ಕಾಂಗ್ರೆಸ್ ಸರ್ಕಾರ ವಜಾ ಮಾಡಲು ಜೆಡಿಎಸ್ ಆಗ್ರಹ । ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ
ತೈಲ, ಹಾಲು ಬೆಲೆ ಏರಿಕೆ ವಿರೋಧಿಸಿ ಎತ್ತಿನಬಂಡಿಯೊಂದಿಗೆ ನಗರದಲ್ಲಿ ಜೆಡಿಎಸ್ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.ಜನ ವಿರೋಧಿ ನೀತಿಯಲ್ಲಿ ತೊಡಗಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಕೂಡಲೇ ವಜಾ ಮಾಡಬೇಕೆಂದು ಆಗ್ರಹಿಸಿ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಹಾಗೂ ಜಿಲ್ಲಾಧ್ಯಕ್ಷ ಸುರೇಶ್ ಭೂಮರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.ನಗರದ ಬನ್ನಿಕಟ್ಟಿಯಿಂದ ಎತ್ತಿನಬಂಡಿಯೊಂದಿಗೆ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಕೇಂದ್ರ ಬಸ್ ನಿಲ್ದಾಣದ ಎದುರಿನ ರಸ್ತೆಯ ಮೂಲಕ ಬಸವೇಶ್ವರ ಸರ್ಕಲ್ ವರೆಗೂ ನಡೆಯಿತು.
ಅಶೋಕ ವೃತ್ತದಲ್ಲಿ ಜೆಡಿಎಸ್ ಕೋರ್ ಕಮಿಟಿ ರಾಜ್ಯ ಸದಸ್ಯ ಸಿ.ವಿ. ಚಂದ್ರಶೇಖರ ಮಾತನಾಡಿ, ಗ್ಯಾರಂಟಿ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕಳೆದ 14 ತಿಂಗಳಲ್ಲಿ ಸಾಮಾನ್ಯರ ಬದುಕನ್ನು ದುಸ್ತರ ಮಾಡಿದೆ. ಕಾಂಗ್ರೆಸ್ ನಾಯಕರು ನೇರವಾಗಿ ಬಡವರ ಜೇಬಿಗೆ ಕೈ ಹಾಕಿ ಲೂಟಿ ಹೊಡೆದದ್ದೆ ಕಳೆದ ಒಂದು ವರ್ಷದ ಸಾಧನೆ. ಅಲ್ಪ ಸ್ವಲ್ಪ ಉಳಿಯುತ್ತಿದ್ದ ಹಣವನ್ನೂ ನಿರ್ದಯವಾಗಿ ಕಿತ್ತುಕೊಂಡ ಈ ಸರ್ಕಾರ ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಹಕ್ಕನ್ನೆ ಕಳೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.ವಿದ್ಯುತ್ ಬಿಲ್ಲು ದುಪ್ಪಟ್ಟಾಗಿದೆ. ತೈಲ ಬೆಲೆ ಗಗನಕ್ಕೇರಿದೆ. ಹಾಲಿನ ಬೆಲೆ ಮತ್ತೂ ಹೆಚ್ಚಾಯಿತು. ಬಿತ್ತನೆ ಬೀಜದ ದರ ಕೊಂಡುಕೊಳ್ಳಲಾಗದಷ್ಟು ಏರಿದೆ ಎಂದು ಕಿಡಿಕಾರಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ ಮಾತನಾಡಿ, ರಾಜ್ಯದಲ್ಲಿರುವ ಅತ್ಯಂತ ಪ್ರತಿಭಾವಂತರನ್ನು ಬಿಟ್ಟು ಹಣಕಾಸು ಕ್ರೂಢೀಕರಣಕ್ಕಾಗಿ ವಿದೇಶಿ ಸಲಹೆಗಾರರನ್ನು ನೇಮಿಸಿದ್ದು ಮಾತ್ರ ಸೋಜಿಗ. ಒಬ್ಬ ಮುಖ್ಯಮಂತ್ರಿಗೆ ಒಂದು ಡಜನ್‌ನಷ್ಟು ಸಲಹೆಗಾರರು. ಅವರಿಗೆ ಗೂಟದ ಕಾರು, ಕ್ಯಾಬಿನೆಟ್ ದರ್ಜೆ. ಇದು ಸಮಾಜವಾದ ಆಡಳಿತದ ವೈಖರಿಯೇ ಎಂಬುದನ್ನು ಸಿದ್ದರಾಮಯ್ಯನವರೇ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ ಕಾನೂನು ವ್ಯವಸ್ಥೆ ಕುಸಿದಿದೆ. ಮುಖ್ಯಮಂತ್ರಿ ಅವರಿಗೆ ಆಡಳಿತ ಯಂತ್ರದ ಮೇಲೆ ನಿಯಂತ್ರಣವಿಲ್ಲ. ಹೀಗಾಗಿ ಈ ಕೂಡಲೇ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.