ಜಿಲ್ಲೆಯಲ್ಲಿ ಬೇಸಿಗೆ ಅವಧಿಯಲ್ಲಿ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುತ್ತಿದ್ದು, ಈಗಾಗಲೇ ಗ್ರಾಪಂ, ತಾಪಂಯಿಂದ ಖಾಸಗಿ ಬೋರ್‌ವೆಲ್, ಕೊಳವೆ ಬಾವಿ ಹಾಗೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಕಾರವಾರ
ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ಮರುಕಳಿಸುವ ನಿಶ್ಚಿತ ಗ್ರಾಮಗಳನ್ನು ಗುರುತಿಸಿ, ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಲು ಜೆಜೆಎಂ 2 ಹಂತದಲ್ಲಿ ಶಾಶ್ವತ ಪರಿಹಾರ ಒದಗಿಸಲು ಕ್ರಮವಹಿಸುವಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಲ ಜೀವನ ಮಿಷನ್ ಅಡಿ ಮಂಜೂರಾದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಬೇಸಿಗೆ ಅವಧಿಯಲ್ಲಿ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುತ್ತಿದ್ದು, ಈಗಾಗಲೇ ಗ್ರಾಪಂ, ತಾಪಂಯಿಂದ ಖಾಸಗಿ ಬೋರ್‌ವೆಲ್, ಕೊಳವೆ ಬಾವಿ ಹಾಗೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸಲಾಗುತ್ತಿದೆ. ಜೆಜೆಎಂ ಕಾಮಗಾರಿಗಳ ವಿಳಂಬದ ಕುರಿತು ದೂರುಗಳು ಬರುತ್ತಿದ್ದು, ಜೆಜೆಎಂ ಕಾಮಗಾರಿಗಳ ಕಳಪೆ ಕಾಮಗಾರಿ ಮತ್ತು ಗುಣಮಟ್ಟದಲ್ಲಿ ಲೋಪವಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.
ಜೆಜೆಎಂ ಕಾಮಗಾರಿಗಳು ವಿಳಂಬವಾಗುತ್ತಿರುವ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿದ ಅವರು, ಗುತ್ತಿಗೆದಾರರು ಕಾಮಗಾರಿ ಪ್ರಾರಂಭಿಸಲು ವಿನಾಕಾರಣ ವಿಳಂಬ ಮಾಡಿದ್ದಲ್ಲಿ ಅಂತಹ ಗುತ್ತಿಗೆದಾರರಿಗೆ ನೋಟಿಸ್ ನೀಡಿ, ಕಪ್ಪು ಪಟ್ಟಿಗೆ ಸೇರಿಸುವಂತೆ ಸೂಚಿಸಿದ ಅವರು, ಅಗತ್ಯವಿರುವ ಕಡೆ ಆದ್ಯತೆ ಮೇಲೆ ಕುಡಿಯುವ ನೀರಿನ ಸಂಪರ್ಕ ಒದಗಿಸವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಜೆಜೆಎಂ ಯೋಜನೆಯಡಿ 965 ಕಾಮಗಾರಿಗಳ ಪೈಕಿ ಪ್ರಥಮ ಹಂತದಲ್ಲಿ 256, 2ನೇ ಹಂತದಲ್ಲಿ 228, 3ನೇ ಹಂತದಲ್ಲಿ 26 ಹಾಗೂ 4 ಹಂತದಲ್ಲಿ 232 ಕಾಮಗಾರಿ ಮುಕ್ತಯವಾಗಿದೆ. ಪ್ರಥಮ ಹಂತದಲ್ಲಿ ಬಿಟ್ಟು ಹೋದ 250 ಗ್ರಾಮಗಳಿಗೆ ಜೆಜೆಎಂ 2 ಹಂತದಲ್ಲಿ ಮುಂದುವರಿಸಿಕೊಂಡು ಹೋಗಲು ಅನುಮತಿ ದೊರೆತ್ತಿದ್ದು, ಜೆಜೆಎಂ, ಬಹುಗ್ರಾಮ ಕುಡಿಯುವ ನೀರು ಮತ್ತು ಅಮೃತ ಯೋಜನೆಯ ಎಲ್ಲಾ ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವಲ್ಲಿ ಹಾಗೂ ನಿರ್ವಹಣೆಗೆ ಆದ್ಯತೆ ನೀಡಿದ್ದಲ್ಲಿ ಕುಡಿಯುವ ನೀರನ ಸಮಸ್ಯೆ ಬಗೆಹರಿಸಬಹುದಾಗಿದ್ದು, ಅಧಿಕಾರಿಗಳು ತಳ ಮಟ್ಟದಿಂದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿ, ಜನರಿಗೆ ಯೋಜನೆಯ ಸೌಲಭ್ಯಗಳು ದೊರೆಯುವಂತೆ ಮಾಡಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಮಾತನಾಡಿ, ಹಳಿಯಾಳ, ಮುಂಡಗೋಡನಲ್ಲಿ ಖಾಸಗಿ ಬೋರ್‌ವೇಲ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು, 31 ಗ್ರಾಮ ಪಂಚಾಯತನಲ್ಲಿ 68 ಕಡೆ ಹಾಗೂ ಮಂಕಿಯ 16 ವಾರ್ಡನಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.