ಕನ್ನಡಪ್ರಭ ವಾರ್ತೆ ಶಹಾಪುರ
ಈ ಸಂದರ್ಭದಲ್ಲಿ ಸಂಘದ ಪ್ರಮುಖರು ಮಾತನಾಡಿ, ಜೀವ ಇಲ್ಲದ ಯಂತ್ರಗಳಿಗೆ ವಿಶ್ರಾಂತಿ ಇದೆ. ಆದರೆ, ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳಿಗಿಲ್ಲ. ಮೇಲಾಧಿಕಾರಿಗಳ ಪಾಲಿಗೆ ಯಂತ್ರಕ್ಕಿಂತಲೂ ಕಡೆಯಾಗಿದ್ದೇವೆ. ಈ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ನಮಗೆ ಆರೋಗ್ಯ ತಪಾಸಣೆ ಮಾಡಿದರೆ ಬಹುತೇಕ ನೌಕರರಿಗೆ ಬಿಪಿ, ಶುಗರ್ ಬಂದಿರುವ ಬಗ್ಗೆ ಅನುಮಾನಗಳು ಬರುತ್ತವೆ. ಮಾನಸಿಕ ಒತ್ತಡದಲ್ಲಿ ಕೆಲಸ ನಿರ್ವಹಿಸುವಾಗ ಹೆಚ್ಚು ಕಡಿಮೆಯಾದರೆ ಅದಕ್ಕೆ ನಮ್ಮದೇ ತಲೆ ತಂಡವಾಗುತ್ತದೆ. ಏನಾದರೂ ನಮಗೆ ಹೆಚ್ಚು ಕಡಿಮೆಯಾದರೆ ನಮ್ಮ ಕುಟುಂಬದ ನಿರ್ವಹಣೆ ಗತಿ ಏನು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶ್ರೇಯಾಂಕ ಗಳಿಸಬೇಕು ಎನ್ನುವ ಉದ್ದೇಶದಿಂದ ಮೇಲಾಧಿಕಾರಿಗಳು ಒತ್ತಡ ಹಾಕಿ ಬಿಡುವಿಲ್ಲದೆ ದುಡಿಸಿಕೊಳ್ಳುತ್ತಾರೆ. ವಿಚಿತ್ರ ಎಂದರೆ ಕಚೇರಿಗಳಿಗೆ ವೇಳೆ ಮುಗಿದ ಮೇಲೆ ಮೀಟಿಂಗ್ ಮಾಡುವುದು ಅಲ್ಲದೆ ರಜೆ ದಿನದ ಹಿಂದಿನ ದಿನದ ಸಂಜೆ ಮೀಟಿಂಗ್ ಮಾಡಿ, ಇದೆಲ್ಲ ಗೊತ್ತಿಲ್ಲ ನಾಳೆ ಈ ಕೆಲಸ ಪೂರ್ಣಗೊಳಿಸಬೇಕು. ಇಲ್ಲದೆ ಹೋದರೆ ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎನ್ನುವ ಭಯದಲ್ಲಿ ಕೆಲಸ ನಿರ್ವಹಿಸುವ ಪರಿಸ್ಥಿತಿ ಇದೆ ಎಂದು ಕಂದಾಯ ನೌಕರರ ಅಳಲಾಗಿದೆ.ರಜೆ ದಿನಗಳಲ್ಲಿ ನಮ್ಮ ವೈಯಕ್ತಿಕ ಕೆಲಸಗಳಿಗೆ ಗಮನ ಕೊಡಲಾಗುತ್ತಿಲ್ಲ. ತಂದೆ-ತಾಯಿ, ಹೆಂಡತಿ, ಮಕ್ಕಳ ಜೊತೆ ಸಂತೋಷದಿಂದ ಕಾಲ ಕಳೆಯದಂತಾಗಿದೆ. ಇದರಿಂದ ಕುಟುಂಬದಲ್ಲಿ ಶಾಂತಿ, ನೆಮ್ಮದಿ ಹಾಳಾಗಿದೆ ಎಂದು ನೋವು ತೋಡಿಕೊಂಡರು.
ಒಂದು ಗ್ರಾಮ ಪಂಚಾಯ್ತಿ ಹಾಗೂ 304 ಲೋಕಲ್ ಹೋಬಳಿ ವೃತ್ತಗಳನ್ನು ಗ್ರೇಡ್-1 ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನಾಗಿ ಮೇಲ್ದರ್ಜೆಗೇರಿಸಬೇಕು. ರಾಜಸ್ವ ನಿರೀಕ್ಷಕರನ್ನು ಪ್ರಥಮ ದರ್ಜೆ ಸಹಾಯಕರನ್ನಾಗಿ ಮಾಡಿ ಗ್ರೇಡ್-1 ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ನಾಗಿ ಪರಿಷ್ಕರಿಸಿ ಮೇಲ್ದರ್ಜೆಗೇರಿಸಿ ಪದೋನ್ನತಿ ನೀಡಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ನೌಕರ ಸಂಘದ ತಾಲೂಕಾಧ್ಯಕ್ಷ ರಾಯಪ್ಪಗೌಡ ಹುಡೇದ, ಡಿಟಿ ಸಂಗಮೇಶ್, ಸೋಮನಾಥ್, ಕಂದಾಯ ನಿರೀಕ್ಷಕರಾದ ಬಸನಗೌಡ, ಭೀಮ್ ರೆಡ್ಡಿ ಹೊಸಮನಿ, ಮಹೇಂದ್ರ, ಸಂಘದ ತಾಲೂಕಾಧ್ಯಕ್ಷ ವೆಂಕಟೇಶ್ ರಾಠೋಡ, ಕಾರ್ಯದರ್ಶಿ ಶಂಕರಗೌಡ, ರಾಜ್ಯ ಸಮಿತಿ ಸದಸ್ಯ ಗುಂಜಲಪ್ಪ ನಾಯಕ, ಜಿಲ್ಲಾ ಉಪಾಧ್ಯಕ್ಷ ರಮೇಶ್ ರಾಠೋಡ, ಮಹಿಳಾ ಪ್ರತಿನಿಧಿ ಲಕ್ಷ್ಮಿ ಪತ್ತಾರ್ ಸೇರಿದಂತೆ ಇತರರಿದ್ದರು.