ಪೌರಕಾರ್ಮಿಕರ ನೇಮಕಾತಿಯಲ್ಲಿ ಅನ್ಯಾಯ: ಪ್ರತಿಭಟನೆ ಎಚ್ಚರಿಕೆ

KannadaprabhaNewsNetwork |  
Published : Dec 05, 2025, 12:15 AM IST
೪ಕೆಎಂಎನ್‌ಡಿ-೨ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ರಾಜು ಮಾತನಾಡಿದರು. | Kannada Prabha

ಸಾರಾಂಶ

ಮಂಡ್ಯ ನಗರಸಭೆಯಲ್ಲಿ ಸುಮಾರು ೨೦ ವರ್ಷಗಳಿಗೂ ಹೆಚ್ಚು ಕಾಲದಿಂದ ಗುತ್ತಿಗೆ ಹಾಗೂ ನೇರ ಪಾವತಿ ಆಧಾರದ ಮೇಲೆ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವವರ ನೇಮಕಾತಿ ಪ್ರಕ್ರಿಯೆಯಲ್ಲಿ ಅನ್ಯಾಯವೆಸಗಿದರೆ ನಗರಸಭೆ ಎದುರು ಪ್ರತಿಭಟನೆ ನಡೆಸಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರಸಭೆಯಲ್ಲಿ ಸುಮಾರು ೨೦ ವರ್ಷಗಳಿಗೂ ಹೆಚ್ಚು ಕಾಲದಿಂದ ಗುತ್ತಿಗೆ ಹಾಗೂ ನೇರ ಪಾವತಿ ಆಧಾರದ ಮೇಲೆ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವವರ ನೇಮಕಾತಿ ಪ್ರಕ್ರಿಯೆಯಲ್ಲಿ ಅನ್ಯಾಯವೆಸಗಿದರೆ ನಗರಸಭೆ ಎದುರು ಪ್ರತಿಭಟನೆ ನಡೆಸುವುದಾಗಿ ರಾಜ್ಯ ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ರಾಜು ಎಚ್ಚರಿಕೆ ನೀಡಿದರು.

ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ನೇರ ನೇಮಕಾತಿ ವಿಧಾನದಲ್ಲಿ ಕಡಿಮೆ ಸೇವೆ ಸಲ್ಲಿಸಿದವರಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದವರನ್ನು ಪರಿಗಣಿಸತಕ್ಕದ್ದು ಎಂದು ಸೂಚಿಸಲಾಗಿದೆ. ಸೇವಾವಧಿ ಒಂದೇ ಇದ್ದ ಪಕ್ಷದಲ್ಲಿ ಮಾತ್ರ ವಯಸ್ಸಿನ ಆಧಾರದಲ್ಲಿ ನೇಮಕಾತಿ ಮಾಡುವಂತೆ ತಿಳಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು ೨೭ ಪೌರ ಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಮಂಡ್ಯ ನಗರಸಭೆ-೮, ಮದ್ದೂರು ನಗರಸಭೆ-೬, ಉಳಿದಂತೆ ತಲಾ ೩ ಪೌರ ಕಾರ್ಮಿಕರನ್ನು ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆದರೆ, ಹಿಂದಿನ ನೇಮಕಾತಿ ಪ್ರಕ್ರಿಯೆಯಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿದವರನ್ನು ನೇಮಕಾತಿಯಿಂದ ಕೈಬಿಟ್ಟು ಕೇವಲ ೩-೪ ವರ್ಷ ಸೇವೆ ಸಲ್ಲಿಸಿರುವ ಕೆಲವರನ್ನು ನೇರ ನೇಮಕಾತಿಯಡಿ ಕಾಯಂ ಮಾಡಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಕಡಿಮೆ ಸೇವಾವಧಿಯವರನ್ನು ಜೇಷ್ಠತಾ ಪಟ್ಟಿಯಲ್ಲಿ ವಯಸ್ಸಿನ ಆಧಾರದ ಮೇಲೆ ಸೇರಿಸಿ ರಾಜ್ಯಪತ್ರದ ಆಶಯವನ್ನು ವಿರೋಧಿಸಿದ್ದಾರೆ ಎಂದು ಪೌರಾಯುಕ್ತರು ಹಾಗೂ ಪರಿಸರ ಅಭಿಯಂತರರ ವಿರುದ್ಧ ಆರೋಪಿಸಿದರು.

ಈ ಅನ್ಯಾಯವನ್ನು ಸರಿಪಡಿಸಿ ದೀರ್ಘಾವಧಿ ಸೇವೆ ಸಲ್ಲಿಸಿರುವ ಅರ್ಹ ಪೌರ ಕಾರ್ಮಿಕರಿಗೆ ತಕ್ಷಣವೇ ನ್ಯಾಯ ಒದಗಿಸಲು ಮತ್ತು ನಮಗೆ ನೇರ ನೇಮಕಾತಿ ನೀಡಲು ಆದೇಶ ಹೊರಡಿಸಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ನೇಮಕಾತಿಯಲ್ಲಿ ಮತ್ತೆ ಲೋಪ-ದೋಷಗಳು ಮುಂದುವರೆದರೆ ಡಿ.೨೭ರಿಂದ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ರಂಗಣ್ಣ, ಪಿ.ಮಂಜುನಾಥ, ಸಿ.ಆರ್.ವಿಜಯ್, ಮಂಚಯ್ಯ, ದಿನೇಶ್‌ಕುಮಾರ್, ಗಣೇಶ್, ತಂಗ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಡಿದ್ದು ವೃಕ್ಷಥಾನ್ ಹೆರಿಟೇಜ್ ರನ್-2025
ಡಾ.ವೀರೇಂದ್ರ ಹೆಗ್ಗಡೆಯವರ ಸಮಾಜಮುಖಿ ಕಾರ್ಯ ಮಾದರಿ