- ಹರಿಹರದಲ್ಲಿ ರೈತ ಸಂಘ ನೇತೃತ್ವದಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ
ಕನ್ನಡಪ್ರಭ ವಾರ್ತೆ ಹರಿಹರ
ಏಕಕಾಲದಲ್ಲಿ ಸಾಲ ಇತ್ಯರ್ಥ ಯೋಜನೆ ಅವಧಿ ವಿಸ್ತರಣೆ ಹಾಗೂ ಬ್ಯಾಂಕ್ ಅಧಿಕಾರಿಗಳ ಅಸಹಕಾರ ವಿರೋಧಿಸಿ ಏ.16ರಂದು ಹರಿಹರದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಜಿಲ್ಲಾಧ್ಯಕ್ಷ ಹಾಳೂರು ನಾಗರಾಜ್ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ಏಕಕಾಲದಲ್ಲಿ ಸಾಲ ಇತ್ಯರ್ಥ ಯೋಜನೆಯಲ್ಲಿ ಸುಸ್ತಿದಾರ ಸಾಲಗಾರರಿಗೆ ಸಾಲ ಮರುಪಾವತಿಯಲ್ಲಿ ಆಕರ್ಷಕ ರಿಯಾಯಿತಿ ಮೂಲಕ ಯೋಜನೆ ಜಾರಿ ಮಾಡಿದ್ದರು. ಈ ಯೋಜನೆ ಬಗ್ಗೆ ವ್ಯಾಪಕವಾಗಿ ಪ್ರಚಾರ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕಿತ್ತು. ಆದರೆ, ಬ್ಯಾಂಕ್ ಅಧಿಕಾರಿಗಳು, ಸರಿಯಾದ ರೀತಿಯಲ್ಲಿ ಮಾಹಿತಿ ನೀಡದೇ ರೈತರಿಗೆ ದ್ರೋಹ ಮಾಡಿದ್ದಾರೆ ಎಂದು ಆರೋಪ ಮಾಡಿದರು.
ತಾಲೂಕಿನಲ್ಲಿ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಿಲ್ಲ. ರೈತರನ್ನು ವಿನಾಕಾರಣ ಅಲೆದಾಡಿಸುವುದು, ಅನವಶ್ಯಕವಾಗಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಈ ನಡೆಗಳನ್ನು ಖಂಡಿಸಿ, ಏ.16ರಂದು ನಗರದ ಪಕ್ಕೀರ ಸ್ವಾಮಿ ಮಠದಿಂದ ಬೃಹತ್ ಪ್ರತಿಭಟನಾ ರ್ಯಾಲಿ ಮೂಲಕ ಆಗಮಿಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದರು.
- - -
ಹರಿಹರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ ಹಾಳೂರು ನಾಗರಾಜ್ ಮಾತನಾಡಿದರು. ಪದಾಧಿಕಾರಿಗಳು ಉಪಸ್ಥಿತರಿದ್ದರು.