ಅಂಗನವಾಡಿಗಳಿಗೆ ಸಕಲ ಸೌಕರ್ಯ ಒದಗಿಸಿ, ಗೌರವಧನ ನೀಡಿ

KannadaprabhaNewsNetwork | Published : Aug 1, 2024 1:58 AM

ಸಾರಾಂಶ

ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಲು, ಸೊಳ್ಳೆ ಪರದೆ, ಗುಡ್‌ ನೈಯ್ಟ್‌ ಕಾಯ್ಲ್‌ ಖರೀದಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂಚಿಸಿದ್ದಾರೆ. ಇಂಥ ವ್ಯವಸ್ಥೆಗಳನ್ನೆಲ್ಲ ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆಯಿಂದ ನೆರವೇರಿಸಬೇಕು. ಅಂಗನವಾಡಿಗಳಿಗೆ ಸಕಲ ವಸ್ತುಗಳ ಪೂರೈಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ಪ್ರತಿಭಟಿಸಲಾಯಿತು.

- ಜಿಪಂ ಕಚೇರಿ ಎದುರು ಸಂಘಟನೆ ಮುಖಂಡರು, ಪದಾಧಿಕಾರಿಗಳ ನೇತೃತ್ವದಲ್ಲಿ ಅಂಗನವಾಡಿ ಸಿಬ್ಬಂದಿ ಪ್ರತಿಭಟನೆ - - -

* ಪ್ರಮುಖ ಬೇಡಿಕೆಗಳೇನು? - ಅಂಗನವಾಡಿ ನೌಕರರಿಗೆ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಗೌರವಧನ ಪಾವತಿಯಾಗಬೇಕು

- ಮಕ್ಕಳಿಗೆ ನೀಡಿದ್ದ ಜಮಖಾನಗಳು, ತಟ್ಟೆ-ಲೋಟಗಳೆಲ್ಲ ತುಂಬಾ ಹಳೇಯವಾಗಿದ್ದು, ಹೊಸದಾಗಿ ನೀಡಬೇಕು

- ಅಂಗವಾಗಿ ಸಿಬ್ಬಂದಿ ಸೀರೆಗಳು ಧರಿಸಲು ಯೋಗ್ಯವಾಗಿಲ್ಲ, ಹಳೇ ಆಟಿಕೆಗಳೂ ಮಕ್ಕಳಿಗೆ ಸೂಕ್ತವಾಗಿಲ್ಲ

- ಅಡುಗೆ ಅನಿಲ ಸಿಲಿಂಡರ್, ಗ್ಯಾಸ್ ಒಲೆ ಜೊತೆಗೆ ರೆಗ್ಯುಲೇಟರ್ ಸಹ ಹಾಳಾಗಿದ್ದು ಹೊಸದಾಗಿ ಪೂರೈಸಬೇಕು

- ಅಂಗನವಾಡಿ ಕೇಂದ್ರಗಳ ಬಾಡಿಗೆ ಹಣ 7 ತಿಂಗಳಿನಿಂದಲೂ ನೀಡಿಲ್ಲ, ಮೊಟ್ಟೆಗಳ ಹಣವು ಖಾತೆಗೆ ಹಾಕಿಲ್ಲ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಲು, ಸೊಳ್ಳೆ ಪರದೆ, ಗುಡ್‌ ನೈಯ್ಟ್‌ ಕಾಯ್ಲ್‌ ಖರೀದಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂಚಿಸಿದ್ದಾರೆ. ಇಂಥ ವ್ಯವಸ್ಥೆಗಳನ್ನೆಲ್ಲ ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆಯಿಂದ ನೆರವೇರಿಸಬೇಕು. ಅಂಗನವಾಡಿಗಳಿಗೆ ಸಕಲ ವಸ್ತುಗಳ ಪೂರೈಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ಪ್ರತಿಭಟಿಸಲಾಯಿತು.

ನಗರದ ಜಿಪಂ ಕಚೇರಿ ಮುಂಭಾಗದಲ್ಲಿ ಸಂಘಟನೆ ಮುಖಂಡರು, ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟಿಸಿದ ಅಂಗನವಾಡಿ ನೌಕರರು, ಜಿಪಂ ಉಪ ಕಾರ್ಯದರ್ಶಿ ಕೃಷ್ಣಾ ನಾಯ್ಕ ಮುಖಾಂತರ ಸಿಇಒ ಅವರಿಗೆ ಮನವಿ ಅರ್ಪಿಸಿದರು.

ಸಂಘಟನೆ ಮುಖಂಡರು ಮಾತನಾಡಿ, ಅಂಗನವಾಡಿ ಕೇಂದ್ರದ ಹೊರಗೆ ಮತ್ತು ಒಳಗಡೆ ಸ್ವಚ್ಛತೆಗೊಳಿಸಲು ಕಾರ್ಯಕರ್ತೆಯರಿಗೆ ಜಿಪಂ ಸಿಇಒ ಸೂಚಿಸಿದ್ದಾರೆ. ಆದರೆ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಆಯಾ ವಾರ್ಡ್‌ಗಳ ಸದಸ್ಯರಿಗೆ ಇಂತಹ ಕೆಲಸಕ್ಕೆ ಸೂಚಿಸಬೇಕು. ಸೊಳ್ಳೆ ಪರದೆ ಮತ್ತು ಗುಡ್‌ ನೈಟ್‌ ಕಾಯ್ಲ್‌ ಖರೀದಿಸಲು ಅಂಗನವಾಡಿ ನೌಕರರಿಗೆ ಹೇಳಿದ್ದಾರೆ. ಇದರ ಬದಲು, ಆರೋಗ್ಯ ಇಲಾಖೆಯಿಂದಲೇ ಅವುಗಳ ವ್ಯವಸ್ಥೆ ಮಾಡಿಸಲಿ ಎಂದರು.

ಕೇಂದ್ರಗಳಲ್ಲಿ ಮಕ್ಕಳು ಕುಳಿತುಕೊಳ್ಳುವ ಜಮಖಾನಗಳೆಲ್ಲಾ ಹಳೆಯದಾಗಿವೆ. ಕೆಲವು ಕೇಂದ್ರಗಳಲ್ಲಿ ಹಳೆಯ ಜಮಖಾನಗಳು ಸಹ ಇಲ್ಲ. ಜಮಖಾನಗಳನ್ನು ಒದಗಿಸಿ ವರ್ಷಗಳೇ ಕಳೆದಿವೆ. ಹೊಸದಾಗಿ ಜಮಖಾನ ಕೊಡಿಸಬೇಕು. ಮಕ್ಕಳಿಗೆ ಆಟಿಕೆ ಸಾಮಾನುಗಳನ್ನು ನೀಡಿ ವರ್ಷಗಳೇ ಆಗಿವೆ. ಹೊಸ ಆಟಿಕೆಗಳನ್ನು ಕೊಡಿಸಬೇಕು. ಸಿಬ್ಬಂದಿ ಉಪಯೋಗಿಸುವ ಸೀರೆಗಳು ಯೋಗ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಬದಲಾವಣೆ ಕ್ರಮ ಕೈಗೊಳ್ಳಬೇಕು ಎಂದರು.

ಅಂಗನವಾಡಿ ಕೇಂದ್ರಗಳ ತಟ್ಟೆ, ಲೋಟಗಳು ಮತ್ತು ಪಾತ್ರೆಗಳು ಇತರೆ ಪರಿಕರಗಳು ತುಂಬಾ ಹಳೆಯದಾಗಿವೆ. ಉಪಯೋಗಿಸುವುದಕ್ಕೂ ಯೋಗ್ಯವಾಗಿಲ್ಲ. ಹೊಸದಾಗಿ ಅವುಗಳನ್ನೆಲ್ಲಾ ಕೊಡಿಸಬೇಕು. ಅಡುಗೆ ಅನಿಲ ಸಿಲಿಂಡರ್ ಮತ್ತು ಗ್ಯಾಸ್ ಒಲೆ ಜೊತೆಗೆ ರೆಗ್ಯುಲೇಟರ್ ಸಹ ಹಾಳಾಗಿವೆ. ಅವುಗಳನ್ನು ಹೊಸದಾಗಿ ಪೂರೈಸಬೇಕು. ಅಂಗನವಾಡಿ ನೌಕರರಿಗೆ ಸರಿಯಾಗಿ ಗೌರವಧನವು ತಿಂಗಳಿಗೆ ಸರಿಯಾಗಿ ಖಾತೆಗೆ ಬರುತ್ತಿಲ್ಲ. ಮೊದಲು ಸರಿಯಾಗಿ ಗೌರವಧನ ಕೊಡಿಸಬೇಕು ಎಂದು ಆಗ್ರಹಿಸಿದರು.

ಮೊಟ್ಟೆಯ ಹಣವು ಸಹ ಖಾತೆಗೆ ಬರುತ್ತಿಲ್ಲ. ಅಂಗನವಾಡಿ ಕೇಂದ್ರಗಳ ಬಾಡಿಗೆ ಹಣ ಕಳೆದ 7 ತಿಂಗಳಿನಿಂದಲೂ ನೀಡಿಲ್ಲ. ಇದನ್ನೆಲ್ಲಾ ಕೇಳಿದರೆ ಅಧಿಕಾರಿಗಳು ಬಜೆಟ್ ಇಲ್ಲ, ಅನುದಾನ ಬಂದಿಲ್ಲವೆಂಬ ಸಬೂಬು ಹೇಳುತ್ತಾರೆ. ದಾಖಲಾತಿಗಳನ್ನು ಇಟ್ಟುಕೊಳ್ಳಲು ಗಾಡ್ರೆಜ್ ಬೀರು ಒದಗಿಸಬೇಕು. ಮಕ್ಕಳಿಗೆ ಆರೋಗ್ಯಕ್ಕಾಗಿ ಪೌಷ್ಟಿಕಾಂಶದ ಆಹಾರ ಪದಾರ್ಥಗಳನ್ನು ಪೂರೈಸಬೇಕು. ಆರೋಗ್ಯ ಕುಟುಂಬ ಸಮೀಕ್ಷೆ ಒಂದು ವರ್ಷವಾದರೂ, ಗ್ಯಾರಂಟಿ ಯೋಜನೆಗಳ ಸರ್ವೇ ಮಾಡಿ 6 ತಿಂಗಳಾದರೂ ಇಲ್ಲಿವರೆಗೂ ಹಣ ನೀಡಿಲ್ಲ. ಅದರ ಹಣ ಕೊಡಿಸಬೇಕು. ಶೀಘ್ರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಉಪನಿರ್ದೇಶಕರ ಕಚೇರಿಯಿಂದ ಬಂದ ಸಂದೇಶಗಳನ್ನು ಸಿಡಿಪಿಒ ಅವರು ನೋಡಿ, ಸೂಪರ್ ವೈಸರ್ ಗ್ರೂಪ್‌ಗೆ ಹಾಕುತ್ತಾರೆ. ಮೊದಲು ಇಂತಹ ವ್ಯವಸ್ಥೆ ತಪ್ಪಬೇಕು. ಸೂಪರ್ ವೈಸರ್‌ಗಳು ಅಂಗನವಾಡಿ ಕಾರ್ಯಕರ್ತೆಯರಿಗೆ ಹೇರುವ ಕೆಲಸದ ಭಾರ ತಪ್ಪಿಸಬೇಕು. ವ್ಯವಸ್ಥಿತ ವಸ್ತುಗಳನ್ನು ಪ್ರತಿ ಅಂಗನವಾಡಿ ಕೇಂದ್ರಗಳಿಗೆ ತಲುಪಿಸಬೇಕು. ಅಂಗನವಾಡಿ ಸರಬರಾಜಾಗುವ ಪಡಿತರಗಳು ಅಂಗನವಾಡಿ ಕೇಂದ್ರಕ್ಕೆ ನಿಯಮಿತವಾಗಿ, ಸಮಯಕ್ಕೆ ಸರಿಯಾಗಿ ತಲುಪಿಸಬೇಕು. ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ನೀಡಲು ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಿ ಜಿಪಂ ಉಪ ಕಾರ್ಯದರ್ಶಿ ಕೃಷ್ಣಾ ನಾಯ್ಕ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಘಟನೆ ಮುಖಂಡರಾದ ಆವರಗೆರೆ ಚಂದ್ರು, ಆವರಗೆರೆ ವಾಸು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಮಲ್ಲಮ್ಮ, ತಾಲೂಕು ಅಧ್ಯಕ್ಷೆ ಕೆ.ಸಿ.ನಿರ್ಮಲ, ಪ್ರಧಾನ ಕಾರ್ಯದರ್ಶಿ ಗೀತಾ, ಉಪಾಧ್ಯಕ್ಷೆ ಸುಧಾ, ಎಚ್.ಜಿ. ಮಂಜುಳ, ಸರ್ವಮ್ಮ, ರೇಣುಕಾ, ಕುಸುಮಾ ಇತರರು ಇದ್ದರು.

- - - -31ಕೆಡಿವಿಜಿ1, 2:

ದಾವಣಗೆರೆಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟಿಸಿದ ಅಂಗನವಾಡಿ ನೌಕರರು ಜಿಪಂ ಉಪ ಕಾರ್ಯದರ್ಶಿಗೆ ಮನವಿ ಅರ್ಪಿಸಿದರು.

Share this article