ಇಂದು ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನಾ ಸಮಾವೇಶ

KannadaprabhaNewsNetwork |  
Published : Mar 25, 2026, 01:15 AM IST
24ಕೆಆರ್ ಎಂಎನ್ 1.ಜೆಪಿಜಿರಾಮನಗರದ ಗುರುಭವನದಲ್ಲಿ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ಮುಖಂಡ ಕೋಟೆ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ಒಳ ಮೀಸಲಾತಿ ರಹಿತ ಹಳೆ ಮೀಸಲಾತಿ ಜಾರಿಗೆ ಒತ್ತಾಯಿಸಿ ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಆಯೋಜನೆ ಮಾಡಲಾಗಿದೆ ಎಂದು ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ಮುಖಂಡ ಕೋಟೆ ಕುಮಾರ್ ತಿಳಿಸಿದರು

ರಾಮನಗರ: ಒಳ ಮೀಸಲಾತಿ ರಹಿತ ಹಳೆ ಮೀಸಲಾತಿ ಜಾರಿಗೆ ಒತ್ತಾಯಿಸಿ ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಆಯೋಜನೆ ಮಾಡಲಾಗಿದೆ ಎಂದು ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ಮುಖಂಡ ಕೋಟೆ ಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಒಕ್ಕೂಟದ ಅಧ್ಯಕ್ಷ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ, ಸಂಚಾಲಕರಾದ ಸಿದ್ದಯ್ಯ, ಸಂಪತ್ತು, ನಾಗೇಶ್ ರಾವ್, ವಾಣಿ ಚರ್ಚೆ ನಡೆಸಿದ್ದು ಪ್ರತಿಭಟನಾ ಸಮಾವೇಶದ ರೂಪು ರೇಷೆ ಸಿದ್ದಪಡಿಸಲಾಗಿದೆ. ಈ ಸಮಾವೇಶದಲ್ಲಿ ಜಿಲ್ಲೆಯಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದೇವೆ. ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಅನ್ವಯ ರಾಜ್ಯ ಸರ್ಕಾರವು ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ಅಧ್ಯಕ್ಷತೆಯಲ್ಲಿ ಒಳ ಮೀಸಲಾತಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ನೇಮಕ ಮಾಡಿ ಸಮೀಕ್ಷೆ ನಡೆಸಿ ವರದಿಯನ್ನು 2025ರ ಆಗಸ್ಟ್ 4ರಂದು ಪಡೆಯಿತು. 2025ರ ಆಗಸ್ಟ್ 18ರಂದು ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡು 2025ರ ಸೆ.3ರಂದು ನೇರ ನೇಮಕಾತಿಗೆ ಸಂಬಂಧಿಸಿದಂತೆ ಹೊರಡಿಸಿರುವ ಆದೇಶವು ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಮರಣ ಶಾಸನವಾಗಿದೆ ಎಂದು ಹೇಳಿದರು.

ಬಲಗೈಗೆ ಮೀಸಲು ತಪ್ಪಿಸುವ ಹುನ್ನಾರ:

ನ್ಯಾ.ನಾಗಮೋಹನ್ ದಾಸ್ ಸಮೀಕ್ಷೆಯನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲಿಲ್ಲ. ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಅಗತ್ಯ ಅಂಕಿ ಅಂಶಗಳನ್ನು ಕ್ರೂಢೀಕರಿಸದೆ ಒಂದು ಜಾತಿಯನ್ನು ಒಲೈಸಲು ಪ.ಜಾತಿ ಬಲಗೈ ಸಮುದಾಯದ ಜನಸಂಖ್ಯೆಯನ್ನು 4 ಭಾಗಗಳಾಗಿ ವಿಂಗಡಿಸಲಾಗಿದೆ. ಅಲ್ಲದೆ, 1.38 ಲಕ್ಷ ಬಲಗೈ ಸಮುದಾಯದ ಜನಸಂಖ್ಯೆಯನ್ನು ಅಲೆಮಾರಿ ಗುಂಪಿಗೆ, 2,58,915 ಜನಸಂಖ್ಯೆಯನ್ನು ಮಾದಿಗರ ಗುಂಪಿಗೆ ಸರ್ಕಾರದ ನಿಬಂಧನೆಗಳಿಗೆ ವಿರುದ್ಧವಾಗಿ 4,74,954 ಜನರನ್ನು ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರಗಳೆಂದು ವಿಂಗಡಿಸಿ ಶೇಕಡ 1 ರಷ್ಟು ಮೀಸಲಾತಿ ನಿಗದಿ ಪಡಿಸಲು ಶಿಫಾರಸ್ಸು ಮಾಡಲಾಗಿದೆ ಎಂದು ದೂರಿದರು.

ಜನರಲ್ ಮೆರಿಟ್ ನಲ್ಲಿ ನೇಮಕವಾಗಿರುವ ಪ.ಜಾತಿಯ ಬಲಗೈ ಸಮುದಾಯದ ನೌಕರರನ್ನು ಒಟ್ಟಾರೆ ಸಂಖ್ಯೆಯಲ್ಲಿ ಪರಿಗಣಿಸಿರುವುದಲ್ಲದೇ ಸಾಮಾನ್ಯ ಸ್ಥಾನಗಳಲ್ಲಿ ಗೆದ್ದಿರುವ ಜನಪ್ರತಿನಿಧಿಗಳನ್ನು ಬಲಗೈ ಜನಪ್ರತಿನಿಧಿಗಳ ಒಟ್ಟಾರೆ ಸಂಖ್ಯೆಯಲ್ಲಿ ಪರಿಗಣಿಸಿ ದುರುದ್ದೇಶ ಪೂರಿತವಾದ ಪಕ್ಷಪಾತದಿಂದ ಕೂಡಿದ ವರದಿಯನ್ನು ಸಿದ್ಧಪಡಿಸಿರುವ ನಾಗಮೋಹನ್ ದಾಸ್ ಆಯೋಗವು ಉದ್ದೇಶ ಪೂರ್ವಕವಾಗಿಯೇ ಬಲಗೈ ಸಮುದಾಯಕ್ಕೆ ಯಾವುದೇ ಮೀಸಲಾತಿ ಸೌಲಭ್ಯ ದೊರೆಯದಂತೆ ಮಾಡಿದ್ದಾರೆ ಎಂದು ಟೀಕಿಸಿದರು.

ಈ ವರದಿ ಅನ್ವಯ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಯ ಬಲಗೈ ಸಮುದಾಯವನ್ನು ಗ್ರೂಪ್ ಬಿ ಗೆ ಸೇರಿಸುವುದರ ಮೂಲಕ ಯಾವುದೇ ಉನ್ನತ ಹುದ್ದೆಗಳು ಹೊಲಯ - ಛಲವಾದಿ ಬಲಗೈ ಸಮುದಾಯಕ್ಕೆ ಸಿಗದಂತೆ ರೋಸ್ಟರ್ ಬಿಂದುಗಳನ್ನು ನಿಗದಿ ಪಡಿಸಲಾಗಿದೆ ಎಂದು ಕೋಟೆ ಕುಮಾರ್ ಆರೋಪಿಸಿದರು.

ಅವೈಜ್ಞಾನಿಕ ವರದಿ:

ಒಕ್ಕೂಟದ ಮುಖಂಡ ಶಿವಲಿಂಗ ಮಾತನಾಡಿ, ಒಳ ಮೀಸಲಾತಿಯು 101 ಜಾತಿಗಳಿಗೆ ಸಮಾನವಾಗಿ ಹಂಚಿಕೆಯಾಗುವ ದೃಷ್ಟಿಯಿಂದ ಮೀಸಲಾತಿ ಪ್ರಮಾಣ ಹೆಚ್ಚಳ ಅನಿವಾರ್ಯ. ಆದರೆ, 101 ಜಾತಿಗಳ ಪೈಕಿ 01 ಜಾತಿಯ ಒತ್ತಡಕ್ಕೆ ಸರ್ಕಾರ ಮಣಿದು ಶೇ 15+3ರ ಮೀಸಲಾತಿಯಲ್ಲಿ ಒಳ ಮೀಸಲಾತಿ ಜಾರಿಗೊಳಿಸಲು ಮುಂದಾದರೆ, ಬಲಗೈ ಸಮುದಾಯಗಳಿಗೆ ತುಂಬಾ ಅನ್ಯಾಯವಾಗುತ್ತದೆ. ತಪ್ಪಿದಲ್ಲಿ ಸರ್ಕಾರ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿ ಮುಂದೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಒಕ್ಕೂಟದ ಮುಖಂಡ ಪ್ರದೀಪ್ ಮಾತನಾಡಿ, ನಾಗಮೋಹನ್ ದಾಸ್ ವರದಿ ಅವೈಜ್ಞಾನಿಕವಾಗಿದ್ದು, ಅದನ್ನು ತಿರಸ್ಕರಿಸಿ ಹಳೆಯ ಮೀಸಲಾತಿ ಮುಂದುವರಿಸುವಂತೆ ಒತ್ತಾಯಿಸುವುದು ನಮ್ಮ ಪ್ರತಿಭಟನೆಯ ಉದ್ದೇಶವಾಗಿದೆ. ಯಾವುದೇ ಜಾತಿ ಸಮುದಾಯದ ವಿರುದ್ಧ ನಾವು ಹೋರಾಟ ಮಾಡುತ್ತಿಲ್ಲ. ನಮ್ಮ ಹಕ್ಕುಗಳಿಗಾಗಿ ನಾವು ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಗವಿಯಪ್ಪ, ಹರೀಶ್ ಬಾಲು, ವೆಂಕಟೇಶ್ , ಶೇಖರ್ , ಪುನೀತ್ , ಕಿರಣ್ ಬಾಲು, ದಿನೇಶ್ , ರಮೇಶ್, ಶಿವಲಿಂಗಯ್ಯ, ನಟರಾಜ್, ಸುರೇಶ್, ನವೀನ್, ಶೇಖರ್, ಶಿವರಾಮ, ಎಸ್.ಕುಮಾರ್, ಪ್ರದೀಪ್ ಅಪ್ಪಗೆರೆ, ಶ್ರೀನಿವಾಸ್, ಚಿಕ್ಕಲೂರು ಚೌಡಯ್ಯ, ಪವನ್ ಕುಮಾರ್ ಇತರರಿದ್ದರು.

24ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಗುರುಭವನದಲ್ಲಿ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ಮುಖಂಡ ಕೋಟೆ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವಕರು ಧನಾತ್ಮಕ ಭಾವನೆ ರೂಢಿಸಿಕೊಳ್ಳಿ
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಮನೋರಂಜನೆ ವಾರ