ಸ್ಮಶಾನಕ್ಕೆ ತೆರಳಲು ರಸ್ತೆಯಿಲ್ಲ ಎಂದು ಆರೋಪಿಸಿ ಶವವಿಟ್ಟು ಪ್ರತಿಭಟನೆ

KannadaprabhaNewsNetwork |  
Published : Aug 31, 2025, 02:00 AM IST
30ಎಚ್‌ಯುಬಿ24, 24ಎನವಲಗುಂದ ತಾಲೂಕಿನ ಸೊಟಕನಾಳ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ತೆರಳಲು ಸ್ಮಶಾನ ರಸ್ತೆ ಇಲ್ಲದ್ದನ್ನು ಖಂಡಿಸಿ ಗ್ರಾಮಸ್ಥರು ಬಸ್ ನಿಲ್ದಾಣದ ಹತ್ತಿರ ಟ್ರಾಕ್ಟರ್‌ನಲ್ಲಿ ಶವವನ್ನಿಟ್ಟು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಗ್ರಾಮಸ್ಥರ ಮನವೊಲಿಸುತ್ತಿರುವ ಅಧಿಕಾರಿಗಳು. | Kannada Prabha

ಸಾರಾಂಶ

ಕಳೆದ ಹಲವಾರು ವರ್ಷಗಳಿಂದ ಸೊಟಕನಾಳ ಗ್ರಾಮದಲ್ಲಿ ಸ್ಮಶಾನಕ್ಕೆ ತೆರಳಲು ಅಗತ್ಯ ರಸ್ತೆ ಇಲ್ಲದಿರುವುದರಿಂದ ರಸ್ತೆ ನಿರ್ಮಿಸುವಂತೆ ಆಗ್ರಹಿಸುತ್ತ ಬರಲಾಗಿದೆ. ಆದರೆ, ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಬೇಸತ್ತ ಗ್ರಾಮಸ್ಥರು ಶನಿವಾರ ನಿಧನರಾದ ಮಲ್ಲವ್ವ ಹನಮಂತಪ್ಪ ಆನಂದಿ ಅವರ ಶವವನ್ನು ಗ್ರಾಮದ ಬಸ್ ನಿಲ್ದಾಣದ ಹತ್ತಿರ ಇಟ್ಟು ಪ್ರತಿಭಟನೆ ನಡೆಸಿದರು.

ನವಲಗುಂದ: ಗ್ರಾಮದಲ್ಲಿ ಸ್ಮಶಾನಕ್ಕೆ ತೆರಳಲು ಸೂಕ್ತ ರಸ್ತೆ ಇಲ್ಲ ಎದು ಆರೋಪಿಸಿ ಶವವನ್ನಿಟ್ಟು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ತಾಲೂಕಿನ ಸೊಟಕನಾಳ ಗ್ರಾಮದಲ್ಲಿ ಜರುಗಿದೆ.

ಕಳೆದ ಹಲವಾರು ವರ್ಷಗಳಿಂದ ಸೊಟಕನಾಳ ಗ್ರಾಮದಲ್ಲಿ ಸ್ಮಶಾನಕ್ಕೆ ತೆರಳಲು ಅಗತ್ಯ ರಸ್ತೆ ಇಲ್ಲದಿರುವುದರಿಂದ ರಸ್ತೆ ನಿರ್ಮಿಸುವಂತೆ ಆಗ್ರಹಿಸುತ್ತ ಬರಲಾಗಿದೆ. ಆದರೆ, ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಬೇಸತ್ತ ಗ್ರಾಮಸ್ಥರು ಶನಿವಾರ ನಿಧನರಾದ ಮಲ್ಲವ್ವ ಹನಮಂತಪ್ಪ ಆನಂದಿ ಅವರ ಶವವನ್ನು ಗ್ರಾಮದ ಬಸ್ ನಿಲ್ದಾಣದ ಹತ್ತಿರ ಇಟ್ಟು ಪ್ರತಿಭಟನೆ ನಡೆಸಿದರು. ಅಲ್ಲದೇ ನವಲಗುಂದ ತಹಸೀಲ್ದಾರ್‌ ಕಾರ್ಯಾಲಯದ ಎದುರಿಗೂ ಶವವಿಟ್ಟು ಪ್ರತಿಭಟನೆ ನಡೆಸುವ ತಯಾರಿಯಲ್ಲಿದ್ದರು.

ಸುದ್ದಿ ತಿಳಿದ ನವಲಗುಂದ ಪೊಲೀಸ್ ಠಾಣಿಯ ಎಸ್‍ಐ ಜನಾರ್ಧನ ಭಟ್ರಹಳ್ಳಿ ಸೊಟಕನಾಳ ಗ್ರಾಮಕ್ಕೆ ತೆರಳಿ ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ನಡೆಸಿದ್ದರು. ಆಗ ನವಲಗುಂದ ತಹಸೀಲ್ದಾರ್‌ ಕಾರ್ಯಾಲಯದ ಬದಲಿಗೆ ಗ್ರಾಮದ ಬಸ್ ನಿಲ್ದಾಣದಲ್ಲಿಯೇ ಶವವನ್ನಿಟ್ಟು ಪ್ರತಿಭಟನೆ ನಡೆಸಿದರು. ಅಲ್ಲದೆ, ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಬಂದು ಸ್ಮಶಾನಕ್ಕೆ ತೆರಳಲು ಸೂಕ್ತ ರಸ್ತೆ ನಿರ್ಮಿಸುವ ವರೆಗೂ ಪ್ರತಿಭಟಿಸುವುದಾಗಿ ಪಟ್ಟು ಹಿಡಿದಿದ್ದರು.

ಎಸ್‍ಐ ಜನಾರ್ಧನ ಅವರು ವಿಷಯ ತಿಳಿಸಿದ ನಂತರ ಗ್ರಾಮಕ್ಕೆ ಆಗಮಿಸಿದ ತಹಸೀಲ್ದಾರ್‌ ಸುಧೀರ ಸಾಹುಕಾರ ಗ್ರಾಮಸ್ಥರೊಂದಿಗೆ ಚರ್ಚಿಸಿ ಗ್ರಾಮದಲ್ಲಿನ ಸ್ಮಶಾನ ರಸ್ತೆ ಕುರಿತಾದ ವಿಷಯ ಗಮನದಲ್ಲಿದೆ. ಸ್ಮಶಾನ ಮಾರ್ಗದಲ್ಲಿ ಖಾಸಗಿ ಜಮೀನುಗಳಿದ್ದು ಆ ಜಮೀನು ಮಾಲೀಕರೊಂದಿಗೆ ಮಾತನಾಡಿ ಶೀಘ್ರದಲ್ಲಿಯೇ ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿದರು. ನಂತರ ಗ್ರಾಮಸ್ಥರು ಮಲ್ಲವ್ವ ಆನಂದಿ ಅವರ ಅಂತ್ಯಕ್ರಿಯೆ ನಡೆಸಿದರು.

ಡಿವೈಎಸ್ಪಿಗಳಾದ ಮಹಾಂತೇಶ ಕಟಗಿ, ಮುಕ್ತೇದಾರ, ಸಿಪಿಐ ರವಿ ಕಪ್ಪತ್ತನವ ಹಾಗೂ ಗ್ರಾಪಂ ಅಧ್ಯಕ್ಷ, ಸದಸ್ಯರು ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.

ಹಲವಾರು ವರ್ಷಗಳಿಂದ ಗ್ರಾಮದಲ್ಲಿ ಸ್ಮಶಾನವೇ ಇರಲಿಲ್ಲ. ಇತ್ತೀಚೆಗೆ ಸರ್ಕಾರ 10 ಗುಂಟೆ ಜಾಗ ನೀಡಿದೆ. ಆದರೆ, ಅಲ್ಲಿಗೆ ತೆರಳಲು ರಸ್ತೆ ಇಲ್ಲದ ಕಾರಣ ಖಾಸಗಿ ಜಮೀನಿನ ಮಾಲೀಕರು ಬೆಳೆ ಇದ್ದ ಸಂದರ್ಭದಲ್ಲಿ ತಮ್ಮ ಹೊಲಗಳಲ್ಲಿ ತೆರಳಲು ಆಕ್ಷೇಪಿಸುತ್ತಾರೆ. ರಸ್ತೆ ನಿರ್ಮಿಸುವಂತೆ ಹಲವಾರು ಬಾರಿ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಅನಿವಾರ್ಯವಾಗಿ ಶವವನ್ನಿಟ್ಟು ಪ್ರತಿಭಟಿಸಬೇಕಾಯಿತು ಎಂದು ಸೊಟಕನಾಳ ಗ್ರಾಮದ ವೀರನಗೌಡ ಹಿರೇಗೌಡರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಮಟ್ಟದ ಸ್ಕ್ವಾಶ್ ಚಾಂಪಿಯನ್‌ಶಿಪ್: ಹರಿಹರ ತಂಡಕ್ಕೆ ರನ್ನರ್ ಅಪ್ ಟ್ರೋಫಿ
ಬೀದಿ ದೀಪ ಅಳವಡಿಸಲು ಒತ್ತಾಯಿಸಿ ಪ್ರತಿಭಟನೆ