ಹಾವೇರಿ: ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಜಿಲ್ಲಾ ಮಾನವ ಅಭಿವೃದ್ಧಿ ವರದಿ-2025, ಸಮಗ್ರ ಹಾಗೂ ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ-2031ರ ವರದಿ ತಯಾರಿಗೆ ಸಿದ್ಧತೆಗಳು ಪ್ರಾರಂಭವಾಗಿದೆ. ವರದಿ ತಯಾರಿಸಲು ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳು ನಿಖರವಾದ, ದತ್ತಾಂಶಗಳನ್ನು ನಿಗದಿಪಡಿಸಿದ ಕಾಲಮಿತಿಯೊಳಗೆ ಸಲ್ಲಿಸಬೇಕು ಎಂದು ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರುಚಿ ಬಿಂದಲ್ ಹೇಳಿದರು.ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಜಿಲ್ಲಾಮಾನವ ಅಭಿವೃದ್ಧಿ ವರದಿ-2025 ಹಾಗೂ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿ ಯೋಜನೆ 2031ರ ವರದಿಗಳನ್ನು ಸಿದ್ಧಪಡಿಸುವ ಕುರಿತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ನಡೆದ ಒಂದು ದಿನ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಜಿಲ್ಲಾ ಮಾನವ ಅಭಿವೃದ್ಧಿ ವರದಿಗೆ ಹೆಚ್ಚಿನ ಬೇಡಿಕೆ ಇದ್ದು, ಇದರಿಂದ ಭವಿಷ್ಯದ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಲಿದೆ. ಜಿಲ್ಲೆಯ ಅಭಿವೃದ್ಧಿಯ ನಿಖರ ದತ್ತಾಂಶಗಳನ್ನು ನೀಡಿದರೆ, ಜಿಲ್ಲೆಯ ಅಭಿವೃದ್ಧಿಗೆ ಯಾವುದು ಪೂರಕ ಮತ್ತು ಮಾರಕ ಎಂಬುದನ್ನು ತಿಳಿದುಕೊಳ್ಳುವುದು ತುಂಬಾನೇ ಮುಖ್ಯವಾಗಿದೆ. ಪೂರಕ ವಿರುವ ವಿಷಯದ ಕಡೆಗೆ ಹೆಚ್ಚು ಒತ್ತು ನೀಡಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ನಾವೆಲ್ಲರೂ ಮುಂದಾಗಬೇಕಿದೆ. ಹಾಗೆಯೇ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಹಾಗೂ ಆರೋಗ್ಯ ಮುಂತಾದವುಗಳು ಜನರ ಜೀವನ ಮಟ್ಟದ ಮೇಲೆ ಅಭಿವೃದ್ಧಿಯ ಅಂಶಗಳು ಅವಲಂಬಿತವಾಗಿರುತ್ತವೆ ಎಂದರು.ಮುಖ್ಯ ಯೋಜನಾಧಿಕಾರಿ ಎಚ್.ವೈ. ಮೀಸೆ ಮಾತನಾಡಿ, ಗ್ರೋಸ್ ಡಾಮೆಸ್ಟಿಕಲ್ ಪ್ರಾಡಕ್ಟ್ ಮೂಲಕ ದೇಶದ ಅಭಿವೃದ್ಧಿಯನ್ನು ಅಳೆಯಲು ಬಳಸುತ್ತಿದ್ದರು. ಜಾಗತಿಕ ಮಟ್ಟದಲ್ಲಿ ಯಾವ ದೇಶವು ಹೆಚ್ಚು ಅಭಿವೃದ್ಧಿ ಹೊಂದಿದೆ ಮತ್ತು ಆ ದೇಶ ಅಭಿವೃದ್ಧಿ ಹೊಂದಲು ಇರುವ ಮುಖ್ಯ ಕಾರಣಗಳೇನು, ಎಂಬುದನ್ನು ಅಭ್ಯಸಿಸಲು ಜಿಡಿಪಿ ಬಳಕೆ ಮಾಡುತ್ತಿದ್ದರು. ಕಾಲ ಕ್ರಮೇಣ ಜಿಡಿಪಿಯೊಂದಿಗೆ ಮಾನವ ಅಭಿವೃದ್ಧಿ ಅನುಸೂಚಿಯನ್ನು ಕೂಡ ಬಳಸಲು ವಿಶ್ವಸಂಸ್ಥೆ ಮುಂದೆ ಬಂದಿತು. ಇದರಿಂದ ಇನ್ನೂ ನಿಖರವಾಗಿ ಎಲ್ಲ ದೇಶಗಳ ಅಭಿವೃದ್ಧಿಯನ್ನು ಕಂಡುಕೊಳ್ಳಲು ಸಹಾಯಕಾರಿಯಾಗಲಿದೆ ಎಂಬವುದನ್ನು ಮನಗಂಡು ಹೆಚ್‌ಡಿಐ ಬಳಕೆ ಮಾಡಲು ಕ್ರಮ ವಹಿಸಿತು ಎಂದರು.ಜಿಲ್ಲೆಯ ಸಾಮಾಜಿಕ, ಶಿಕ್ಷಣ, ಆರೋಗ್ಯ ಪೋಷಣಾ ಸ್ಥಿತಿ, ಮೂಲಸೌಕರ್ಯ ಹೀಗೆ ವಿವಿಧ ಮಾನವ ಅಭಿವೃದ್ಧಿ ಸೂಚ್ಯಂಕಗಳ ಆಧಾರದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಸಾಧಿಸುವುದು,ಈ ವರದಿಗಳ ಪ್ರಮುಖ ಗುರಿಯಾಗಿದೆ ಈ ನಿಟ್ಟಿನಲ್ಲಿ ಇಲಾಖಾಧಿಕಾರಿಗಳು ಮಾನವ ಅಭಿವೃದ್ಧಿ ಅನುಸೂಚಿ ತಯಾರಿಕೆಯ ಪ್ರಕ್ರಿಯೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಸಂಬಂಧಿಸಿದ ದಾಖಲೆಗಳನ್ನು ನಿಗದಿತ ಸಮಯದಲ್ಲಿ ಒದಗಿಸಬೇಕು. ನೀವುಗಳು ನೀಡುವ ದತ್ತಾಂಶಗಳ ಆಧಾರದ ಮೇಲೆ ಜಿಲ್ಲೆಯ ಅಭಿವೃದ್ಧಿ ನಿಂತಿರುತ್ತದೆ. ಹೀಗಾಗಿ ಇಲಾಖವಾರು ಮಾಹಿತಿ ನೀಡುವಾಗ ಜವಾಬ್ದಾರಿಯುತವಾಗಿ ಮಾಹಿತಿ ನೀಡಿ ಎಂದು ಸಲಹೆ. ನೀಡಿದರು.ಕಾರ್ಯಾಗಾರದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಸಂಪನ್ಮೂಲ ವ್ಯಕ್ತಿ ಡಾ. ಶಶಿಧರ್ ಹಾಗೂ ಹಾವೇರಿ ವಿಶ್ವ ವಿದ್ಯಾಲಯದ ಪ್ರೊ. ಎಸ್.ಟಿ. ಬಾಗಲಕೋಟ ಇವರು ಮಾನವ ಅಭಿವೃದ್ಧಿ ಅನುಸೂಚಿಯ ಕುರಿತು ವಿಶೇಷ ತರಬೇತಿ ನೀಡಿದರು. ಕಾರ್ಯಾಗಾರದಲ್ಲಿ ಯೋಜನಾ ಅಂದಾಜು ಮತ್ತು ಮೌಲ್ಯ ಮಾಪನಾಧಿಕಾರಿ ಕುಮಾರ ಮಣ್ಣವಡ್ಡರ ಜಿಲ್ಲಾ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಹಾಜರಿದ್ದರು.