ಕನ್ನಡಪ್ರಭವಾರ್ತೆ ಚಿತ್ರದುರ್ಗಒಕ್ಕೂಟ ವ್ಯವಸ್ಥೆ ರಕ್ಷಿಸುವ ಸಂಬಂಧ ಸೆಪ್ಟಂಬರ್ 14ರಂದು ಬೆಂಗಳೂರಿನಲ್ಲಿ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ ಎಂದು ಸಾಹಿತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಹೇಳಿದರು.ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಒಕ್ಕೂಟ ವ್ಯವಸ್ಥೆಯನ್ನು ರಕ್ಷಿಸದಿದ್ದರೆ ಸಂವಿಧಾನ ಉಳಿಯುವುದಿಲ್ಲ. ಬಹುತ್ವ ಭಾರತದಲ್ಲಿ ಧರ್ಮವನ್ನು ಗುರಿಯಾಗಿಸಿಕೊಂಡು ಹತ್ತು ವರ್ಷಗಳಿಂದಲೂ ಆಕ್ರಮಣ ನಡೆಸುತ್ತಿರುವ ಕೇಂದ್ರದ ಸರ್ವಾಧಿಕಾರಿ ನಡೆಯನ್ನು ಅಂದಿನ ಸಭೆಯಲ್ಲಿ ಖಂಡಿಸಲಾಗುವುದೆಂದರು.
ಕರ್ನಾಟಕ ತ್ರಿಭಾಷ ಸೂತ್ರವನ್ನು ಒಪ್ಪಿಕೊಂಡಿರುವುದರಿಂದ ಭಾಷೆಯ ಜತೆ ಬದುಕು ಕಳೆದುಕೊಳ್ಳುತ್ತಿದ್ದೇವೆ. ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ. ರಾಜ್ಯದಿಂದ ಸಂಸತ್‌ಗೆ ಆಯ್ಕೆಯಾಗಿರುವವರು ನಮ್ಮ ಪಾಲಿನ ಹಕ್ಕು ಕೇಳದಷ್ಟು ದುರ್ಬಲರಾಗಿದ್ದಾರೆ. ಇಂದಿರಾಗಾಂಧಿ ದೇಶದ ಪ್ರಧಾನಿಯಾಗಿದ್ದಾಗ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದರು ಎಂದರು.
ಆದರೆ ಇಂದು ಬ್ಯಾಂಕ್‌ಗಳಲ್ಲಿ ಕುಳಿತಿರುವವರೆಲ್ಲಾ ಹೊರ ರಾಜ್ಯದವರೇ ಆಗಿದ್ದಾರೆ. ಕನ್ನಡಿಗರಿಗೆ ಉದ್ಯೋಗವಿಲ್ಲದಂತಾಗಿದೆ. ಎಸ್ ಬಿಎಂ, ಎಸ್ ಬಿಐನಲ್ಲಿ ವಿಲೀನಿಕರಣವಾಗಿದೆ. ಉದ್ಯೋಗ ಕಿತ್ತುಕೊಳ್ಳುತ್ತಿರುವ ಇಂದಿನ ಅಪಾಯಕಾರಿ ಪರಿಸ್ಥಿತಿಯಲ್ಲಿ ಪ್ರಾದೇಶಿಕ ಅಸ್ಮಿತೆಯನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಹೇಳಿದರು.ಹೊಸ ಶಿಕ್ಷಣ ನೀತಿಯಿಂದ ಭಾಷೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಐಟಿ, ಇಡಿ, ಸಿಬಿಐಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಜನಸಾಮಾನ್ಯರನ್ನು ಎಚ್ಚರಿಸುವುದಕ್ಕಾಗಿ ಹಮ್ಮಿಕೊಂಡಿರುವ ಪ್ರತಿಭಟನಾ ಸಭೆಯಲ್ಲಿ ಜಿಲ್ಲೆಯ ಸಮಾನ ಮನಸ್ಕರು, ಯುವ ಸಮೂಹ, ರೈತರು, ಜನ ಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಮನವಿ ಮಾಡಿದರು.
ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳನ್ನು ನೀಡುವುದಾಗಿ ಪ್ರಧಾನಿಯಾಗುವ ಮುನ್ನವೇ ನರೇಂದ್ರ ಮೋದಿ ನೀಡಿದ ಭರವಸೆಗಳೆಲ್ಲಾ ಹುಸಿಯಾಗಿದೆ. ರೈತರ ಆದಾಯ ದುಪ್ಪಟ್ಟಾಗಲಿಲ್ಲ. ರೈತರು, ದಲಿತರು, ಕನ್ನಡಪರ ಸಂಘಟನೆಗಳ ಜತೆ ಚರ್ಚಿಸಿ ಇದೆ ತಿಂಗಳ ಹದಿನಾಲ್ಕರಂದು ಪ್ರತಿಭಟನಾ ಸಭೆ ನಡೆಸುತ್ತಿದ್ದೇವೆ. ಸೆಂಟ್ರಲ್ ಕಾಲೇಜು ಆವರಣದಲ್ಲಿ ನಡೆಯುವ ಸಭೆಗೆ ಜಸ್ಟಿಸ್ ಗೋಪಾಲಗೌಡ, ನಾಗಮೋಹನ್‌ದಾಸ್, ಸಾಹಿತಿ ದೇವನೂರು ಮಹದೇವ ಪಾಲ್ಗೊಳ್ಳಲಿದ್ದಾರೆ ಎಂದರು.
ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾಧ್ಯಕ್ಷ ಜೆ. ಯಾದವರೆಡ್ಡಿ ಮಾತನಾಡಿ ರಾಷ್ಟ್ರೀಯತೆ ಹೆಸರಿನಲ್ಲಿ ಕೇಂದ್ರ ಸರ್ಕಾರ ಪ್ರಾದೇಶಿಕ ಭಾಷೆ, ಸಂಸ್ಕೃತಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ರಾಜ್ಯದ ಹಿತದೃಷ್ಟಿಯ ವಿಚಾರವಾಗಿ ಸಂಸದರು ಒಮ್ಮೆಯೂ ಸಂಸತ್‌ನಲ್ಲಿ ಧ್ವನಿ ಎತ್ತದಷ್ಟು ಅಸಹಾಯಕರಾಗಿದ್ದಾರೆ. ರಾಜ್ಯದ ಪಾಲಿನ ಹಕ್ಕು ಕೇಳಬೇಕಾದರೆ ಸುಪ್ರೀಂಕೋರ್ಟ್ ಮೊರೆ ಹೋಗಬೇಕಾಗಿದೆ. ಸರ್ವಾಧಿಕಾರಿ ಹಿಟ್ಲರ್‌ನಂತೆ ವರ್ತಿಸುತ್ತಿರುವ ಕೇಂದ್ರದಿಂದ ಒಕ್ಕೂಟದ ವ್ಯವಸ್ಥೆ ನಾಶವಾಗಲು ಬಿಡಬಾರದೆಂಬ ಕಾರಣಕ್ಕಾಗಿ ಬೆಂಗಳೂರಿನಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಹೇಳಿದರುಪ್ರೊ. ರುದ್ರಪ್ಪ ಹನಗವಾಡಿ, ರೈತ ಮುಖಂಡರಾದ ಧನಂಜಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ, ಜಿ.ಎಸ್. ಉಜ್ಜಿನಪ್ಪ ಇದ್ದರು.