ನಿಖರ ಮಾಹಿತಿ ನೀಡಿ ಸಮೀಕ್ಷೆಗೆ ಸಹಕರಿಸಿ

KannadaprabhaNewsNetwork | Published : May 6, 2025 12:17 AM

ಸಾರಾಂಶ

ಪರಿಶಿಷ್ಟ ಜಾತಿಯ ವಿವಿಧ ಉಪ ಜಾತಿಗಳ ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ದತ್ತಾಂಶ ಸಂಗ್ರಹಿಸಲು ಕೈಗೊಂಡಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ನಡೆಸಲಾಗುತ್ತಿದೆ.

ಕೊಪ್ಪಳ:

ಪರಿಶಿಷ್ಟ ಜಾತಿಯ ವಿವಿಧ ಉಪ ಜಾತಿಗಳ ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ದತ್ತಾಂಶ ಸಂಗ್ರಹಿಸಲು ಕೈಗೊಂಡಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗಾಗಿ ಗಣತಿದಾರರು ಮನೆಗೆ ಬಂದಾಗ ಸಹಕರಿಸಿ ನಿಖರ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ನಲಿನ ಅತುಲ್ ಸಾರ್ವಜನಿಕರಿಗೆ ಹೇಳಿದರು.

ನಗರದ 12ನೇ ವಾರ್ಡಿನ ಬಸವೇಶ್ವರ ನಗರದಲ್ಲಿ ಪೌರಕಾರ್ಮಿಕರಾದ ಶಾಂತ ದೊಡ್ಡಮನಿ ಹಾಗೂ ಸೌರಮ್ಮ ಭರಮಪ್ಪ ಮನೆಯಿಂದ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಮೊಬೈಲ್ ಆ್ಯಪ್ ಮೂಲಕ ಸೋಮವಾರ ಚಾಲನೆ ನೀಡಿ ಮಾತನಾಡಿದರು.

16 ಲಕ್ಷಕ್ಕಿಂತಲೂ ಹೆಚ್ಚಿನ ಜನ ಸಂಖ್ಯೆ ಜಿಲ್ಲೆಯಲ್ಲಿದೆ. ಪ್ರತಿಯೊಂದು ಮನೆಗೆ ತೆರಳಿ ಸಮೀಕ್ಷೆ ಮಾಡಬೇಕೆಂಬ ಸರ್ಕಾರವು ನಿರ್ದೇಶನ ಮಾಡಿದ್ದು, ಇಂದಿನಿಂದ ಈ ಸಮೀಕ್ಷೆ ಜಿಲ್ಲೆಯಲ್ಲಿ ಪ್ರಾರಂಭವಾಗಿದೆ. ಈ ಸಮೀಕ್ಷೆಯನ್ನು ಸಮರ್ಪಕವಾಗಿ ಕೈಗೊಳ್ಳಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿದ್ದು, ಸಮೀಕ್ಷೆಗಾಗಿ ಒಂದು ಮತಗಟ್ಟೆ ಒಬ್ಬರಂತೆ ಒಟ್ಟು 1315 ಗಣತಿದಾರರನ್ನು ಜಿಲ್ಲೆಯಲ್ಲಿ ನೇಮಕ ಮಾಡಲಾಗಿದೆ. ಸಮೀಕ್ಷೆಗೆ ಜಿಲ್ಲಾಮಟ್ಟದ ಮಾಸ್ಟರ್ ಟ್ರೈನರ್‌ ರಾಜ್ಯಮಟ್ಟದಲ್ಲಿ ತರಬೇತಿ ಪಡೆದಿದ್ದು, ತಾಲೂಕು ಮಟ್ಟದ ಮಾಸ್ಟರ್ ಟ್ರೈನರ್‌ಗಳಿಗೆ ಹಾಗೂ 250ರಿಂದ 300 ಶಿಕ್ಷಕರಿಗೆ ಗಣತಿದಾರರ ತರಬೇತಿ ನೀಡಲಾಗಿದ್ದು, ಈ ಸಮೀಕ್ಷೆಯನ್ನು ಆ್ಯಪ್ ಮೂಲಕ ನಡೆಸಲಾಗುತ್ತಿದೆ ಎಂದರು.

ಸಮೀಕ್ಷೆಯು ಮೇ 5ರಿಂದ 17ರ ವರೆಗೆ ಮೊದಲನೇ ಹಂತದಲ್ಲಿ ಮನೆ-ಮನೆಗೆ ಸಮೀಕ್ಷೆ ಹಾಗೂ ಮೇ 19ರಿಂದ 21ರ ವರೆಗೆ ಎರಡನೇ ಹಂತದಲ್ಲಿ ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಮತ್ತು ಮೇ 19ರಿಂದ 23ರ ವರೆಗೆ ಮೂರನೇ ಹಂತದಲ್ಲಿ ಆನ್‌ಲೈನ್ ಮೂಲಕ ಸ್ವಯಂ ಘೋಷಣೆಗೆ ಅವಕಾಶವಿದೆ. ಜಿಲ್ಲೆಯ ಪ್ರತಿಯೊಂದು ಮನೆಯ ಸಮೀಕ್ಷೆ ಮಾಡುವ ಗುರಿ ಹೊಂದಲಾಗಿದೆ. ಈ ಒಂದು ಸಮೀಕ್ಷೆಯಲ್ಲಿ ನಾವೂ ನಿಖರವಾದ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ಒಪ್ಪಿಸುತ್ತೇವೆ. ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಈ ಎರಡರಲ್ಲಿ ಯಾವುದಾದರು ಒಂದರ ಮುಖಾಂತರವೇ ಮಾಹಿತಿ ಸಂಗ್ರಹಿಸಲಾಗುತ್ತದೆ. ಜಿಲ್ಲೆಯ ಸಾರ್ವಜನಿಕರು ಸಮೀಕ್ಷೆಯ ಯಶಸ್ವಿಗೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಈ ವೇಳೆ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ, ತಹಸೀಲ್ದಾರ್‌ ವಿಠ್ಠಲ್ ಚೌಗಲಾ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಗಣತಿದಾರರಾದ ವಿರೂಪಾಕ್ಷಪ್ಪ ಬಾಗೋಡಿ, ಮಾಸ್ಟರ್ ಟ್ರೈನರ್ ಶರಣಪ್ಪ ಮಾಗಳದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಬಸವೇಶ್ವರ ನಗರದ ಸಾರ್ವಜನಿಕರು ಉಪಸ್ಥಿತರಿದ್ದರು.

Share this article