ಬೇಲೂರು: ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ನಟರಾಜು ಒತ್ತಾಯಿಸಿದರು.ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾಡಾನೆ- ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಆನೆಗಳ ಸ್ಥಳಾಂತರ ಮಾಡುವುದಾದರೆ, ಸಂಬಂಧಪಟ್ಟ ಜಿಲ್ಲೆಗಳ ಜನಪ್ರತಿನಿಧಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯರ ವಿಶ್ವಾಸ ಪಡೆದು, ಸೂಕ್ತ ಪೂರ್ವಸಿದ್ಧತೆಗಳೊಂದಿಗೆ ಕ್ರಮ ಕೈಗೊಳ್ಳಬೇಕು. ಆನೆಗಳ ಸ್ಥಳಾಂತರ ವಿಚಾರದಲ್ಲಿ ಅರಣ್ಯ ಸಚಿವರು ಹಾಸನ ಮತ್ತು ಚಿಕ್ಕಮಗಳೂರು ಎರಡೂ ಜಿಲ್ಲೆಗಳ ಜನಪ್ರತಿನಿಧಿಗಳನ್ನು ಕರೆದು ಸಭೆ ನಡೆಸುವುದಾಗಿ ಹೇಳಿರುವುದು ಸ್ವಾಗತಾರ್ಹ. ಆದರೆ, ಈ ಹಿಂದೆ ಸ್ಥಳಾಂತರದ ಕುರಿತು ಚರ್ಚೆ ನಡೆದಾಗ ಸ್ಥಳೀಯರ ಅಭಿಪ್ರಾಯಗಳಿಗೆ ಸಮರ್ಪಕವಾಗಿ ಅವಕಾಶ ನೀಡದೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವೆ ಸೂಕ್ತ ಸಮನ್ವಯದ ಕೊರತೆ ಕಂಡುಬಂದಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯವಾಗಿಯೇ ಸಭೆ ನಡೆಸಿ, ಜನರ ಸಮಸ್ಯೆಗಳನ್ನು ಆಲಿಸಬೇಕು ಎಂದರು.ಕಾಡಾನೆಗಳ ಸ್ಥಳಾಂತರದ ಕುರಿತು ತೀರ್ಮಾನ ಕೈಗೊಳ್ಳುವ ಮೊದಲು ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಜನಪ್ರತಿನಿಧಿಗಳು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಬೇಕು. ಯಾವ ಪ್ರದೇಶಕ್ಕೆ ಎಷ್ಟು ಆನೆಗಳನ್ನು ಸ್ಥಳಾಂತರಿಸಬೇಕು, ಅಲ್ಲಿ ಅವುಗಳಿಗೆ ಆಹಾರ, ನೀರು ಹಾಗೂ ಸೂಕ್ತ ವಾಸಸ್ಥಳದ ವ್ಯವಸ್ಥೆ ಇದೆಯೇ ಎಂಬುದನ್ನು ವೈಜ್ಞಾನಿಕವಾಗಿ ಪರಿಶೀಲಿಸಬೇಕು. ಈಗಾಗಲೇ ಸ್ಥಳಾಂತರಿಸಲು ಉದ್ದೇಶಿಸಿರುವ ಪ್ರದೇಶಗಳಲ್ಲಿ ಆನೆಗಳಿರುವ ಸಾಧ್ಯತೆ ಹೆಚ್ಚಿದ್ದು, ಹೊಸ ಆನೆಗಳ ಗುಂಪುಗಳನ್ನು ಅಲ್ಲಿಗೆ ಬಿಡುವುದರಿಂದ ಗುಂಪುಗಳ ನಡುವಿನ ಸಂಘರ್ಷ ಹೆಚ್ಚಾಗುವ ಅಪಾಯವಿದೆ. ಆನೆಗಳಿಗೆ ಅಗತ್ಯವಾದ ಆಹಾರ, ನೀರು, ಕಾಡಿನ ವಿಸ್ತೀರ್ಣ ಹಾಗೂ ಅವುಗಳ ಚಲನವಲನಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸದೆ ಸ್ಥಳಾಂತರ ಮಾಡುವುದು ಸೂಕ್ತವಲ್ಲ. ಪೂರ್ವಸಿದ್ಧತೆ ಇಲ್ಲದೆ ಕೈಗೊಳ್ಳುವ ಯೋಜನೆ ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು. ಜೆಡಿಎಸ್ ಮುಖಂಡ ನಾಗೇನಹಳ್ಳಿ ಚಿದು, ಹೀಗಿರುವ ಅರಣ್ಯ ಸಚಿವರು ನಗರ ಪ್ರದೇಶದಲ್ಲಿ ಇರುವುದರಿಂದ ಅವರಿಗೆ ಹಳ್ಳಿಯ ಜನರ ನಾಡಿಮಿಡಿತ ತಿಳಿಯುವುದು ಕಷ್ಟವಾಗಿದೆ. ಅರಣ್ಯ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಬೇಕು. ಸ್ಥಳಾಂತರ ಸೇರಿದಂತೆ ಆನೆ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ತಜ್ಞರ ಅಭಿಪ್ರಾಯ ಪಡೆದು, ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಮತ್ತು ಕಾಫಿ ಬೆಳೆಗಾರ ಅದ್ಧೂರಿ ಕುಮಾರ್, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಬಿ.ಡಿ ಚಂದ್ರೇಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.