ಕನ್ನಡಪ್ರಭ ವಾರ್ತೆ ಚಿಕ್ಕೋಡಿ ರಾಜ್ಯದಲ್ಲಿ ಭೀಕರ ಬರ ಹಿನ್ನೆಲೆಯಲ್ಲಿ ರೈತರಿಗೆ ಸೂಕ್ತ ಪರಿಹಾರ, ಕಬ್ಬಿಗೆ ಉತ್ತಮ ಬೆಲೆ, ರೈತರ ಸಾಲವನ್ನು ಸಂಪೂರ್ಣ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿ.7 ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ಮಾಡುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಡಿ.4 ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ಡಿ.7 ರಂದು ಮಧ್ಯಾಹ್ನ 12 ಗಂಟೆಗೆ ಬೆಳಗಾವಿ ನಗರದ ಚನ್ನಮ್ಮ ವೃತ್ತದಿಂದ ಬೃಹತ್ ಪಾದಯಾತ್ರೆಯ ಮೂಲಕ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ತೆರಳಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದರು. ರಾಜ್ಯದಲ್ಲಿ ಭೀಕರ ಬರ ಇರುವ ಹಿನ್ನೆಲೆಯಲ್ಲಿ ರೈತರಿಗೆ ಪ್ರತಿ ಎಕರೆಗೆ ₹30 ಸಾವಿರ ಪರಿಹಾರ, ಪ್ರತಿ ಟನ್ ಕಬ್ಬಿಗೆ ಸಕ್ಕರೆ ಕಾರ್ಖಾನೆಗಳು ₹3,500 ಸರ್ಕಾರದಿಂದ ₹2 ಸಾವಿರ ಸೇರಿದಂತೆ ₹5,500 ನೀಡುವುದು, ಜಾನುವಾರುಗಳು ಸಾವನ್ನಪ್ಪಿದರೇ ₹50 ಸಾವಿರ ಪರಿಹಾರ, ಕೃಷಿ ಇಲಾಖೆಯಲ್ಲಿ ₹5 ಸಾವಿರ ಹುದ್ದೆಗಳು ಖಾಲಿ ಇದ್ದು, ಇವುಗಳ ಭರ್ತಿ, ಗ್ರಾಮ ಸೇವಕರ ನೇಮಕಾತಿ ಮಾಡಿಕೊಳ್ಳುವುದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲು ಪ್ರತಿಭಟನೆ ಹಮ್ಮಿಕೊಳ್ಳುತ್ತಿರುವುದಾಗಿ ತಿಳಿಸಿದರು. ಗೋಷ್ಠಿಯಲ್ಲಿ ರಾಜ್ಯ ಕಾರ್ಯಾಧ್ಯಕ್ಷ ರಾಜು ಪವಾರ, ಚಿಕ್ಕೋಡಿ ತಾಲೂಕು ಅಧ್ಯಕ್ಷ ಬಸವರಾಜ ಪಾಶ್ಚಾಪೂರೆ, ರಾಜೇಂದ್ರ ಪಾಶ್ಚಾಪೂರೆ, ಆನಂದ ಪಾಶ್ಚಾಪೂರೆ, ಗಜಾನನ ಕೊಟ್ಟೆಪ್ಪಗೋಳ, ಬಸವಣ್ಣಿ ಡಬ್ಬ, ಮಲ್ಲಪ್ಪ ಅಂಗಡಿ, ವಿವೇಕಾನಂದ ಘಂಟಿ ಇದ್ದರು.