ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಬಾಂಗ್ಲಾ ದೇಶದಲ್ಲಿ ಸ್ವಾಮೀಜಿಗಳ ಬಂಧನ ಹಾಗೂ ಹಿಂದೂಗಳ ಮೇಲಿನ ದೌರ್ಜನ್ಯ ತಡೆಗೆ ಒತ್ತಾಯಿಸಿ ವಿಶ್ವಹಿಂದು ಪರಿಷದ್, ಬಜರಂಗದಳ ತಾಲೂಕು ಘಟಕದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸೋಮವಾರ ಮನವಿ ಸಲ್ಲಿಸಲಾಯಿತು.ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಬಾಂಗ್ಲಾ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿದರು. ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಪದೇ, ಪದೇ ದೌರ್ಜನ್ಯ ಎಸಗುತ್ತಿರುವ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಾಂಗ್ಲಾ ಸರ್ಕಾರ ವಿರುದ್ಧ ಘೋಷಣಾ ಫಲಕಗಳನ್ನು ಕೈಯಲ್ಲಿ ಹಿಡಿದು ಪ್ರತಿಭಟನಾ ಮೆರವಣಿಗೆ ತೆರಳಿದರು. ಮೆರವಣಿಗೆ ಯುದ್ದಕ್ಕೂ ಬಾಂಗ್ಲಾ ಸರ್ಕಾರ ವಿರುದ್ಧ ಘೋಷಣೆ ಮೊಳಗಿಸಿದರು.
ವಿಶ್ವ ಹಿಂದು ಪರಿಷದ್ ಜಿಲ್ಲಾ ಘಟಕ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ತಾಲೂಕು ಘಟಕ ಅಧ್ಯಕ್ಷ ಕಾಶಿನಾಥ ಬಿರಾದಾರ ನೇತೃತ್ವ ವಹಿಸಿ ಮಾತನಾಡಿ, ಬಾಂಗ್ಲಾ ದೇಶದಲ್ಲಿ ತೀವ್ರ ರಾಜಕೀಯ ಬೆಳವಣಿಗೆಗಳ ಕಾರಣಗಳಿಂದ ಆಡಳಿತ ವ್ಯವಸ್ಥೆ ಕುಸಿದಿದೆ. ಆ ಪರಿಣಾಮ ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ, ದಾಳಿಗಳನ್ನು ಮೇಲಿಂದ ಮೇಲೆ ನಡೆಸಲಾಗುತ್ತಿದೆ. ಹಿಂದೂಗಳ ಆಸ್ತಿಗಳನ್ನು ಗುರಿ ಮಾಡಿ ಹಾನಿ ಮಾಡಲಾಗುತ್ತಿದೆ. ಬಾಂಗ್ಲಾ ಇಸ್ಕಾನ್ ಸಂಸ್ಥೆಯ ಚಿನ್ಮಯ ಕೃಷ್ಣದಾಸಪ್ರಭು ಸ್ವಾಮೀಜಿ ಅವರನ್ನು ಹಾಗೂ ಅವರ ಅನುಯಾಯಿಗಳನ್ನು, ಹಿಂದೂ ಹೋರಾಟಗಾರರನ್ನು ಬಂಧಿಸಿರುವುದು ಖಂಡನೀಯ. ಬಾಂಗ್ಲಾದಲ್ಲಿ ಅಲ್ಪ ಸಂಖ್ಯಾತರಾಗಿರುವ ಹಿಂದೂಗಳ ಮನೆಗಳ ಮೇಲೆ ದಾಳಿ, ಅತ್ಯಾಚಾರ ಕೃತ್ಯಗಳು ವಿಪರಿತಗೊಂಡಿವೆ. ಹಿಂದೂ ದೇವಾಲಯ, ಆಶ್ರಮಗಳ ಮೇಲೆ ಜಿಹಾದಿ ದುರಾಡಳಿತದ ಇಬ್ಬಗೆ ನೀತಿ ಖಂಡನೀಯ. ಕೂಡಲೇ ಬಾಂಗ್ಲಾ ದೇಶದಲ್ಲಿರುವ ಹಿಂದೂಗಳ ಪ್ರಾಣ, ಮಾನ, ಆಸ್ತಿ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಮದ್ಯ ಪ್ರವೇಶಿಸಿ ಬಾಂಗ್ಲಾ ದೇಶದ ಹಿಂದೂಗಳ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.ಬಜರಂಗದಳ ತಾಲೂಕು ಸಂಯೋಜಕ ಗಿರೀಶ್ ಹರಕುಣಿ, ಮುಖಂಡರಾದ ಶಿವಾನಂದ ಬಡ್ಡಿಮನಿ, ಸೋಮನಾಥ ಸೊಪ್ಪಿಮಠ, ಆನಂದ ವಾಲಿ, ವಿವೇಕಾನಂದ ಪೂಜೇರ, ಮಲ್ಲಿಕಾರ್ಜುನ ಏಣಗಿಮಠ, ಜಗದೀಶ ಲೋಕಾಪುರ, ರಾಜು ಬೊಂಗಾಳೆ, ಸಂಗಪ್ಪ ಕಾದ್ರೋಳ್ಳಿ, ವಿಜಯ ಪತ್ತಾರ, ಸಂಗಮೇಶ ಸವದತ್ತಿಮಠ, ಅಜ್ಜಪ್ಪ ಕೂಡಾಸೋಮಣ್ಣವರ, ರವಿ ಸವಟಗಿ, ಸತೀಶ ಮತ್ತಿಕೊಪ್ಪ, ಅಜಯ್ ಹಿರೇಮಠ್, ಮಂಜುನಾಥ್ ತಲ್ಲೂರ, ರತನ್ ರಜಪೂತ, ಗಿರೀಶ್ ಹಲಸಗಿ, ಚೇತನ್ ನೇಸರಗಿ, ಶಿವು ತೊಲಗಿ, ಆರ್.ಎನ್.ಕಿತ್ತೂರ, ಹನುಮಮಾಲಾಧಾರಿಗಳು ಇದ್ದರು.