗ್ರಾಮದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹನೂರು

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಸುಳ್ಳೇರಿ ಪಾಳ್ಯ ಗ್ರಾಪಂ ಮುಂಭಾಗ ಪ್ರತಿಭಟನೆ ನಡೆಸಿದರು.

ಹನೂರು ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಸುಳ್ಳೇರಿಪಾಳ್ಯ ಗ್ರಾಪಂ ಮುಂಭಾಗ ನಡೆದ ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಲ್ಲಾ ಉಪಾಧ್ಯಕ್ಷ ಗೌಡೆ ಗೌಡ ಮಾತನಾಡಿ, ಸುಳ್ಳೇರಿ ಪಾಳ್ಯ ಗ್ರಾಪಂ ವ್ಯಾಪ್ತಿಗೆ ಒಳಪಡುವ ಬಸಪ್ಪನ ದೊಡ್ಡಿ, ಕೆ.ಗುಂಡಾಪುರ, ಕಾಂಚಹಳ್ಳಿ, ಗಂಗನ ದೊಡ್ಡಿ ತೋಟದ ಮನೆಗಳಿಗೆ ಹಾಗೂ ಪಚ್ಚೆದೊಡ್ಡಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು. ರೈತರ ಜಮೀನಿಗೆ ತೆರಳುವ ರಸ್ತೆಗಳೆಲ್ಲ ತೀರಾ ಹದಗೆಟ್ಟಿದ್ದು ದ್ವಿಚಕ್ರವಾಹನದಲ್ಲೂ ಸಹ ಸಂಚರಿಸಲಾಗದಷ್ಟು ಹದಗೆಟ್ಟಿದ್ದು, ರಸ್ತೆಯನ್ನು ದುರಸ್ತಿ ಪಡಿಸಬೇಕು. ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಅಶುಚಿತ್ವ ತಾಂಡವವಾಡುತ್ತಿದ್ದು ಶುಚಿತ್ವ ಕಾಪಾಡಲು ಗ್ರಾಪಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಉದ್ಯೋಗ ಖಾತ್ರಿ ಯೋಜನೆ ಅಡಿ ಮಾನವನ ಬಳಕೆ ಮಾಡುವ ಬದಲು (ಜೆಸಿಬಿ) ಯಂತ್ರಗಳಿಂದ ಮಾಡಲಾಗುತ್ತಿದ್ದು, ಈ ಭಾಗದಲ್ಲಿ ಕೂಲಿಕಾರ್ಮಿಕರಿಗೆ ಕೆಲಸ ನೀಡಬೇಕು. ಜತೆಗೆ ಕಾಡಂಚಿನ ಗ್ರಾಮಗಳು ಆಗಿರುವುದರಿಂದ ರಾತ್ರಿ ವೇಳೆಯಲ್ಲಿ ಆರೋಗ್ಯದ ಸಮಸ್ಯೆಯಿಂದ ಬಳಲುವ ಗ್ರಾಮಗಳ ನಿವಾಸಿಗಳಿಗೆ ತುರ್ತು ವಾಹನ ಸಿಗದೇ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಿಂದ ಬರುವ ಜನರಿಗೆ ಕಚೇರಿಯಲ್ಲಿ ಸಕಾಲದಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು ಎಂದು ಪ್ರತಿಭಟನೆ ವೇಳೆ ಒತ್ತಾಯಿಸಿದರು.

ತಾಲೂಕು ಘಟಕದ ಅಧ್ಯಕ್ಷ ಅಮ್ಜಾದ್ ಖಾನ್ ಮಾತನಾಡಿ, ಸುಳ್ಳೇರಿ ಪಾಳ್ಯ ಗ್ರಾಮದಲ್ಲಿರುವ ಅಂಚೆ ಇಲಾಖೆ ಖಾಸಗಿ ಸ್ಥಳದಲ್ಲಿ ಇರುವುದರಿಂದ ಸರ್ಕಾರಿ ಸ್ಥಳದಲ್ಲಿ ಕಚೇರಿ ನಿರ್ಮಾಣ ಮಾಡಿ ಕಾಡಂಚಿನ ಗ್ರಾಮಗಳಿಂದ ಬರುವ ನೂರಾರು ಜನರ ಪಿಂಚಣಿ ವಿಧವಾ ವೇತನ ಪಡೆಯಲು ಇಲ್ಲಿನ ಅಂಚೆ ಇಲಾಖೆಯ ಅಧಿಕಾರಿ ಸಿಬ್ಬಂದಿ ಹಿರಿಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಸರ್ಕಾರದಿಂದ ಬರುವ ಪಿಂಚಣಿ ಹಣವನ್ನು ನೀಡಲು ಸತಾಯಿಸುತ್ತಿದ್ದಾರೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಲವಾರು ವರ್ಷಗಳಿಂದ ಇರುವ ಅಧಿಕಾರಿ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಬೇರೆ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಜತೆಗೆ ಸರ್ಕಾರದಿಂದ ಬರುವ ಪಿಂಚಣಿ ಹಣವನ್ನು ಸಕಾಲದಲ್ಲಿ ವಯೋವೃದ್ಧರಿಗೆ ಗ್ರಾಮಗಳಲ್ಲಿ ತೆರಳಿ ನೀಡಬೇಕು ಎಂದು ಪ್ರತಿಭಟಿಸಿದರು.

ಭರವಸೆ: ನೂತನ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಹದೇವಸ್ವಾಮಿ ಮತ್ತು ತಾಲೂಕು ಪಂಚಾಯತಿ ಸಿಬ್ಬಂದಿ ವರ್ಗ ಗ್ರಾಮಕ್ಕೆ ಭೇಟಿ ನೀಡಿ ಪ್ರತಿಭಟನೆ ಕಾರ್ಯದಿಂದ ಮನವಿಯನ್ನು ಸ್ವೀಕರಿಸಿದರು. ಅಂಚೆ ಇಲಾಖೆಯ ತಾಲೂಕು ಅಧಿಕಾರಿ ನಂದೀಶ್ ಅವರಿಗೂ ಸಹ ಪ್ರತಿಭಟನಾಕಾರರು ಮನವಿ ಸಲ್ಲಿಸಿದ್ದು ಒಂದು ತಿಂಗಳಲ್ಲಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ವಿವಿಧ ಸೌಲಭ್ಯ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆ, ಸದ್ಭಳಕೆ ಸಾರ್ವಜನಿಕರಿಗೆ ಆಗಬೇಕು. ಅಂಚೆ ಇಲಾಖೆ ಕಚೇರಿ ಸ್ಥಳಾಂತರಿಸಿ ಇಲ್ಲಿನ ಅಧಿಕಾರಿ ಸಿಬ್ಬಂದಿ ವರ್ಗಾವಣೆ ಆಗಬೇಕು. ಬೇರೆಯವರನ್ನು ನೇಮಿಸಿ ವಯೋವೃದ್ಧರಿಗೆ ಪಿಂಚಣಿ ಹಣವನ್ನು ಸಕಾಲದಲ್ಲಿ ತಲುಪಿಸಬೇಕು ಎಂದು ತಿಳಿಸಿದರು.

ಎಚ್ಚರಿಕೆ: ಒಂದು ತಿಂಗಳಲ್ಲಿ ಗ್ರಾಪಂ ವ್ಯಾಪ್ತಿಯ ವಿವಿಧ ಬೇಡಿಕೆಗಳನ್ನು ಅಧಿಕಾರಿಗಳು ಈಡೇರಿಸಬೇಕು. ಸರ್ಕಾರದಿಂದ ಬರುವ ಹಣದಲ್ಲಿ ಕಮಿಷನ್ ಪಡೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ತಾಪಂ ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಶೈಲೇಂದ್ರ ಕುಮಾರ್, ಕೂಡ್ಲೂರು ವೆಂಕಟೇಶ್ ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು. ರಾಮಾಪುರ ಸಬ್ ಇನ್ಸ್‌ಪೆಕ್ಟರ್ ಲೋಕೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Share this article