ಕುಷ್ಟಗಿ:
ಪಟ್ಟಣದ ಕೆಲ ವಾರ್ಡ್‌ಗಳಲ್ಲಿ ಅಳವಡಿಸಿರುವ ಟಿಸಿ, ವಿದ್ಯುತ್ ಕಂಬ ಶಿಥಿಲಾವಸ್ಥೆ ತಲುಪಿದ್ದು ಅವುಗಳನ್ನು ಬದಲಾಯಿಸಿ ಜನರಿಗೆ ಸಮರ್ಪಕ ವಿದ್ಯುತ್ ಸೌಲಭ್ಯ ಕಲ್ಪಿಸಬೇಕು ಎಂದು ಬಸವರಾಜ ಗಾಣಿಗೇರ ಪತ್ತಾಯಿಸಿದರು.ಪಟ್ಟಣದ ಜೆಸ್ಕಾಂ ಕಾರ್ಯಾಲಯದ ಎಇಇ ಕೆಂಚಪ್ಪ ಬಾವಿಮನಿ ಅವರಿಗೆ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿನ ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ಕುಂದು-ಕೊರತೆ ನಿವಾರಿಸುವಂತೆ ಪಟ್ಟಣದ ನಿವಾಸಿಗಳು ಸೇರಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿದರು.
ವಾರ್ಡ್ ನಂ.1ರ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಟಿಸಿಯಿಂದ ರೈಲ್ವೆ ನಿಲ್ದಾಣ ಮಾರ್ಗದ ಅಕ್ಕ-ಪಕ್ಕದಲ್ಲಿರುವ ಮನೆಗಳಿಗೆ ವಿದ್ಯುತ್ ಪೂರೈಕೆಯಾಗುತ್ತಿದೆ. ಆದರೆ, ಮಾರ್ಗ ಮಧ್ಯ ಇರುವ ವಾಣಿಜ್ಯ, ಕೈಗಾರಿಕೆ ಮತ್ತು ಉದ್ಯಮ ಹಾಗೂ ಮಳಿಗೆಗಳಿಗೆ ವಿದ್ಯುತ್ ಪೂರೈಕೆಯಿಂದ ಕಂದಕೂರ ರಸ್ತೆಯ ನಿವಾಸಿಗಳಿಗೆ ಸಮರ್ಪಕ ವಿದ್ಯುತ್ ಲಭ್ಯವಾಗುತ್ತಿಲ್ಲ. ಆದ್ದರಿಂದ ಹೊಸ ಟಿಸಿ ಅಳವಡಿಸಿ ವಿದ್ಯುತ್ ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದರು.ವಾರ್ಡ್ ನಂ. 3 ಬೆಳೆಯುತ್ತಿರುವ ಪ್ರದೇಶವಾಗಿದ್ದು ಈ ವಾರ್ಡ್ ವ್ಯಾಪ್ತಿಯಲ್ಲಿರುವ ಲೇಔಟ್‌ಗಳಲ್ಲಿ ಅನೇಕ ವರ್ಷಗಳ ಹಿಂದೆ ಅಳವಡಿಸಿರುವ ವಿದ್ಯುತ್ ಕಂಬ, ಟಿಸಿ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು ಈಗ ಸಾಮರ್ಥ್ಯಕ್ಕೆ ಅನುಗುಣವಾಗಿ ಉನ್ನತಿಕರಿಸಬೇಕಾಗಿದೆ. ತಂತಿಗಳು ಹಳೆಯದಾಗಿದ್ದು, ಪರಿವರ್ತನೆ ಮಾಡುವ ಅನಿವಾರ್ಯತೆ ಇದೆ. ಇಲ್ಲದಿದ್ದಲ್ಲಿ ಮಳೆ ಮತ್ತು ಗಾಳಿಗೆ ವಿದ್ಯುತ್ ಅವಘಡಗಳು ಸಂಭವಿಸಿ ಪ್ರಾಣಹಾನಿಯಾಗುವ ಆತಂಕ ನಿವಾಸಿಗಳಲ್ಲಿ ಹೆಚ್ಚಾಗಿದೆ ಎಂದರು.
ವಾರ್ಡ್ ನಂ.7ರಲ್ಲಿ ನಿವಾಸಿಗಳು ತಮ್ಮ ಮನೆ ನಿರ್ಮಿಸುವ ಸಂದರ್ಭದಲ್ಲಿ ಸ್ವಂತ ಖರ್ಚಿನಲ್ಲಿ ಕಂಬ ತಂತಿ ಹಾಕಿಕೊಂಡಿದ್ದಾರೆ. ಆದರೆ ಕಳೆದ 3-4 ವರ್ಷಗಳಿಂದ ವಿದ್ಯುತ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿ ಟಿವಿ, ಫ್ರೀಡ್ಜ್, ಎಸಿ ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ಹಾನಿಗಿಡಾಗುತ್ತಿವೆ. 3 ಫೇಸ್ ತಂತಿ ಮತ್ತು ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದ ಕಾರಣ ಬೋರ್‌ವೆಲ್‌ಗಳಿಂದ ನೀರು ಮೇಲಕ್ಕೆ ಎತ್ತುತ್ತಿಲ್ಲ. ಪುರಸಭೆಯಿಂದ ಕುಡಿಯುವ ನೀರು ಪೂರೈಕೆ ಸಂಪರ್ಕವಿಲ್ಲದೇ ನಿವಾಸಿಗಳು ನಿತ್ಯ ಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಜೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕ್ರಮಕೈಗೊಳ್ಳದೆ ಇದ್ದರೆ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಮನವಿ ಸ್ವೀಕರಿಸಿದ ಜೆಸ್ಕಾಂ ಎಇಇ ಕೆಂಚಪ್ಪ ಬಾವಿಮನಿ, ಅನುದಾನದ ಕೊರತೆಯಿಂದ ಕೆಲ ಕಾಮಗಾರಿಗಳನ್ನು ನಿರ್ವಹಿಸಿಲ್ಲ. ಈಗಾಗಲೇ ಪಟ್ಟಣದಾದ್ಯಂತ ಸಮರ್ಪಕ ವಿದ್ಯುತ್ ಸಂಪರ್ಕಕ್ಕೆ ಇರುವ ಕಡೆ ರೀ ಕಂಡಕ್ಟರ್ ವಿಥ್ ಫೇಸ್ ಕನ್ವರ್ಟ್, ಟಿಸಿ ಉನ್ನತೀಕರಣ ಅಭಿವೃದ್ಧಿ ಕಾಮಗಾರಿಗಳ ಅಂದಾಜು ಪತ್ರಿಕೆ ತಯಾರಿಸಿ ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಬೇಡಿಕೆಗೆ ಅನುಸಾರ ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಈ ವೇಳೆ ಜೆಸ್ಕಾಂ ಅಧಿಕಾರಿ ನಿತ್ಯಾನಂದ, ಕಿರಣ ಜ್ಯೋತಿ, ರಾಮಣ್ಣ ಭಜೇಂತ್ರಿ, ಭೀಮವ್ವ, ಮಂಜಪ್ಪ, ಬಸವರಾಜ, ದುರಗಪ್ಪ, ರೇಣಮ್ಮ, ಶರಣಪ್ಪ ಇದ್ದರು.