ವಾಲ್ಮೀಕಿ ನಿಗಮ ಹಗರಣ ಖಂಡಿಸಿ ನಾಳೆ ಪ್ರತಿಭಟನೆ

KannadaprabhaNewsNetwork | Published : Jun 27, 2024 1:01 AM

ಸಾರಾಂಶ

ವಾಲ್ಮೀಕಿ ನಿಗಮದಲ್ಲಿ ಫೇಕ್ ಖಾತೆ ನಿರ್ಮಿಸಿ ₹197 ಕೋಟಿ ವರ್ಗಾವಣೆ ಮಾಡಿ, ಭ್ರಷ್ಟಾಚಾರ ಮಾಡಿ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಇದನ್ನು ಖಂಡಿಸಿ ಜೂನ್ 28ರಂದು ಬೆಳಗ್ಗೆ 10ಗಂಟೆಗೆ ನಗರದ ಮಹಾತ್ಮಾಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ರವಿ ವಗ್ಗಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಾಲ್ಮೀಕಿ ನಿಗಮದಲ್ಲಿ ಫೇಕ್ ಖಾತೆ ನಿರ್ಮಿಸಿ ₹197 ಕೋಟಿ ವರ್ಗಾವಣೆ ಮಾಡಿ, ಭ್ರಷ್ಟಾಚಾರ ಮಾಡಿ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಇದನ್ನು ಖಂಡಿಸಿ ಜೂನ್ 28ರಂದು ಬೆಳಗ್ಗೆ 10ಗಂಟೆಗೆ ನಗರದ ಮಹಾತ್ಮಾಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ರವಿ ವಗ್ಗಿ ಹೇಳಿದರು.

ಎಸ್ಟಿ ಮೋರ್ಚಾ ವತಿಯಿಂದ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋರಾಟದಲ್ಲಿ ಜಿಲ್ಲಾದ್ಯಂತ ಇರುವ ಪರಿಶಿಷ್ಟ ಪಂಗಡದ ಸಮುದಾಯದ ಜನತೆ ಭಾಗವಹಿಸಬೇಕು ಎಂದು ಕರೆ ಕೊಟ್ಟರು. ಚಿನ್ನಾಭರಣಗಳ ಅಂಗಡಿ, ಬಾರ್ ರೆಸ್ಟೋರೆಂಟ್‌ಗಳಿಗೆ ಅಕ್ರಮವಾಗಿ ಕೋಟ್ಯತರ ಹಣವನ್ನು ವರ್ಗಾವಣೆ ಮಾಡಲಾಗಿದೆ. ಇದೆಲ್ಲವೂ ಹಣಕಾಸು ಇಲಾಖೆಯ ಗಮನಕ್ಕೆ ಬಾರದೇ ನಡೆಯುತ್ತದೇಯಾ ಎಂದು ಪ್ರಶ್ನಿಸಿದರು.

ಹಣಕಾಸು ಇಲಾಖೆ ನೋಡಿಕೊಳ್ಳುವ ಸಿಎಂ ಸಿದ್ಧರಾಮಯ್ಯನವರೇ ನೇರ ಹೊಣೆಗಾರರು ಆಗುತ್ತಾರೆ. ಇದರ ಹೊಣೆಹೊತ್ತು ಸಿಎಂ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

ಚುನಾವಣೆ ಬಂದಾಗ ಮಾತ್ರ ಸಿದ್ಧರಾಮಯ್ಯನವರು ಅಹಿಂದ ಅಂತಾರೆ, ಚುನಾವಣೆ ಬಳಿಕ ಹಿಂದ ಎಂಬುದನ್ನು ತೆಗೆದು ಅ ಎಂಬುದನ್ನು ಅಷ್ಟೆ ಉಳಿಸಿಕೊಳ್ಳುತ್ತಾರೆ. ಅನ್ಯಾಯದ ವಿರುದ್ಧ ಧ್ವನಿಯೆತ್ತಬೇಕಾದ ಕಾಂಗ್ರೆಸ್ ನಲ್ಲಿರುವ ಸಮುದಾಯದ ಮುಖಂಡರು ಮೌನ ವಹಿಸಿದ್ದಾರೆ. ನಿಗಮದಿಂದ ಅನ್ಯಾಯಕ್ಕೊಳಗಾದ ಸಮುದಾಯಕ್ಕೆ ನ್ಯಾಯ ಕೊಡಿಸುವಲ್ಲಿ ಕಾಂಗ್ರೆಸ್‌ನಲ್ಲಿರುವ ಸಮಾಜದ ಮುಖಂಡರು ಮುಂದಾಗಬೇಕು ಎಂದು ಒತ್ತಾಯಿಸಿದರು.

ಹಿಂದುಳಿದ ವರ್ಗದ ಮೋರ್ಚಾ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ ಮಾತನಾಡಿ, ಒಂದು ವರ್ಷದ ಹಿಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಸಿಎಂ ಅವರು ಸರ್ವಜನಾಂಗದ ಶಾಂತಿಯ ತೋಟ ಮಾಡುತ್ತೇನೆ ಎಂದು ಹೇಳಿ, ಇದೀಗ ಹಣಕಾಸು ವಿಚಾರದಲ್ಲಿ ರಾಜ್ಯದ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ರೇವೂರ, ಕಾರ್ಯದರ್ಶಿ ಮಹಾಂತೇಶ ಬೇವೂರ, ಎಸ್‌ಟಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭರತ ಕೋಳಿ ಉಪಸ್ಥಿತರಿದ್ದರು.

---ಕೋಟ್‌

ತಕ್ಷಣವೇ ಎಲ್ಲ ಬೆಲೆ ಏರಿಕೆಗಳನ್ನು ಹಿಂಪಡೆಯಬೇಕು. ಕಾಂಗ್ರೆಸ್‌ ಸರ್ಕಾರದಲ್ಲಿ ಜನರಿಗೆ ಆಗಿರುವ ಅನ್ಯಾಯ ಸರಿಪಡಿಸದಿದ್ದರೇ ಶಾಸಕರು ಹಾಗೂ ಸಚಿವರನ್ನು ಕೆಳಗೆ ಇಳಿಸುವ ಮಟ್ಟದಲ್ಲಿ ಹೋರಾಟ ಮಾಡಲಾಗುತ್ತದೆ.

-ವಿವೇಕಾನಂದ ಡಬ್ಬಿ ಹಿಂದುಳಿದ ವರ್ಗದ ಮೋರ್ಚಾ ರಾಜ್ಯ ಉಪಾಧ್ಯಕ್ಷ

Share this article