ಕನ್ನಡಪ್ರಭ ವಾರ್ತೆ ಮಂಡ್ಯ
ಬಾಕಿ ವೇತನ ಪಾವತಿ, ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ನೌಕರರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ನಗರದ ಸಾರಿಗೆ ಬಸ್ ನಿಲ್ದಾಣದ ಕೆಎಸ್‌ಆರ್‌ಟಿಸಿ ನಿಗಮದ ವಿಭಾಗೀಯ ಕಚೇರಿ ಎದುರು ರಾಜ್ಯ ರಸ್ತೆ ಸಾರಿಗೆ ನಿಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನೌಕರರು, ಕೂಡಲೇ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಕಳೆದ 2020 ರಿಂದ 2023ರ ವರೆಗಿನ ಶೇ.15ರಷ್ಟು ವೇತನ ಹೆಚ್ಚಳದ ಬಾಕಿ ಹಣ ಸಾರಿಗೆ ನೌಕರರಿಗೆ ಪಾವತಿಸಬೇಕಿದೆ. ಈ ಬಗ್ಗೆ ಸರ್ಕಾರ ಹಾಗೂ ಸಾರಿಗೆ ನಿಗಮದ ಆಡಳಿತ ಮಂಡಳಿಗೆ ಮನವಿ ಮಾಡಿದರೂ ಹಣ ಬಿಡುಗಡೆಗೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.ಸಾರಿಗೆ ನೌಕರ ಸಮೂಹಕ್ಕೆ ಅಧಿಕಾರಿಗಳ ಕಿರುಕುಳ ಹೆಚ್ಚಳವಾಗಿದೆ. ನೌಕರರನ್ನು ದಿಕ್ಕು ತಪ್ಪಿಸಿ ಇನ್ನಿಲ್ಲದ ಸಂಕಷ್ಟಗಳಿಗೆ ಗುರಿ ಮಾಡಿದ ಶಕ್ತಿಗಳು ಹೆಚ್ಚಾಗಿದ್ದು, ಇದನ್ನು ತಪ್ಪಿಸಲು ಮುಂದಾಗಬೇಕು. 2024 ಜನವರಿ ಆರಂಭದ ದಿನದಿಂದ ಮುಂದಿನ ನಾಲ್ಕು ವರ್ಷಗಳ ಅವಧಿಗೆ ಹೊಸ ವೇತನ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಹಿಟ್ ಅಂಡ್ ರನ್ ಮೊಕದ್ದಮೆಯಲ್ಲಿ ಚಾಲಕರಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ರೂಪಿಸಿರುವುದು ಚಾಲಕ ವರ್ಗಕ್ಕೆ ಮಾರಕವಾಗಿದೆ. ಇದನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿದರು.2020 ಜನವರಿ ಯಿಂದ ಬಾಕಿ ಇರುವ 38 ತಿಂಗಳ ವೇತನ ಪಾವತಿ, 2020 ರಿಂದ 2023ರ ವರೆಗೆ ನಿವೃತ್ತರಾದ ನೌಕರರಿಗೆ ವೇತನ ಪರಿಷ್ಕರಣೆ ಅಳವಡಿಸಿ ನಿವೃತ್ತಿ ಸೌಲಭ್ಯಗಳ ಬಾಕಿ ಹಣ ನೀಡಬೇಕು ಎಂದು ಮನವಿ ಮಾಡಿದರು.
ನೌಕರರ ವೇತನ ಪರಿಷ್ಕರಣೆ, ಚಾಲಕರಿಗೆ ಮಾರಕವಾಗಿರುವ ಕಾನೂನು ತಿದ್ದುಪಡಿ ವಾಪಸ್ ಪಡೆಯಬೇಕು. ಶಕ್ತಿ ಯೋಜನೆಯ ಸಂಪೂರ್ಣ ಅನುದಾನ ಸಾರಿಗೆ ನಿಗಮಗಳಿಗೆ ಪಾವತಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಯೂನಿಯನ್ ಅಧ್ಯಕ್ಷ ಮಲ್ಲೇಶ, ಪ್ರಧಾನ ಕಾರ್ಯದರ್ಶಿ ಡಿ.ಜಿ.ಪುಟ್ಟರಾಜು, ರಸ್ತೆ ಸಾರಿಗೆ ನೌಕರರ ಮಹಾಮಂಡಲ ಪ್ರಧಾನ ಕಾರ್ಯದರ್ಶಿಸುಧೀರ್ ಸೇರಿದಂತೆ ಹಲವರು ಭಾಗವಹಿಸಿದ್ದರು.