ಕಂಪ್ಲಿ: ಪಟ್ಟಣದ ಸಕ್ಕರೆ ಕಾರ್ಖಾನೆ ಪ್ರದೇಶದಲ್ಲಿರುವ ಸಹಿಪ್ರಾ ಶಾಲಾವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಮೌಲಾನ ಆಜಾದ್ ಮಾದರಿ ಶಾಲೆಯ ಕಟ್ಟಡವನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಮಕ್ಕಳು, ಪಾಲಕರು ಹಾಗೂ ಸ್ಥಳೀಯ ನಿವಾಸಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸ್ಥಳೀಯ ಮಹಿಳಾ ಮುಖಂಡರಾದ ಪಾರ್ವತಿ, ಶಾಂತಮ್ಮ, ಲಕ್ಷ್ಮಿ, ಸಾವಿತ್ರಿ, ಗಾಳೆಮ್ಮ ಮೊದಲಾದವರು ಮಾತನಾಡಿ, ಈಗಿರುವ ಶಾಲಾ ವಿಸ್ತೀರ್ಣವೇ ಕಡಿಮೆಯಾಗಿದ್ದು, ಮಕ್ಕಳಿಗೆ ಆಟೋಟ ಹಾಗೂ ಇತರೆ ಚಟುವಟಿಕೆಗಳಿಗೆ ಅಗತ್ಯವಿರುವ ಜಾಗ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮತ್ತೊಂದು ಶಾಲಾ ಕಟ್ಟಡ ನಿರ್ಮಾಣ ಮಾಡಿದರೆ, ಈಗಿರುವ ವಿದ್ಯಾರ್ಥಿಗಳಿಗೆ ಇನ್ನಷ್ಟು ತೊಂದರೆ ಉಂಟಾಗಲಿದೆ. ಇಲ್ಲಿ ಮೌಲಾನ ಆಜಾದ್ ಶಾಲೆ ನಿರ್ಮಾಣ ಮಾಡಬಾರದು. ಶಾಲೆ ನಿರ್ಮಾಣ ಸ್ಥಳಾಂತರವಾಗುವವರೆಗೂ ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಈ ಸಂಬಂಧ ತಹಸೀಲ್ದಾರರಿಗೆ ಮನವಿ ಸಲ್ಲಿಸಿ, ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪ್ರಮುಖರಾದ ಮನೋಜಗೌಡ, ಎನ್. ಚಂದ್ರಕಾಂತರೆಡ್ಡಿ ಮಾತನಾಡಿ, ಮೌಲಾನ ಆಜಾದ್ ಶಾಲೆಯನ್ನು ಬೇರೆಡೆಗೆ ಸ್ಥಳಾಂತರಗೊಳಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗೂ ಸೇರಿದಂತೆ ಸಂಬಂಧಿತ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ವಿಧಾನಮಂಡಲ ಅಧಿವೇಶನದಲ್ಲಿಯೂ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಈ ವಿಷಯವನ್ನು ಪ್ರಸ್ತಾಪಿಸಿ ಸ್ಥಳಾಂತರಕ್ಕೆ ಆಗ್ರಹಿಸಿದ್ದಾರೆ. ಆದರೂ ಸರ್ಕಾರದಿಂದ ಇನ್ನೂ ಸ್ಪಷ್ಟ ಉತ್ತರ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.“ಸರ್ಕಾರದಿಂದ ಸ್ಪಷ್ಟ ಹಾಗೂ ಅನುಕೂಲಕರ ಉತ್ತರ ದೊರಕುವವರೆಗೆ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿ ತಕ್ಷಣ ಸ್ಥಗಿತಗೊಳ್ಳಬೇಕು. ಯಾವುದೇ ಕಾರಣಕ್ಕೂ ಈ ಸ್ಥಳದಲ್ಲೇ ಕಟ್ಟಡ ನಿರ್ಮಾಣ ಮಾಡಬಾರದು ಎಂದು ತಹಸೀಲ್ದಾರರನ್ನು ಒತ್ತಾಯಿಸಿದರು.
ಮೌಲಾನ ಆಜಾದ್ ಶಾಲೆ ನಿರ್ಮಾಣಕ್ಕೆ ಶಿಕ್ಷಣ ಇಲಾಖೆಯ ಬಿಇಒ ಈಗಾಗಲೇ ಒಪ್ಪಿಗೆ ನೀಡಿರುವುದರಿಂದ ನಿರ್ಮಾಣ ಕಾಮಗಾರಿಗೆ ಯಾರೂ ಅಡ್ಡಿಪಡಿಸಬಾರದು ಎಂದು ಸ್ಪಷ್ಟಪಡಿಸಿದರು.
ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ನಂತರ ಅಧಿಕಾರಿಗಳ ಮನವಿಗೆ ಸ್ಪಂದಿಸಿದ ಪ್ರತಿಭಟನಾಕಾರರು ಶಾಂತವಾಗಿ ಹರಡಿದರು. ಆದರೂ ಸ್ಥಳೀಯರ ವಿರೋಧ ಮುಂದುವರಿಯುವ ಸೂಚನೆಗಳು ಕಾಣಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.