ರಾಣಿಬೆನ್ನೂರು ರೈಲ್ವೆ ಮೇಲ್ಸೇತುವೆ ಬಳಿ ಪ್ರತಿಭಟನೆ

KannadaprabhaNewsNetwork |  
Published : Oct 24, 2024, 12:35 AM IST
ಫೋಟೊ ಶೀರ್ಷಿಕೆ: 23ಆರ್‌ಎನ್‌ಆರ್6ರಾಣಿಬೆನ್ನೂರು ನಗರದ ದೇವರಗುಡ್ಡ ರಸ್ತೆ ಮೇಲ್ಸೇತುವೆ ಬಳಿ ಸರ್ವಿಸ್ ರಸ್ತೆ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೇಲ್ವೆ ಮೇಲ್ಸೇತುವೆ ಹೋರಾಟ ಸಮಿತಿ ಸದಸ್ಯರು ಗ್ರೇಡ್-2 ತಹಸೀಲ್ದಾರ ಅರುಣ ಕಾರಣಗಿ ಹಾಗೂ ರೇಲ್ವೆ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

10 ಮೀಟರ್ ಅಗಲದ ಸಿಸಿ ರಸ್ತೆ (ಸರ್ವೀಸ್ ರೋಡ್‌) ನಿರ್ಮಿಸಬೇಕು. ಬೆಳೆ ಹಾನಿ ಮತ್ತು ಭೂ ಪರಿಹಾರ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಕೆಳ ಸೇತುವೆಯಲ್ಲಿ ನೀರು ನಿಲ್ಲದಂತೆ ಕ್ರಮ ಜರುಗಿಸಬೇಕು ಎಂದು ಹೋರಾಟಗಾರರು ಬೇಡಿಕೆ ಇಟ್ಟರು.

ರಾಣಿಬೆನ್ನೂರು: ನಗರದ ಬಾಗಲಕೋಟೆ-ಬಿಳಿಗಿರಿರಂಗನಬೆಟ್ಟ ರಾಜ್ಯ ಹೆದ್ದಾರಿಯ ರೈಲ್ವೆ ಗೇಟ್ 219 (ದೇವರಗುಡ್ಡ ರಸ್ತೆ) ಬಳಿ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ಸೇತುವೆಗೆ ಭೂಮಿ ಕಳೆದುಕೊಂಡ ರೈತರ ಜಮೀನುಗಳಿಗೆ ಓಡಾಡಲು 10 ಮೀಟರ್ ಅಗಲ ಕಾಂಕ್ರೀಟ್ (ಸರ್ವೀಸ್) ರಸ್ತೆ ನಿರ್ಮಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಹೋರಾಟ ಸಮಿತಿ ನೇತೃತ್ವದಲ್ಲಿ ಸಾರ್ವಜನಿಕರು ಬುಧವಾರ ರೈಲ್ವೆ ಮೇಲ್ಸೇತುವೆ ಬಳಿ ಪ್ರತಿಭಟಿಸಿ, ಗ್ರೇಡ್-2 ತಹಸೀಲ್ದಾರ್‌ ಅರುಣ ಕಾರಣಗಿ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು.

ರೈಲ್ವೆ ಇಲಾಖೆಯು 2023ನೇ ಸಾಲಿನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕಾಗಿ ಸುಮಾರು 2.30 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಕಾಮಗಾರಿ ಪ್ರಾರಂಭಿಸಿದ್ದು, ಇದೀಗ ಮುಕ್ತಾಯ ಹಂತ ತಲುಪಿದೆ. ಭೂ ಸ್ವಾಧೀನದ ಸಮಯದಲ್ಲಿ ಹಾವೇರಿ ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಭೂಮಿ ನೀಡಿದ ರೈತರು, ರೈಲ್ವೆ ಮೇಲ್ಸೇತುವೆ ಹೋರಾಟ ಸಮಿತಿ, ಕಂದಾಯ ಇಲಾಖೆ ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ 10 ಮೀ. ಅಗಲದ ಸರ್ವೀಸ್ ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸಲಾಗಿತ್ತು. ಅದಕ್ಕೆ ರೈಲ್ವೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದರು. ಆದರೆ ಇದೀಗ ಕೇವಲ 6 ಮೀ. ಅಗಲದ ರಸ್ತೆ ನಿರ್ಮಿಸಲಾಗುತ್ತಿದೆ. ಇದಲ್ಲದೆ ಭೂಮಿ ಕಳೆದುಕೊಂಡ ರೈತರಿಗೆ ಇಂದಿನವರೆಗೂ ಭೂ ಮತ್ತು ಬೆಳೆ ಪರಿಹಾರ ಹಾಗೂ ಕಟ್ಟಡ ಪರಿಹಾರ ನೀಡಿಲ್ಲ. ಆದ್ದರಿಂದ ಶೀಘ್ರದಲ್ಲಿಯೇ 10 ಮೀಟರ್ ಅಗಲದ ಸಿಸಿ ರಸ್ತೆ (ಸರ್ವೀಸ್ ರೋಡ್‌) ನಿರ್ಮಿಸಬೇಕು. ಬೆಳೆ ಹಾನಿ ಮತ್ತು ಭೂ ಪರಿಹಾರ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಕೆಳ ಸೇತುವೆಯಲ್ಲಿ ನೀರು ನಿಲ್ಲದಂತೆ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ, ಪ್ರಕಾಶ ಪೂಜಾರ, ನಿಂಗಪ್ಪ ಹೊನ್ನಾಳಿ, ಜಗದೀಶ ಪಾಟೀಲ, ಹರಿಹರಗೌಡ ಪಾಟೀಲ, ಕರಗೌಡ ಪಾಟೀಲ, ರಾಜು ಹೊಳಿಯಮ್ಮನವರ್, ಬಸವರಾಜ ನೆಲೊಗಲ್, ಉಮೇಶ ಗುರುಲಿಂಗಪ್ಪಗೌಡ್ರ, ಜಗದೀಶ್ ಕೆರೋಡಿ, ಹೊನ್ನಪ್ಪ ಹೊಳೆಯಮ್ಮನವರ, ಶಿವಣ್ಣ ನಾಗೇನಹಳ್ಳಿ, ಬಸಣ್ಣ ಹೊನ್ನಾಳಿ ಮತ್ತಿತರರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ