ಕನ್ನಡಪ್ರಭ ವಾರ್ತೆ ಹನೂರು ಉಡುತೊರೆ ಹಳ್ಳ ಜಲಾಶಯದ ನೀರನ್ನು ರೈತರಿಗೆ ನೀಡಲು ಕಾಲುವೆಗಳಲ್ಲಿರುವ ರಾಡಿ ಕಸ ಕಡ್ಡಿಗಳನ್ನು ತೆರವುಗೊಳಿಸಿ ನೀರು ಬಿಡಲು ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ನ.4ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹನೂರು ಘಟಕದ ಅಧ್ಯಕ್ಷ ಅಮ್ಜಾದ್ ಖಾನ್ ಹೇಳಿದರು.
ಮುಂದಿನ ದಿನಗಳಲ್ಲಿ ಅಜ್ಜಿಪುರ ಗ್ರಾಮದ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು ಈ ಬಗ್ಗೆ ಈ ಭಾಗದ ರೈತರ ಸಲಹೆ ಸೂಚನೆಗಳನ್ನು ಪಡೆದು ತಾಲೂಕಿನ ಮತ್ತು ಜಿಲ್ಲಾ ಮತ್ತು ರಾಜ್ಯ ಘಟಕದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅನುಮತಿ ಮೇರೆಗೆ ಅವರನ್ನು ಸಹ ಈ ಪ್ರತಿಭಟನೆಯಲ್ಲಿ ಭಾಗವಹಿಸಲು ಬರುವಂತೆ ಮನವರಿಕೆ ಮಾಡಿಕೊಟ್ಟು ನೀರಾವರಿ ಯೋಜನೆಗೆ ಅನುಕೂಲ ಕಲ್ಪಿಸದೆ ಇರುವ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕು ಎಂದರು.
ಪ್ರತಿಭಟನೆ ದಿನಾಂಕ ನಿಗದಿ:ಈಗಾಗಲೇ ಇಲ್ಲಿನ ಜನಪ್ರತಿನಿಧಿ ಅಧಿಕಾರಿಗಳು ಉಡುತೊರೆ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ ಕಾಲುವೆಗಳಲ್ಲಿರುವ ರಾಡಿ ಮತ್ತು ಗಿಡ ಗಂಟೆಗಳನ್ನು ತೆರವುಗೊಳಿಸಿ, ಈ ಭಾಗದ ರೈತರಿಗೆ ನೀರಾವರಿ ಯೋಜನೆಯನ್ನು ಕಲ್ಪಿಸುವ ಸದುದ್ದೇಶದಿಂದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೆ, ಇದುವರೆಗೂ ನೀರಾವರಿ ಇಲಾಖೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇದರ ಬಗ್ಗೆ ಗಮನ ಹರಿಸದೆ ಇರುವುದರಿಂದ ತಾಲೂಕಿನ ಅಜ್ಜಿಪುರ ಗ್ರಾಮದಲ್ಲಿ ನ.4 ರಂದು ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ತಾಲೂಕಿನ ಎಲ್ಲಾ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಲು ಮನವಿ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ರೈತ ಮುಖಂಡರು ಹಾಗೂ ಇನ್ನಿತರರು ಸಭೆಯಲ್ಲಿ ಭಾಗವಹಿಸಿದ್ದರು.