ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಶಿವಾಜಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಎತ್ತುಗಳೊಂದಿಗೆ ಮೆರವಣಿಗೆ ನಡೆಸಿದ ರೈತರು, ಬಸವ ತತ್ವ ಹಾಗೂ ಸಂವಿಧಾನದ ಉಳಿವಿಗಾಗಿ ಎತ್ತಿನ ಕೃಷಿಯನ್ನು ಸಂರಕ್ಷಿಸಬೇಕು ಎಂಬ ಘೋಷಣೆಗಳನ್ನು ಕೂಗಿದರು.ನಂದಿ ಕೂಗು ಅಭಿಯಾನ ಹಾಗೂ ನಂದಿ ಸೇನೆ ಸಂಘಟನೆ ಸಂಸ್ಥಾಪಕ ಬಸವರಾಜ ಬಿರಾದಾರ ಮಾತನಾಡಿ, ವಿಶ್ವಗುರು ಬಸವಣ್ಣನವರು ಪ್ರತಿಪಾದಿಸಿದ ಬಸವ ತತ್ವ ಮತ್ತು ದೇಶದ ಸಂವಿಧಾನದ ಭವಿಷ್ಯ ಬಯಲು ಸೀಮೆಯ ಎತ್ತಿನ ಕೃಷಿಕರ ಭವಿಷ್ಯದ ಮೇಲೆ ನಿಂತಿದೆ. ಎತ್ತಿನ ಕೃಷಿ ಕಾಯಕ ಮತ್ತು ದಾಸೋಹದ ಸಂಸ್ಕೃತಿಯನ್ನು ಉಳಿಸುವ ಮಹತ್ವದ ಕೊಂಡಿಯಾಗಿದೆ. ಆದ್ದರಿಂದ ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ₹11 ಸಾವಿರ ಪ್ರೋತ್ಸಾಹಧನ ನೀಡುವ ಯೋಜನೆಯನ್ನು ಸರ್ಕಾರ ಕೂಡಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.ಈ ಕುರಿತು ಹಲವು ಗ್ರಾಮಗಳ ರೈತರೊಂದಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಯೋಜನೆ ಘೋಷಿಸುವಂತೆ ಆಗ್ರಹಿಸಲಾಗಿದೆ. ಆದರೆ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ. ಎತ್ತುಗಳ ಶಕ್ತಿಯ ಮೂಲಕ ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಉಳಿಸುವುದರ ಜೊತೆಗೆ ಪಂಚಮಹಾಭೂತಗಳ ಸಂರಕ್ಷಣೆ ಸಾಧ್ಯ. ಜೋಡೆತ್ತಿನ ಕೃಷಿ ಸಂಸ್ಕೃತಿಗೆ ಪೂರಕವಾದ ಕಾನೂನು ಜಾರಿಗೊಳಿಸುವ ಮೂಲಕ ಬಸವ ತತ್ವ ಹಾಗೂ ಸಂವಿಧಾನದ ಆಶಯಗಳನ್ನು ಸಂರಕ್ಷಿಸಬೇಕು ಎಂದರು.ನಂದಿ ಸೇನೆ ಸಂಘಟಕ ದಶರಥಸಿಂಗ್ ರಜಪೂತ ಮಾತನಾಡಿ, ನಂದಿ ಕೃಷಿ ಸಂಸ್ಕೃತಿಯ ಪುನಶ್ಚೇತನಕ್ಕಾಗಿ ರಾಜ್ಯ ಬಜೆಟ್‌ನ ಶೇ.10ರಷ್ಟು ಅನುದಾನ ಮೀಸಲಿಡುವ ಕಾನೂನು ಜಾರಿಗೊಳಿಸಬೇಕು. ಜೋಡೆತ್ತಿನ ಕೃಷಿಕರಿಗೆ ಮಾಸಿಕ ₹11 ಸಾವಿರ ಪ್ರೋತ್ಸಾಹಧನ ನೀಡುವುದರ ಜೊತೆಗೆ ನಂದಿ ವಿದ್ಯುತ್, ಗ್ಯಾಸ್, ಅಡುಗೆ ಎಣ್ಣೆ, ಗೊಬ್ಬರ, ಔಷಧಿ ಹಾಗೂ ಆಹಾರ ಉತ್ಪಾದನೆಗೆ ಉತ್ತೇಜನ ನೀಡುವ ಯೋಜನೆಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು. ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ನಂದಿ ಕೃಷಿ ವಿಷಯ ಮುನ್ನೆಲೆಗೆ ಬಂದಿದೆ. ಮುಂದಿನ ಹತ್ತು ವರ್ಷಗಳಲ್ಲಿ ನಂದಿ ಸಂಪತ್ತನ್ನು ಹತ್ತು ಪಟ್ಟು ಹೆಚ್ಚಿಸುವ ಗುರಿಯೊಂದಿಗೆ ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನ ಕಾನೂನನ್ನು ಸಿದ್ಧೇಶ್ವರ ಶ್ರೀಗಳ ಹೆಸರಿನಲ್ಲಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.ನಂದಿ ಸೇನೆ ಸಂಘಟಕ ರಾಜೇಂದ್ರ ಮೊರೆ ಮಾತನಾಡಿ, ಬರಗಾಲದ ಸಂದರ್ಭದಲ್ಲಿ ಮೇವು ಮತ್ತು ನೀರಿನ ಕೊರತೆಯಿಂದ ಎತ್ತುಗಳು ಕಸಾಯಿಖಾನೆ ಸೇರುವುದನ್ನು ತಡೆಯಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಎತ್ತುಗಳನ್ನು ಸರ್ಕಾರಿ ಕಚೇರಿಗಳಿಗೆ ತಂದು ಕಟ್ಟುವ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ನಂದಿ ಸೇನೆಯ ಪ್ರಮುಖ ಸಂಘಟಕರಾದ ಬಸವರಾಜ ಜಮಖಂಡಿ, ರೇವಣಸಿದ್ಧ ಕನಮಡಿ, ಸಿದ್ಧನಗೌಡ ಪಾಟೀಲ, ಮಹಾದೇವ ಕರ್ಲಮಳ, ಅನಂತ ಆಸಂಗಿ, ನೀಲಕಂಠ ಕನಮಡಿ, ಶ್ರೀಶೈಲ ಉಟಗಿ, ಭೀಮು ಪೋಳ, ನಿಂಗನಗೌಡ ಬಿರಾದಾರ, ಸಿದ್ಧು ಹಾಲಳ್ಳಿ, ಶಿವು ತೇಲಿ ಪಾಲ್ಗೊಂಡಿದ್ದರು.