ಹಾವೇರಿ: ಪೋಷಣ ಅಭಿಯಾನ, ಬೇಟಿ ಬಚಾವೋ ಬೇಟಿ ಪಢಾವೋ ಅನುಷ್ಠಾನದ ನಂತರ ಜಿಲ್ಲೆಯಲ್ಲಿ ಲಿಂಗಾನುಪಾತ ಸುಧಾರಣೆ, ರಕ್ತ ಹೀನತೆ, ಅಪೌಷ್ಟಿಕತೆ ನಿವಾರಣೆ ಪ್ರಮಾಣದ ನಿಖರ ಅಂಕಿ-ಅಂಶಗಳು ಹಾಗೂ ಪ್ರತಿ ಮಗುವಿನ ಇತಿಹಾಸದ ಜತೆಗೆ ಲೈನ್‌ಲಿಸ್ಟ್ ಸಲ್ಲಿಸಲು ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಸೂಚನೆ ನೀಡಿದರು.
ಅಪೌಷ್ಟಿಕತೆಗೆ ಕಾರಣಗಳೇನು, ಕುಟುಂಬದ ಇತಿಹಾಸ, ಮಕ್ಕಳ ಆಹಾರ ಕ್ರಮಗಳೇನು, ನಿಖರವಾದ ಮಾಹಿತಿಯನ್ನು ತಾಲೂಕಾವಾರು ಹೊಂದಬೇಕು. ಮುಂದಿನ ಸಭೆಗಳಲ್ಲಿ ಅತ್ಯಂತ ವಾಸ್ತವ ನೆಲೆಯ ವಿಶ್ಲೇಷಣಾತ್ಮಕ ಮಾಹಿತಿ ಸಲ್ಲಿಸಬೇಕು ಎಂದರು.
೬ರಿಂದ ೫೯ ವರ್ಷದ ವಯೋಮಾನದವರು ಹೊಂದಿರುವ ರಕ್ತ ಹೀನತೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಸಮನ್ವಯದಿಂದ ಅಭಿಯಾನದ ಮಾದರಿಯಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಕಡಿಮೆ ತೂಕದ ಮಕ್ಕಳ ಜನನ ಕಡಿಮೆಗೊಳಿಸಲು ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮ ಆಯೋಜಿಸಿ, ತಾಯಂದಿರಿಗೆ ಅರಿವು ಮೂಡಿಸಬೇಕು ಎಂದು ನಿರ್ದೇಶನ ನೀಡಿದರು.ಪೌರಕಾರ್ಮಿಕರು ಹಾಗೂ ನರೇಗಾ ಕೆಲಸದಲ್ಲಿ ನಿರತರಾದವರಿಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಬೇಕು. ನರೇಗಾ ಸೈಟ್‌ನಲ್ಲೇ ರಕ್ತತಪಾಸಣೆ ಶಿಬಿರಗಳನ್ನು ಕೈಗೊಳ್ಳಬೇಕು. ರಕ್ತಹೀನತೆ ಕಂಡು ಬಂದವರ ಆಹಾರ ಕ್ರಮಗಳ ಕುರಿತಂತೆ ಮಾಹಿತಿ ಪಡೆಯಬೇಕು. ಸುಧಾರಣೆಗೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.
ಮಕ್ಕಳ ಸಹಾಯವಾಣಿ ೧೦೯೮ಕ್ಕೆ ಬಂದ ಕರೆಗಳ ವಿವರ ಪರಿಶೀಲಿಸಿದ ಅವರು, ಯಾವ ರೀತಿಯ ನೆರವು ಕೋರಿ ಸಹಾಯವಾಣಿಗೆ ಹೆಚ್ಚು ಕರೆಗಳು ಬರುತ್ತಿವೆ. ಕರೆಗಳ ಸ್ವೀಕರಿಸಿದ ನಂತರ ಸಿಬ್ಬಂದಿಗಳು ತಕ್ಷಣ ಸ್ಪಂದಿಸುವ ಜತೆಗೆ ಸಂಬಂಧಿಸಿದ ಇಲಾಖೆಗಳಿಗೆ ಮಾಹಿತಿ ನೀಡಬೇಕು. ಮಾಹಿತಿ ಪಡೆದ ಇಲಾಖಾವಾರು ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸಿ ಮುಂದಿನ ಸಭೆಗಳಿಗೆ ಕೈಗೊಂಡ ಕ್ರಮಗಳ ಕುರಿತಂತೆ ಅನುಪಾಲನಾ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.
ಅನುದಾನ ಮಾಹಿತಿ ನೀಡಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ವಿವಿಧ ನೆರವು ಯೋಜನೆಯಡಿ ಈವರೆಗೆ ಬಿಡುಗಡೆಯಾದ ಅನುದಾನ, ಬಳಕೆಯಾದ ಅನುದಾನ, ಅನುದಾನದ ಬೇಡಿಕೆ ಕುರಿತಂತೆ ವಿವರವಾದ ಮಾಹಿತಿ ಸಲ್ಲಿಸಬೇಕು. ಮಕ್ಕಳ ನೆರವಿಗೆ ಬಿಡುಗಡೆಯಾದ ಅನುದಾನ ಬಳಕೆಮಾಡಲು ನಿರ್ಲಕ್ಷ್ಯವಹಿಸಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಮಕ್ಕಳ ರಕ್ಷಣಾ ಘಟಕದಡಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಮೂಲ ಸೌಕರ್ಯ, ಪ್ರವೇಶ ಸಾಮರ್ಥ್ಯ, ಪ್ರಸ್ತುತ ಈ ಸಂಸ್ಥೆಗಳಲ್ಲಿ ಎಷ್ಟು ಮಕ್ಕಳು ರಕ್ಷಣೆಯಲ್ಲಿದ್ದಾರೆ, ಸಲಹಾ ಪೆಟ್ಟಿಗೆ, ಸಿಸಿ ಟಿವಿ ಅಳವಡಿಸಲಾಗಿದೆಯೇ, ಗೇಟ್ ರಿಜಸ್ಟರ್ ನಿರ್ವಹಿಸಲಾಗಿದೆ, ರಾತ್ರಿ ಸಿಬ್ಬಂದಿ ವಾಸ್ತವ್ಯ ಮಾಹಿತಿ ಕುರಿತಂತೆ ವಿವರವಾಗಿ ಪರಿಶೀಲನೆ ನಡೆಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಜಿಪಂ ಯೋಜನಾಧಿಕಾರಿ ಎಚ್.ವೈ,ಮೀಸೆ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಉಮೇಶಪ್ಪ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಜಯಾನಂದ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ನಿಲೇಶ, ಅಂಕಿಸಂಖ್ಯಾಧಿಕಾರಿ ಭುಜಂಗ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರವೀಣ, ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಎಚ್. ಮಜೀದ್ ಇದ್ದರು.