ಚ.ರಾ.ಪಟ್ಟಣದಿಂದ 500 ಜನ ಭಾಗಿ । ಜನಪರ, ಪ್ರಗತಿಪರ ಸಂಘಟನೆಗಳಿಂದ ಬೆಂಬಲ । ಮೆರವಣಿಗೆಯಲ್ಲಿ 10 ಸಾವಿರ ಜನ ನಿರೀಕ್ಷೆ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣಲೈಂಗಿಕ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣನನ್ನು ಕೂಡಲೇ ಬಂಧಿಸಬೇಕು ಮತ್ತು ಕಾನೂನಾತ್ಮಕ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿ ಮೇ ೩೦ರಂದು ಚನ್ನರಾಯಪಟ್ಟಣದ ಜನಪರ ಮತ್ತು ಪ್ರಗತಿಪರ ಸಂಘಟನೆಗಳ ವತಿಯಿಂದ ಹಾಸನದ ಕಡೆಗೆ ಪ್ರತಿಭಟನಾ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯುನ ಮುಖಂಡ ಮಂಜುನಾಥ್ ತಿಳಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಹಾಸನ ಹಳೇ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಸುಮಾರು ೧೦ ಸಾವಿರಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ. ತಾಲೂಕಿನಿಂದ ಸುಮಾರು ೫೦೦ಕ್ಕೂ ಹೆಚ್ಚು ಜನ ಹಾಸನಕ್ಕೆ ತೆರಳಲಿದ್ದೇವೆ. ಪ್ರಜ್ವಲ್ ಪ್ರಕರಣದ ಸಂಬಂಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಬೇಕು. ಅವನ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಕೇಂದ್ರ ಸರ್ಕಾರವು ಪ್ರಜ್ವಲ್ ರೇವಣ್ಣನ ರಾಜತಾಂತ್ರಿಕ ಪಾಸ್‌ಪೋರ್ಟ್ ಮತ್ತು ವೀಸಾವನ್ನು ಕೂಡಲೇ ರದ್ದುಪಡಿಸಿ, ಇಂಟರ್‌ಪೋಲ್ ಸಹಾಯ ಪಡೆದು ಜಗತ್ತಿನ ಯಾವುದೇ ದೇಶದಲ್ಲಿದ್ದರೂ ಅಲ್ಲಿ ಬಂಧಿಸಲು ರಾಜ್ಯ ಸರ್ಕಾರಕ್ಕೆ ಹಾಗೂ ಎಸ್‌ಐಟಿಗೆ ಅಗತ್ಯ ನೆರವು ನೀಡಬೇಕು’ ಎಂದು ಒತ್ತಾಯಿಸಿದರು.‘ಲೈಂಗಿಕ ಹಗರಣದ ವಿಡಿಯೋಗಳು ಮತ್ತು ಚಿತ್ರಗಳನ್ನು ಸಾರ್ವಜನಿಕರಿಗೆ ಪೆನ್‌ಡ್ರೈವ್, ಸಾಮಾಜಿಕ ಮಾಧ್ಯಮ ಮತ್ತಿತರೆ ಸಾಧನಗಳ ಮುಖಾಂತರ ಸಾರ್ವಜನಿಕವಾಗಿ ಹಂಚಲು ಸಂಚು ನಡೆಸಿದ, ವ್ಯಾಪಕವಾಗಿ ಹಂಚಿದ ಮತ್ತು ಸಂಗ್ರಹಿಸಿಟ್ಟುಕೊಳ್ಳುವ ಮೂಲಕ ಮಹಿಳೆಯರ ಖಾಸಗಿತನ, ಕುಟುಂಬ, ಬದುಕಿನ ಮೇಲೆ ದಾಳಿ ಮಾಡಿದ ಪ್ರತಿಯೊಬ್ಬ ಅಪರಾಧಿಯನ್ನು ಕೂಡಲೇ ಬಂಧಿಸಬೇಕು. ಅವರ ಮೇಲೆ ಕಠಿಣ ಕಾನೂನು ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿದರು.
‘ಈ ಲೈಂಗಿಕ ಹಗರಣದಲ್ಲಿ ವಿವಿಧ ಬಗೆಯ ಲೈಂಗಿಕ ದುರ್ಬಳಕೆಗೆ ಒಳಗಾಗಿರುವ ಹಾಗೂ ಪ್ರಕರಣ ದಾಖಲಿಸಲು ಮುಂದಾಗುವ ಮಹಿಳೆಯರ ಗೌಪ್ಯತೆ ಕಾಪಾಡಲು, ಅವರಿಗೆ ಬೇಕಾದ ಮನೋವೈದ್ಯಕೀಯ ಆಪ್ತ ಸಮಾಲೋಚನೆ, ಕಾನೂನು ಸಲಹೆ, ಸೂಕ್ತ ರಕ್ಷಣೆ, ಪುನರ್ವಸತಿ ಮತ್ತು ಪರಿಹಾರವನ್ನು ತುರ್ತಾಗಿ ನೀಡಬೇಕು. ವಿಶೇಷ ತನಿಖಾ ತಂಡವು ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಪಕ್ಷಗಳ ಪ್ರಭಾವಕ್ಕೆ ಒಳಗಾಗದೇ, ನಿಷ್ಪಕ್ಷಪಾತವಾಗಿ ತನಿಖೆ ನಡೆಸುವುದನ್ನು ಖಾತ್ರಿಪಡಿಸುವ ಗುರುತರ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಹೀಗಾಗಿ ಆಮೂಲಾಗ್ರವಾಗಿ, ನಿರ್ಭೀತಿಯಿಂದ ತನಿಖೆ ನಡೆಸಲು ಬೇಕಾದ ಅಧಿಕಾರವನ್ನು ಮತ್ತು ಅನುಕೂಲಗಳನ್ನು ಎಸ್‌ಐಟಿ ಮುಖ್ಯಸ್ಥರಿಗೆ ಸರ್ಕಾರವು ನೀಡಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫೊರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ (ಎಫ್‌ಎಸ್‌ಎಲ್) ವರದಿಯನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು’ ಎಂದು ಹೇಳಿದರು.ತಾಲೂಕು ರೈತ ಸಂಘದ ಅಧ್ಯಕ್ಷ ಸಿ.ಜಿ. ರವಿ ಮಾತನಾಡಿ, ‘ಶಾಸಕ ರೇವಣ್ಣ ಅವರ ಮೇಲೆ ಕೂಡ ಲೈಂಗಿಕ ಕಿರುಕುಳ ಹಾಗೂ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗಿದೆ. ಜತೆಗೆ ಪ್ರಜ್ವಲ್ ರೇವಣ್ಣನಿಂದ ಅತ್ಯಾಚಾರಕ್ಕೊಳಗಾಗಿರುವ ಸಂತ್ರಸ್ತ ಮಹಿಳೆಯ ಅಪಹರಣದ ಪ್ರಮುಖ ಆರೋಪಿಯೆಂದು ಕೂಡ ಇವರ ಮೇಲೆ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಇರುವ ಎಲ್ಲ ಆರೋಪಿಗಳ ಶೀಘ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆದು ಅಪರಾಧಿಗಳನ್ನು ತಕ್ಷಣವೇ ಬಂಧನಕ್ಕೊಳಪಡಿಸಬೇಕು. ಈ ಸೂಕ್ಷ್ಮ ಮತ್ತು ಸಂಕೀರ್ಣ ಪ್ರಕರಣವನ್ನು ಮಹಿಳೆಯರ ಘನತೆಗೆ ಧಕ್ಕೆ ಬಾರದಂತೆ ಸಮರ್ಪಕವಾಗಿ ಇತ್ಯರ್ಥಪಡಿಸಲು ತ್ವರಿತ ‘ವಿಶೇಷ ನ್ಯಾಯಾಲಯ’ ಸ್ಥಾಪಿಸಬೇಕು’ ಎಂದು ಹೇಳಿದರು.
ತಾಲೂಕು ಅಹಿಂದ ಸಂಘಟನೆ ಅಧ್ಯಕ್ಷ ಉತ್ತೇನಹಳ್ಳಿ ಚಂದ್ರಣ್ಣ, ರೈತ ಸಂಘದ ಅಧ್ಯಕ್ಷ ಮಾಳೇನಹಳ್ಳಿ ಹರೀಶ್, ಡಿಎಸ್‌ಎಸ್‌ನ ನಾಗಣ್ಣ, ತೇಜಸ್‌ಗೌಡ, ಲೋಕೇಶ್, ಕರಿಯಪ್ಪ, ವಾಸುಕಲ್ಕೆರೆ, ರವಿ ಇತರರು ಇದ್ದರು.