ಶೃಂಗೇರಿ ಕ್ಷೇತ್ರದ ರಸ್ತೆಗಳ ಹೊಂಡ ಶೀಘ್ರ ಮುಚ್ಚದಿದ್ದರೆ ಪ್ರತಿಭಟನೆ: ಅರುಣಕುಮಾರ್ ಎಚ್ಚರಿಕೆ

KannadaprabhaNewsNetwork |  
Published : Sep 25, 2025, 01:00 AM IST
 ನರಸಿಂಹರಾಜಪುರ ತಾಲೂಕಿನ ಬಿ.ಎಚ್.ಕೈಮರ ಸಮೀಪದ ಮುಖ್ಯರಸ್ತೆಯಲ್ಲಿ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ರಸ್ತೆಯ ಹೊಂಡಗಳನ್ನು ಮುಚ್ಚುವಂತೆ ಆಗ್ರಹಿಸಿ ಹೊಂಡಗಳಿಗೆ ಬಾಳೆ ಗಿಡ ನೆಟ್ಟು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಶೃಂಗೇರಿ ಕ್ಷೇತ್ರದ ಎಲ್ಲಾ ರಸ್ತೆಗಳಲ್ಲೂ ಹೊಂಡ, ಗುಂಡಿಗಳು ಬಿದ್ದಿದ್ದು ಶಾಸಕರು ಕೂಡಲೆ ಹೊಂಡ ಮುಚ್ಚಿಸದಿದ್ದರೆ ಮುಂದೆ ತೀವ್ರ ರೀತಿ ಪ್ರತಿಭಟನೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಅರುಣಕುಮಾರ್ ಎಚ್ಚರಿಕೆ ನೀಡಿದರು.

- ಬಿಜೆಪಿ ಪಕ್ಷದಿಂದ ಬಿ.ಎಚ್.ಕೈಮರ ಸಮೀಪದ ಮುಖ್ಯ ರಸ್ತೆಯಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ, ರಸ್ತೆ ತಡೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಶೃಂಗೇರಿ ಕ್ಷೇತ್ರದ ಎಲ್ಲಾ ರಸ್ತೆಗಳಲ್ಲೂ ಹೊಂಡ, ಗುಂಡಿಗಳು ಬಿದ್ದಿದ್ದು ಶಾಸಕರು ಕೂಡಲೆ ಹೊಂಡ ಮುಚ್ಚಿಸದಿದ್ದರೆ ಮುಂದೆ ತೀವ್ರ ರೀತಿ ಪ್ರತಿಭಟನೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಅರುಣಕುಮಾರ್ ಎಚ್ಚರಿಕೆ ನೀಡಿದರು.

ಬುಧವಾರ ಬಿ.ಎಚ್.ಕೈಮರ ಸಮೀಪದ ಮುಖ್ಯರಸ್ತೆಯಲ್ಲಿ ಬಿಜೆಪಿಯಿಂದ ರಸ್ತೆ ಹೊಂಡ ಮುಚ್ಚುವಂತೆ ಆಗ್ರಹಿಸಿ ಅರ್ಧ ಗಂಟೆ ರಸ್ತೆ ತಡೆ ಹಾಗೂ ಹೊಂಡಗಳಿಗೆ ಬಾಳೆ ಗಿಡ ನೆಟ್ಟು ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಶಾಸಕರು ಗುಣಮಟ್ಟದ ರಸ್ತೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಗುಣಮಟ್ಟದ ರಸ್ತೆ ಮಾಡಿದ್ದರೆ ಇಷ್ಟು ಬೇಗ ಹೊಂಡಗಳು ಬೀಳುತ್ತಿರಲಿಲ್ಲ. ಹಣವೆಲ್ಲಾ ಗ್ಯಾರಂಟಿಗೆ ಹೋಗುತ್ತಿದೆ ಎನ್ನುತ್ತಿದ್ದಾರೆ. ಆದರೆ, ಗ್ಯಾರಂಟಿ ಯೋಜನೆ ಬಂದ ತಕ್ಷಣ ತೆರಿಗೆ ಜಾಸ್ತಿ ಮಾಡಿ ಹಣ ಹೊಂದಾಣಿಕೆ ಮಾಡಿಕೊಂಡಿದ್ದೀರಿ. ಅಭಿವೃದ್ಧಿಗೆ ಇಟ್ಟ ಹಣದಿಂದ ರಸ್ತೆ ಗುಂಡಿಗಳನ್ನು ಮುಚ್ಚಬೇಕಾಗಿತ್ತು. ಈಗ ಸಾಂಕೇತಿಕವಾಗಿ ಹೋರಾಟ ಮಾಡಿದ್ದೇವೆ. ಮುಂದೆ ಉಗ್ರರೀತಿ ಹೋರಾಟಕ್ಕೆ ಇಳಿಯುತ್ತೇವೆ ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ವಿ. ನೀಲೇಶ್ ಮಾತನಾಡಿ,ಇಂದು ರಾಜ್ಯದ ಎಲ್ಲಾ ವಿಧಾನ ಸಭಾ ಕ್ಷೇತ್ರದಲ್ಲೂ ರಸ್ತೆ ಹೊಂಡ ಮುಚ್ಚುವಂತೆ ಪ್ರತಿಭಟನೆ ನಡೆಸಿದ್ದೇವೆ. ಸರ್ಕಾರ ಜನರಿಗೆ ಗ್ಯಾರಂಟಿ ಭಾಗ್ಯ ಕೊಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ರಸ್ತೆ ತುಂಬಾ ಹೊಂಡ ಬಿದ್ದಿರುವುದರಿಂದ ಶಿವಮೊಗ್ಗಕ್ಕೆ ರೋಗಿಗಳನ್ನು ಕರೆತಂದು ಆ್ಯಂಬುಲೆನ್ಸ್ ಹೋಗಲು ಸಹ ಸಾಧ್ಯವಿಲ್ಲದಂತಹ ಪರಿಸ್ಥಿತಿ ಬಂದಿದೆ. ಬೈಕ್‌ ಸವಾರರು ಗುಂಡಿಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಶಾಸಕರು ಕ್ಷೇತ್ರದ ಎಲ್ಲಾ ರಸ್ತೆಗಳಲ್ಲಿ ಓಡಾಡಿದರೆ ರಸ್ತೆ ಹೊಂಡಗಳು ಕಣ್ಣಿಗೆ ಬೀಳುತ್ತದೆ. ರಸ್ತೆಗೆ ಬಂದರೆ ಹೊಂಡ, ತೋಟಕ್ಕೆ ಹೋದರೆ ಆನೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ತಾಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿದಯಾನಂದ್ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿಂಗಾ ಪುರ ರೀತಿ ರಸ್ತೆ ಮಾಡುತ್ತೇವೆ ಎಂದಿದ್ದರು. ಈಗ ರಸ್ತೆ ಗುಂಡಿಯೇ ಮುಚ್ಚುತ್ತಿಲ್ಲ. ಹಿಂದೆ ಜೀವರಾಜ್ ಶಾಸಕರಾಗಿದ್ದಾಗ ಎಲ್ಲಾ ರಸ್ತೆ ಅಭಿವೃದ್ಧಿ ಹೊಂದಿತ್ತು. ಆದಷ್ಟು ಬೇಗ ರಸ್ತೆ ಗುಂಡಿ ಮುಚ್ಚಿ ಅಪಘಾತ ತಪ್ಪಿಸಿ ಎಂದು ಸರ್ಕಾರಕ್ಕೆ ಆಗ್ರಹಿಸಿದರು. ಬಿಜೆಪಿ ಮುಖಂಡ ಎಂ.ಎನ್.ನಾಗೇಶ್, ಪ್ರೀತಂ ಮಾತನಾಡಿದರು.

ಸಭೆಯಲ್ಲಿ ಬಿಜೆಪಿ ಮುಖಂಡರಾದ ಪಿ.ಜೆ.ಆಂಟೋನಿ, ಎನ್‌.ಎಂ.ಕಾಂತರಾಜ್, ಎ.ಬಿ.ಮಂಜುನಾಥ್, ಎಚ್‌.ಡಿ.ಲೋಕೇಶ್, ಅಶ್ವನ್, ಶ್ರೀನಾಥ್,ಸುರಭಿ ರಾಜೇಂದ್ರ, ಪರ್ವೀಜ್, ಆಶೀಶ್ ಕುಮಾರ್, ರೀನಾ ಬೆನ್ನಿ,ವಿಜಯಕುಮಾರ್, ಪ್ರಸಾದ್, ಪ್ರವೀಣ್, ಪ್ರಸನ್ನ, ಜಗದೀಶ್, ಸಂದೀಪ್,ವೈ.ಎಸ್.ರವಿ, ಗೋಪಾಲ್ ಮತ್ತಿತರರು ಇದ್ದರು.

PREV

Recommended Stories

ಉಡುಪಿ-ಉಚ್ಚಿಲ ದಸರಾ: ನಿತ್ಯ ಸಾವಿರಾರು ಮಹಿಳೆಯರಿಂದ ಕುಂಕುಮಾರ್ಚನೆ
ಡಾ.ಬಿ.ಆರ್‌.ಅಂಬೇಡ್ಕರ್‌ ಸಭಾಭವನ ಉದ್ಘಾಟನೆ