ಕನ್ನಡಪ್ರಭ ವಾರ್ತೆ ಮೈಸೂರು
ಬೆಳಗಾವಿಯಲ್ಲಿ ಕೆಎಸ್‌ಆರ್ ಟಿಸಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ಖಂಡಿಸಿ ಶನಿವಾರ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.ಬಂದ್ ಪ್ರತಿಭಟನೆಗೆ ಮಾತ್ರ ಸೀಮಿತವಾಗಿತ್ತು. ಹೀಗಾಗಿ, ಜನಜೀವನ ಯಥಾಸ್ಥಿತಿಯಲ್ಲಿತ್ತು. ಇನ್ನೂ ಬಸ್ ಗಳ ಸಂಚಾರ ತಡೆಯಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.
ಹೊಟೇಲ್, ಮಾರುಕಟ್ಟೆ, ಕೆಎಸ್‌ಆರ್ ಟಿಸಿ ಬಸ್ ಗಳು, ಆಟೋ, ಟ್ಯಾಕ್ಸಿ ಸೇರಿದಂತೆ ಅಂಗಡಿ ಮುಂಗಟ್ಟುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಮಾರುಕಟ್ಟೆಗಳಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು. ಶಾಲಾ ಕಾಲೇಜುಗಳಲ್ಲಿ ತರಗತಿ ಮತ್ತು ಪರೀಕ್ಷೆ ಜರುಗಿತು. ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳು ಯಾವುದೇ ತೊಂದರೆ ಇಲ್ಲದೇ ಪರೀಕ್ಷೆ ಬರೆದರು.ನಗರದ ಡಿ. ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಅಶೋಕ ರಸ್ತೆ, ಚಾಮರಾಜ ಜೋಡಿ ರಸ್ತೆ ಸೇರಿದಂತೆ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ವ್ಯಾಪಾರ ವಹಿವಾಟು ನಡೆಯಿತು. ಹೊಟೇಲ್ ಗಳು ಹಾಗೂ ಪೆಟ್ರೋಲ್ ಬಂಕ್ ಗಳು ತೆರೆದಿದ್ದವು.
ಬಸ್ ಸಂಚಾರ ತಡೆಯಲು ಯತ್ನಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸಿ ಕೆಎಸ್ಆರ್ ಟಿಸಿ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಬಸ್ ಓಡಾಟ ತಡೆಯಲು ಯತ್ನಿಸಿದ ಕಾವೇರಿ ಕ್ರಿಯಾ ಸಮಿತಿ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರನ್ನು ಪೊಲೀಸರು ಬಂಧಿಸಿದರು.
ಇದಕ್ಕೂ ಮುನ್ನ ಶನಿವಾರ ಬೆಳಗ್ಗೆ ಬಸ್ ನಿಲ್ದಾಣ ಮುಂಭಾಗ ಆಗಮಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರ ಹಾಗೂ ಮರಾಠಿ ಸಂಘಟನೆ ಮುಖಂಡರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಬಂದ್ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಕೆಎಸ್ಆರ್ ಟಿಸಿ ಗ್ರಾಮಾಂತರ ಬಸ್ ನಿಲ್ದಾಣ, ನಗರ ಬಸ್ ನಿಲ್ದಾಣ, ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ವಿವಿಧೆಡೆ ಪ್ರತಿಭಟನೆಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಯವರು ಬಂದ್ ಬೆಂಬಲಿಸಿ ಕೆಎಸ್ಆರ್ ಟಿಸಿ ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗದಲ್ಲಿ ಕೆಲ ಕಾಲ ಪ್ರತಿಭಟಿಸಿದರು.
ಮುಖಂಡರಾದ ಮೂಗೂರು ನಂಜುಂಡಸ್ವಾಮಿ, ತೇಜೇಶ್ ಲೋಕೇಶ್ ಗೌಡ, ಬಿ.ಎ. ಶಿವಶಂಕರ್, ಮಹದೇವಸ್ವಾಮಿ, ಮಧುವನ ಚಂದ್ರು ಮೊದಲಾದವರು ಇದ್ದರು.ಇನ್ನೂ ಮಹಾರಾಷ್ಟ್ರದ ಪುಂಡಾಟಿಕೆಯನ್ನು ಖಂಡಿಸಿ ಸಮಾಜ ರಕ್ಷಣಾ ಸೇನೆಯವರು ನಗರದ ಗನ್ ಹೌಸ್ ವೃತ್ತದ ಬಳಿ ಪ್ರತಿಭಟಿಸಿದರು. ಸೇನೆಯ ರಾಜಾಧ್ಯಕ್ಷ ಕೆ.ಎಚ್. ಹನುಮಂತರಾಜು, ಮುಖಂಡರಾದ ಶೋಭಾ, ಶರತ್ ಕುಮಾರ್, ಎನ್.ಟಿ. ಜವರೇಗೌಡ, ವೈಕುಂಠ ನಾಯಕ, ಎಂ.ಸಿ. ಅನಿತಾ ಮೊದಲಾದವರು ಇದ್ದರು.
ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆ ಖಂಡಿಸಿ ಕರ್ನಾಟಕ ಬಂದ್ ಹಿನ್ನೆಲೆ ಮೈಸೂರು ಕನ್ನಡ ವೇದಿಕೆಯವರು ಅಗ್ರಹಾರ ವೃತ್ತದಲ್ಲಿ ಪ್ರತಿಭಟಿಸಿದರು. ವೇದಿಕೆಯ ಅಧ್ಯಕ್ಷ ಎಸ್. ಬಾಲಕೃಷ್ಣ, ಮುಖಂಡರಾದ ನಾಲಾಬೀದಿ ರವಿ, ಸಿದ್ದೇಗೌಡ, ಬಾಬು ಮೊದಲಾದವರು ಇದ್ದರು.----
ಕೋಟ್...ಮಹಾರಾಷ್ಟ್ರ ಪದೇ ಪದೇ ಸೌಹಾರ್ದತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. ಈಗಾಗಲೇ ಬಗೆಹರಿದ ವಿಚಾರಕ್ಕೆ ತಗಾದೆ ತೆಗೆಯುತ್ತಿದ್ದಾರೆ. ವಾಟಾಳ್ ನಾಗರಾಜ್ ಸೇರಿದಂತೆ ಹಲವರು ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ. ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದರೆ ಯಾವುದೇ ಸಮಸ್ಯೆ ಇಲ್ಲ.
- ಡಾ.ಎಚ್.ಸಿ. ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವರು