ರಾಣಿಬೆನ್ನೂರು: ಅತಿಯಾದ ಮಳೆಯಿಂದ ಹಾನಿಗೊಳಗಾದ ತಾಲೂಕಿನ ರೈತರಿಗೆ ಬೆಳೆ ಪರಿಹಾರ, ಬೆಳೆವಿಮೆ ನೀಡಿಕೆ ಹಾಗೂ ಮೈಕ್ರೋ ಫೈನಾನ್ಸ್‌ಗಳ ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿದರು. ಇಲ್ಲಿನ ಕೆಇಬಿ ವಿನಾಯಕ ದೇವಸ್ಥಾನ ಬಳಿಯಿಂದ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಬಸ್ ನಿಲ್ದಾಣದ ಬಳಿವರೆಗೆ ಸಾಗಿ ಬಂದರು. ನಂತರ ಅಲ್ಲಿ ಸ್ವಲ್ಪ ಹೊತ್ತು ರಸ್ತೆತಡೆ ಮಾಡಿ ತಹಸೀಲ್ದಾರ್ ಆರ್.ಎಚ್. ಭಾಗವಾನರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಪ್ರಸ್ತಕ ವರ್ಷ ಅತಿಯಾದ ಮಳೆಯಿಂದ ತಾಲೂಕಿನ ರೈತರು ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ. ಸರ್ಕಾರ ರೈತರಿಗೆ ಬೆಳೆ ಪರಿಹಾರ, ಬೆಳೆವಿಮೆ ನೀಡಬೇಕು. ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು.
ಯೂರಿಯಾ ಗೊಬ್ಬರ ಸಮರ್ಪಕವಾಗಿ ಪೂರೈಸಬೇಕು. ರೈತರ ಹೊಲಗಳಿಗೆ ಸಂಪರ್ಕಿಸುವ ರಸ್ತೆಗಳನ್ನು ಸರಿಪಡಿಸಬೇಕು, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ವಿತರಿಸಬೇಕು. ಇದಲ್ಲದೆ ಯುಟಿಪಿ ಕಾಲುವೆಗಳು ಕಳಪೆಯಿಂದ ಕೂಡಿದ್ದು, ಅವುಗಳನ್ನು ದುರಸ್ತಿಪಡಿಸಬೇಕು. ಎಲ್ಲಿ ಬೇಕೆಂದರಲ್ಲಿ ಕಾನೂನುಬಾಹಿರವಾಗಿ ಮದ್ಯ, ಮಾಂಸ ಮಾರಾಟ ನಡೆಯುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.ಮಹೇಶ ಕೊಟ್ಟೂರ, ಹನುಮಂತಪ್ಪ ದೀವಿಗಿಹಳ್ಳಿ, ರಾಜಶೇಖರ್ ದೂದಿಹಳ್ಳಿ, ಮಾಲತೇಶ ಮಡಿವಾಳರ, ಚಂದ್ರಶೇಖರ ಬಣಕಾರ, ಕೊಟ್ರಮ್ಮ ಕಾಯಕದ, ಲಲಿತಾ ಲಮಾಣಿ, ಯಲ್ಲಪ್ಪ ಚಿಕ್ಕಣ್ಣನವರ, ನಾಗಮ್ಮ ತಳವಾರ, ನೀಲಮ್ಮ ಮೇಲಗಿರಿ, ನಾರಾಯಣಪ್ಪ ಲಮಾಣಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಚಿರತೆ ಸೆರೆ ಹಿಡಿಯಲು ರೈತರ ಆಗ್ರಹಶಿಗ್ಗಾಂವಿ: ಪಟ್ಟಣದ ತಹಸೀಲ್ದಾರ್ ಕಚೇರಿ ಸಮೀಪದ ತೋಟ ಹಾಗೂ ಹೊಲಗಳಲ್ಲಿ ಚಿರತೆ ಕಂಡುಬಂದಿದ್ದು, ತಕ್ಷಣ ಚಿರತೆಯನ್ನು ಸೆರೆ ಹಿಡಿಯಬೇಕೆಂದು ದುಂಡಶಿ ವಲಯ ಅರಣ್ಯಾಧಿಕಾರಿ ಮಲ್ಲಪ್ಪ ಅವರಿಗೆ ರೈತ ಮುಖಂಡರಾದ ಸಂಜನಾ ರಾಯ್ಕರ್ ಹಾಗೂ ಸುತ್ತಮುತ್ತಲಿನ ರೈತರು ಮನವಿ ಸಲ್ಲಿಸಿದರು.ಪಟ್ಟಣದ ಹೊರವಲಯದ ತೋಟದಲ್ಲಿ ಸುಮಾರು ದಿನಗಳಿಂದ ಚಿರತೆ ಪ್ರತ್ಯಕ್ಷವಾಗಿದ್ದು, ಅದು ಇದೀಗ ಮರಿ ಹಾಕಿದ್ದರಿಂದ ರೈತರು ಹಾಗೂ ಕೃಷಿ ಕಾರ್ಮಿಕರು ಭಯದಿಂದ ಕೆಲಸ ಮಾಡುವುದನ್ನು ನಿಲ್ಲಿಸಿದ್ದಾರೆ. ಇದರಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಶಿವಣ್ಣ ಬನ್ನಿಕೊಪ್ಪ, ರಾಯೇಶ್ವರ ರಾಯ್ಕರ, ಸಂಜನಾ ರಾಯ್ಕರ್, ಮಲ್ಲಿಕಾರ್ಜುನ ಎಲಿಗಾರ, ಜಮೀರ್ ನೆಲಗುಡ್ಡ, ಪವನ್ ಚಿಮ್ಮಲಗಿ, ಸಂತೋಷ ರಾಯ್ಕರ ಸೇರಿದಂತೆ ಹಲವರು ಇದ್ದರು.